ಸೈದ್ನಾಯಾ ಪ್ರಿಸನ್ ಗೇಟ್ಸ್ ತೆರೆದ ಬಂಡುಕೋರರು
ಸಿರಿಯಾ: ಸಿರಿಯಾದಲ್ಲಿ ಎರಡು ದಿನಗಳ ಬಂಡುಕೋರರ ದಾಳಿಯ ನಂತರ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ಆಡಳಿತ ಅಂತ್ಯಗೊಂಡಿದೆ ಎಂದು ಸಿರಿಯಾದ ಸೇನಾ ಕಮಾಂಡ್ ತನ್ನ ಅಧಿಕಾರಿಗಳಿಗೆ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸಿರಿಯನ್ ಬಂಡುಕೋರರು ಡಮಾಸ್ಕಸ್ “ಈಗ ಅಸ್ಸಾದ್ ಮುಕ್ತವಾಗಿದೆ” ಎಂದು ಹೇಳಿದ್ದಾರೆ.
ಅಸ್ಸಾದ್ ಪರಾರಿಯಾಗಿದ್ದಾರೆ ಎಂಬ ವದಂತಿಗಳಿವೆ.
ಇಸ್ಲಾಮಿ ಉಗ್ರಗಾಮಿ ಸಂಘಟನೆಯಾದ ಹಯಾತ್ ತಹ್ರೀರ್ ಅಲ್-ಶಾಮ್‌ಗೆ ಸೇರಿದ ಬಂಡಾಯ ಹೋರಾಟಗಾರರು ಗುರುವಾರದಂದು ಸಿರಿಯಾದ ಹಮಾ ನಗರದ ಮೇಲೆ ನಿಯಂತ್ರಣ ಸಾಧಿಸಿದ್ದರು ಮತ್ತು ಸಿರಿಯಾದ ರಾಜಧಾನಿ ಡಮಾಸ್ಕಸ್ ಮಾರ್ಗವಾಗಿ ಹೋಮ್ಸ್‌ಗೆ ಸಮೀಪಿಸಿದ್ದರು. ಪ್ರಸ್ತುತ ಬಶರ್ ಅಲ್-ಅಸ್ಸಾದ್ ಸರ್ಕಾರವನ್ನು ಉರುಳಿಸಿ ಹೊಸ ಸರ್ಕಾರವನ್ನು ಸ್ಥಾಪಿಸಲು ಬಯಸುತ್ತೇವೆ ಎಂದು ಬಂಡುಕೋರ ಗುಂಪಿನ ನಾಯಕ ಅಬು ಮೊಹಮ್ಮದ್ ಅಲ್-ಜವ್ಲಾನಿ ಹೇಳಿದ್ದಾನೆ. ಕಳೆದ ವಾರ, ಬಂಡುಕೋರ ಪಡೆಗಳು ಸಿರಿಯಾದ ಎರಡನೇ ಅತಿದೊಡ್ಡ ನಗರವಾದ ಅಲೆಪ್ಪೊವನ್ನು ವಶಪಡಿಸಿಕೊಂಡಿದ್ದವು.
ಡಮಾಸ್ಕಸ್ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಳಾಂತರಿಸಲಾಗಿದೆ ಮತ್ತು ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರಿ ರೇಡಿಯೊ ಸ್ಟೇಷನ್ ಶಾಮ್ ಎಫ್‌ಎಂ ತಿಳಿಸಿದೆ.
ಬಂಡುಕೋರರು ಡಮಾಸ್ಕಸ್‌ನ ಹೊರಭಾಗ ಸೈದ್ನಾಯಾ ಮಿಲಿಟರಿ ಜೈಲಿಗೆ ನುಗ್ಗಿದರು ಮತ್ತು ಕೈದಿಗಳಿಗೆ ಅದರ ಬಾಗಿಲುಗಳನ್ನು ತೆರೆದಿದ್ದಾರೆ.
ಹೋಮ್ಸ್‌ನ ಸಾವಿರಾರು ನಿವಾಸಿಗಳು ಈಗಾಗಲೇ ನಗರದಿಂದ ಪಲಾಯನ ಮಾಡಿ, ಸಿರಿಯಾ ಅಧ್ಯಕ್ಷ ಅಲ್-ಅಸ್ಸಾದ್ ಅವರು ಇನ್ನೂ ನಿಯಂತ್ರಣ ಹೊಂದಿರುವ ಪಶ್ಚಿಮ ಕರಾವಳಿಗೆ ತೆರಳಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ. ನವೆಂಬರ್ 27 ರಿಂದ ಸಿರಿಯಾದಾದ್ಯಂತ ಕನಿಷ್ಠ 3,70,000 ಜನರನ್ನು ಈ ಸಂಘರ್ಷದಿಂದಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಅವರ ಹೇಳಿಕೆಯನ್ನು ಜಜೀರಾ ವರದಿ ಮಾಡಿದೆ. ನಿರಾಶ್ರಿತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಅದು ಹೇಳಿದೆ.
ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್‌ಗೆ ರಷ್ಯಾ ಮಿಲಿಟರಿ ಬೆಂಬಲವನ್ನು ನೀಡಿದ್ದರೂ ಸಹ ಡಮಾಸ್ಕಸ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯು ಸಿರಿಯಾವನ್ನು ತೊರೆಯುವಂತೆ ರಷ್ಯಾದ ಪ್ರಜೆಗಳಿಗೆ ಸೂಚನೆ ನೀಡಿದೆ.
ಡಿಸೆಂಬರ್ 6 ರಂದು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಿರಿಯಾದಲ್ಲಿರುವ ಭಾರತೀಯರಿಗೆ ಪ್ರಯಾಣದ ಸಲಹೆ ನೀಡಿತು.
ಡಿಸೆಂಬರ್ 6ರಂದು ಭಾರತೀಯ ವಿದೇಶಾಂಗ ಸಚಿವಾಲಯವು ಭಾರತೀಯ ಪ್ರಜೆಗಳಿಗೆ ಮುಂದಿನ ಅಧಿಸೂಚನೆಯ ತನಕ ಸಿರಿಯಾಕ್ಕೆ ಪ್ರಯಾಣಿಸದಂತೆ ಸಲಹೆ ನೀಡಿತು. ಪ್ರಸ್ತುತ ಸಿರಿಯಾದಲ್ಲಿರುವ ಭಾರತೀಯರಿಗೆ ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಅದರ ತುರ್ತು ಸಹಾಯವಾಣಿ ಸಂಖ್ಯೆ +963 993385973 (ವಾಟ್ಸಾಪ್‌ನಲ್ಲಿಯೂ ಸಹ) ಮತ್ತು ಇಮೇಲ್ ಐಡಿ ನವೀಕರಣಗಳಿಗಾಗಿ ಸಂಪರ್ಕದಲ್ಲಿರಬೇಕು ಎಂದು ಅದು ಹೇಳಿದೆ.
ಸಾಧ್ಯವಿರುವವರು, ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಅದಷ್ಟು ಬೇಗ ಹೊರಡಲು ಸಲಹೆ ನೀಡಲಾಗಿದೆ ಮತ್ತು ಇತರರು ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲು ಮತ್ತು ಚಲನವಲನವನ್ನು ಕನಿಷ್ಠಕ್ಕೆ ನಿರ್ಬಂಧಿಸಲು ವಿನಂತಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.


