ಬುಧವಾರ (ಏ.2) ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಮೇಲಿನ ಸುದೀರ್ಘ 12 ಗಂಟೆಗೂ ಹೆಚ್ಚು ಸಮಯದ ಚರ್ಚೆಯ ಬಳಿಕ, ತಡರಾತ್ರಿ 2 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಘೋಷಣೆಯ ಕುರಿತ ಶಾಸನಬದ್ಧ ನಿರ್ಣಯವನ್ನು ಮಂಡಿಸಿದರು.
ಬಳಿಕ ನಿರ್ಣಯದ ಮೇಲೆ ಸುಮಾರು 40 ನಿಮಿಷಗಳ ಚರ್ಚೆ ನಡೆಯಿತು. ಎಂಟು ಪ್ರತಿಪಕ್ಷ ಸದಸ್ಯರು ನಿರ್ಣಯದ ಕುರಿತು ಮಾತನಾಡಿದರು. ಅಮಿತ್ ಶಾ ಅದಕ್ಕೆ ಪ್ರತಿಕ್ರಿಯಿಸಿದರು. ನಂತರ, ಮುಂಜಾನೆ 3 ಗಂಟೆ (2.45 AM) ಧ್ವನಿ ಮತದ ಮೂಲಕ ಸದನವು ನಿರ್ಣಯವನ್ನು ಅಂಗೀಕರಿಸಿತು.
ನಿರ್ಣಯದ ಮೇಲೆ ಚರ್ಚೆ ಆರಂಭಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್, “ನಮ್ಮ ಪಕ್ಷ (ಕಾಂಗ್ರೆಸ್) ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿರುವುದನ್ನು ಬೆಂಬಲಿಸುತ್ತದೆ. ಆದರೆ, ಅದನ್ನು ಮಣಿಪುರದಲ್ಲಿ ‘ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು’ ಬಳಸಬೇಕು ಎಂದು ಹೇಳಿದರು.
“ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯುತರು ತಮ್ಮ ಕರ್ತವ್ಯವನ್ನು ನಿರ್ವಹಿಸಿಲ್ಲ. ಸುಮಾರು ಎರಡು ವರ್ಷಗಳ ಕಾಲ ಯಾವುದೇ ನಿರ್ಣಾಯಕ ಕ್ರಮ ಕೈಗೊಂಡಿಲ್ಲ. ವಿಧಾನಸಭೆ ಅಧಿವೇಶನಕ್ಕೂ ಮುನ್ನ ಮುಖ್ಯಮಂತ್ರಿಯಿಂದ ರಾಜೀನಾಮೆ ಪಡೆದು ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಕಾಂಗ್ರೆಸ್ ಪಕ್ಷ ಸರ್ಕಾರದ ವಿರುದ್ದ ಆಗಲೇ ಅವಿಶ್ವಾಸ ನಿರ್ಣಯವನ್ನು ಸಿದ್ಧಪಡಿಸಿತ್ತು. ಆದರೆ, ಸರ್ಕಾರವೇ ಉಳಿಯಲಿಲ್ಲ. ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮಣಿಪುರಕ್ಕೆ ಹೋಗಿದ್ದಾರೆ. ಹಾಗಾಗಿ, ಪ್ರಧಾನಿ ಕೂಡ ಭೇಟಿ ನೀಡಬೇಕು” ಎಂದು ಆಗ್ರಹಿಸಿದರು.
“ರಾಜ್ಯದ ಶಸ್ತ್ರಾಗಾರಗಳಿಂದ ಸುಮಾರು 60,000 ಶಸ್ತ್ರಾಸ್ತ್ರಗಳು ಮತ್ತು 6,00,000ಕ್ಕೂ ಹೆಚ್ಚು ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿದೆ. ಹಿಂಸಾಚಾರದಿಂದ ರಾಜ್ಯದ ಆರ್ಥಿಕ ಬೆಳವಣಿಗೆಗೆ ಧಕ್ಕೆಯಾಗಿದೆ. ಸಶಸ್ತ್ರ ಗುಂಪುಗಳು ಹುಚ್ಚುಚ್ಚಾಗಿ ಓಡಾಡುತ್ತಿವೆ, ರಾಜ್ಯದಲ್ಲಿ ಕಾನೂನಿನ ಆಡಳಿತ ಇದ್ದಂತೆ ತೋರುತ್ತಿಲ್ಲ. ರಾಜ್ಯದಲ್ಲಿ ಪರಿಸ್ಥಿತಿ ಹತೋಟಿಗೆ ತರಲು ರಾಷ್ಟ್ರಪತಿ ಆಳ್ವಿಕೆ ಒಂದು ಅವಕಾಶವಾಗಿ ನಾವು ನೋಡಲು ಬಯಸುತ್ತೇವೆ. ರಾಷ್ಟ್ರಪತಿ ಆಳ್ವಿಕೆ ಅಗತ್ಯ, ಆದರೆ ಅದು ಸಾಕಾಗುವುದಿಲ್ಲ. ಮಣಿಪುರದ ಜನರು ಅನುಭವಿಸಿದ್ದು ಬೇರೆಯವರು ಅನುಭವಿಸಬಾರದು” ಎಂದು ತರೂರ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, “ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಯಾವುದೇ ಪ್ರಮುಖ ಹಿಂಸಾಚಾರ ಘಟನೆಗಳು ನಡೆದಿಲ್ಲ. ‘ದಯವಿಟ್ಟು ಒಂದಾಗಿ, ಆಡಳಿತವನ್ನು ಬೆಂಬಲಿಸಿ, ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಸಹಕರಿಸಿ’ ಎಂಬ ಘೋಷಣೆಯನ್ನು ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿದ ಎರಡು ತಿಂಗಳೊಳಗೆ ಸಾಕಾರಾಗೊಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಸರ್ಕಾರ ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಮತ್ತು ಈಗ ಆಗಿರುವ ಗಾಯಗಳನ್ನು ಗುಣಪಡಿಸಲು ಬದ್ದವಾಗಿದೆ” ಎಂದು ತಿಳಿಸಿದರು.
