ವಿದೇಶಿಯರು ಮತ್ತು ವಲಸೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ವಹಿಸುವ ‘ವಲಸೆ ಮತ್ತು ವಿದೇಶಿಯರ ಮಸೂದೆ, 2025’ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ಒಪ್ಪಿಗೆ ನೀಡಿದ್ದು, ಅದು ಈಗ ಕಾನೂನಾಗುತ್ತಿದೆ.
ಈ ಶಾಸನವು ಏಪ್ರಿಲ್ 4, 2025 ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯಿತು; ನಂತರ ಅದನ್ನು ಗೆಜೆಟ್ ಅಧಿಸೂಚನೆಯ ಮೂಲಕ ತಿಳಿಸಲಾಯಿತು.
ಕಾನೂನಿನ ಪ್ರಕಾರ, ಇನ್ನು ಮುಂದೆ ಯಾರಾದರೂ ಭಾರತಕ್ಕೆ ಪ್ರವೇಶಿಸಲು ಅಥವಾ ದೇಶದಲ್ಲಿ ಉಳಿಯಲು ಅಥವಾ ನಿರ್ಗಮಿಸಲು ನಕಲಿ ಪಾಸ್‌ಪೋರ್ಟ್ ಅಥವಾ ವೀಸಾವನ್ನು ಬಳಸುತ್ತಿರುವುದು ಕಂಡುಬಂದರೆ, ಅವರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ.
ವಿದೇಶಿಯರು ಹೆಚ್ಚು ಕಾಲ ನೆಲೆಸಿರುವವರನ್ನು ಪತ್ತೆಹಚ್ಚಲು ಹೋಟೆಲ್‌ಗಳು, ವಿಶ್ವವಿದ್ಯಾಲಯಗಳು, ಇತರ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ವಿದೇಶಿಯರ ಬಗ್ಗೆ ಮಾಹಿತಿಯನ್ನು ಕಡ್ಡಾಯವಾಗಿ ವರದಿ ಮಾಡಲು ಶಾಸನವು ಅವಕಾಶ ನೀಡುತ್ತದೆ.
ಎಲ್ಲ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಮತ್ತು ಹಡಗುಗಳು ಭಾರತದ ಬಂದರು ಅಥವಾ ಸ್ಥಳದಲ್ಲಿ ನಾಗರಿಕ ಪ್ರಾಧಿಕಾರ ಅಥವಾ ವಲಸೆ ಅಧಿಕಾರಿಗೆ ಅಂತಹ ವಿಮಾನ, ಹಡಗು ಅಥವಾ ಇತರ ಸಾರಿಗೆ ವಿಧಾನದಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯ ಮುಂಗಡ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.
“ಯಾರು ಭಾರತಕ್ಕೆ ಪ್ರವೇಶಿಸಲು ಅಥವಾ ಭಾರತದಲ್ಲಿ ಉಳಿಯಲು ಅಥವಾ ನಿರ್ಗಮಿಸಲು ನಕಲಿ ಅಥವಾ ವಂಚನೆಯಿಂದ ಪಡೆದ ಪಾಸ್‌ಪೋರ್ಟ್ ಅಥವಾ ಇತರ ಪ್ರಯಾಣ ದಾಖಲೆ ಅಥವಾ ವೀಸಾವನ್ನು ತಿಳಿದೂ ಬಳಸಿದರೆ ಅಥವಾ ಪೂರೈಸಿದರೆ. ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ; ಆದರೆ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಮತ್ತು ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿಲ್ಲದ, ಹತ್ತು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಗುರಿಯಾಗುತ್ತಾರೆ” ಎಂದು ಕಾಯಿದೆ ಹೇಳುತ್ತದೆ.
ಕಾನೂನಿನ ನಿಬಂಧನೆಗಳು ಅಥವಾ ಅದರ ಅನುಸಾರವಾಗಿ ನೀಡಲಾದ ಯಾವುದೇ ನಿಯಮ ಅಥವಾ ಆದೇಶವನ್ನು ಉಲ್ಲಂಘಿಸಿ ಅಂತಹ ಪ್ರವೇಶಕ್ಕೆ ಅಗತ್ಯವಿರುವ ವೀಸಾ ಸೇರಿದಂತೆ, ಮಾನ್ಯ ಪಾಸ್‌ಪೋರ್ಟ್ ಅಥವಾ ಇತರ ಪ್ರಯಾಣ ದಾಖಲೆಯಿಲ್ಲದೆ ಭಾರತದ ಯಾವುದೇ ಪ್ರದೇಶಕ್ಕೆ ಪ್ರವೇಶಿಸುವ ಯಾವುದೇ ವಿದೇಶಿ, ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಜೈಲು ಶಿಕ್ಷೆ ಅಥವಾ ಐದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಕಾಯ್ದೆ ಹೇಳುತ್ತದೆ.
ಈ ಶಾಸನವು “ಯಾವುದೇ ವಿದೇಶಿಯರಿಂದ ಆಗಾಗ್ಗೆ ಭೇಟಿ ನೀಡಲ್ಪಡುವ” ಸ್ಥಳಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಮಾಲೀಕರು ತಮ್ಮ ಆವರಣವನ್ನು ನಿರ್ಭಂದಿಸಲು, ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಅದರ ಬಳಕೆಯನ್ನು ಅನುಮತಿಸಲು ಅಥವಾ ಎಲ್ಲಾ ಅಥವಾ “ನಿರ್ದಿಷ್ಟ ವರ್ಗ” ವಿದೇಶಿಯರಿಗೆ ಪ್ರವೇಶವನ್ನು ನಿರಾಕರಿಸಲು ಒತ್ತಾಯಿಸುತ್ತದೆ.
ಈ ಕಾಯಿದೆಯು ವಿದೇಶಿಯರು ಮತ್ತು ವಲಸೆಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ನಿಯಂತ್ರಿಸಲು ಸಮಗ್ರ ಶಾಸನವಾಗಿದೆ.
ವಿದೇಶಿಯರು ಮತ್ತು ವಲಸೆಗೆ ಸಂಬಂಧಿಸಿದ ವಿಷಯಗಳನ್ನು ಇಲ್ಲಿಯವರೆಗೆ ನಾಲ್ಕು ಕಾಯಿದೆಗಳ ಮೂಲಕ ನಿರ್ವಹಿಸಲಾಗಿದೆ. ಅಂದರೆ ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆ, 1920, ವಿದೇಶಿಯರ ನೋಂದಣಿ ಕಾಯ್ದೆ, 1939, ವಿದೇಶಿಯರ ಕಾಯ್ದೆ, 1946 ಮತ್ತು ವಲಸೆ (ವಾಹಕಗಳ ಹೊಣೆಗಾರಿಕೆ) ಕಾಯ್ದೆಗಳು ಸೇರಿವೆ. ಈ ಎಲ್ಲ ಕಾನೂನುಗಳನ್ನು ಈಗ ರದ್ದುಗೊಳಿಸಲಾಗಿದೆ.
2ನೇ ರ‍್ಯಾಂಕ್ ಪಡೆದಿದ್ದರೂ ಪಿಎಚ್‌ಡಿ ಪ್ರವೇಶ ನಿರಾಕರಣೆ: 14ನೇ ದಿನಕ್ಕೆ ಕಾಲಿಟ್ಟ ದಲಿತ ವಿದ್ಯಾರ್ಥಿ ಪ್ರತಿಭಟನೆ