“ಸರ್ಕಾರ ಜನಾಂಗೀಯ ಹಿಂಸಾಚಾರವನ್ನು ಸರಿಯಾಗಿ ನಿಭಾಯಿಸಿಲ್ಲ ಎಂಬ ಆರೋಪವನ್ನು ಅಮಿತ್ ಶಾ ನಿರಾಕರಿಸಿದರು. “ನಾವು ತಕ್ಷಣ ಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ. ಹೈಕೋರ್ಟ್ ಆದೇಶ ಹೊರಡಿಸಿದ ದಿನದಂದು ಕೇಂದ್ರ ಸರ್ಕಾರ ಭದ್ರತಾ ಪಡೆಗಳನ್ನು ವಿಮಾನದ ಮೂಲಕ ಕಳುಹಿಸಿದೆ. ಹೈಕೋರ್ಟ್ ಆದೇಶದ ನಂತರ ಹಿಂಸಾಚಾರ ಪ್ರಾರಂಭವಾಯಿತು. ಇದನ್ನು ಎರಡೂ ಗುಂಪುಗಳು ವಿಭಿನ್ನವಾಗಿ ವ್ಯಾಖ್ಯಾನಿಸಿದವು. ನಮ್ಮ ಪ್ರತಿಕ್ರಿಯೆಯಲ್ಲಿ ಯಾವುದೇ ವಿಳಂಬವಾಗಿಲ್ಲ” ಎಂದರು.
ಮಣಿಪುರದಲ್ಲಿ ಈ ಹಿಂದೆ ನಡೆದ ವಿವಿಧ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳ ಬಗ್ಗೆಯೂ ಮಾತನಾಡಿದ ಶಾ, “ನಿಮ್ಮ ಅವಧಿಯಲ್ಲಿನ ಹಿಂಸಾಚಾರ ಅಥವಾ ನಮ್ಮ ಅವಧಿಯಲ್ಲಿನ ಹಿಂಸಾಚಾರವನ್ನು ನಾನು ಹೋಲಿಕೆ ಮಾಡಲು ಬಯಸುವುದಿಲ್ಲ. ನನ್ನ ಅಭಿಪ್ರಾಯದಲ್ಲಿ, ಒಂದೇ ಒಂದು ಘಟನೆಯೂ ಸಂಭವಿಸಬಾರದು. ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಕೇಂದ್ರವು ವಿಫಲವಾಗಿದೆ ಎಂಬ ಆರೋಪ ತಪ್ಪು. ಇದಕ್ಕೂ ಮೊದಲು ಘರ್ಷಣೆಗಳು ನಡೆದಿವೆ. ಹಾಗಾಗಿ, ಹಿಂಸಾಚಾರವನ್ನು ರಾಜಕೀಯಗೊಳಿಸಬೇಡಿ ಎಂದು ನಾನು ವಿರೋಧ ಪಕ್ಷಗಳನ್ನು ಒತ್ತಾಯಿಸುತ್ತೇನೆ. ಇದು ಭಯೋತ್ಪಾದನೆ ಅಥವಾ ಗಲಭೆಗಳಲ್ಲ, ಜನಾಂಗೀಯ ಘರ್ಷಣೆ” ಎಂದು ಹೇಳಿದರು.
ರಾಷ್ಟ್ರಪತಿ ಆಳ್ವಿಕೆಯ ಅಡಿಯಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಪಟ್ಟಿ ಮಾಡಿದ ಅಮಿತ್ ಶಾ, “ಗೃಹ ಸಚಿವಾಲಯದ (ಎಂಹೆಚ್‌ಎ) ಪ್ರತಿನಿಧಿಗಳು ಎರಡೂ ಗುಂಪುಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸುತ್ತಿದ್ದಾರೆ ಮತ್ತು ನಾಗರಿಕ ಸಮಾಜದ ಸಭೆಯನ್ನು ನಡೆಸಲಾಗುತ್ತಿದೆ. ಶೀಘ್ರದಲ್ಲೇ, ಜಂಟಿ ಸಭೆ ನಡೆಯಲಿದೆ. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಮೊದಲ ಹೆಜ್ಜೆ ಶಾಂತಿಯನ್ನು ಪುನಃಸ್ಥಾಪಿಸುವುದು. ಒಟ್ಟಾರೆಯಾಗಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಳೆದ ನಾಲ್ಕು ತಿಂಗಳಲ್ಲಿ, ಇಬ್ಬರು ಗಾಯಗೊಂಡಿದ್ದಾರೆ. ಅದು ಬಿಟ್ಟರೆ ಯಾವುದೇ ಹಿಂಸಾಚಾರ ನಡೆದಿಲ್ಲ. ಇದು ತೃಪ್ತಿಕರವಾಗಿದೆ ಎಂದು ನಾನು ಹೇಳುವುದಿಲ್ಲ. ಆದರೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆಂತರಿಕವಾಗಿ ಸ್ಥಳಾಂತರಗೊಂಡ ಜನರು ಶಿಬಿರಗಳಲ್ಲಿ ಇರುವ ದಿನದವರೆಗೆ ತೃಪ್ತರಾಗಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಚರ್ಚೆಯ ಸಮಯದಲ್ಲಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದೆ ಕನಿಮೋಳಿ ಅವರು ಬೆಳಗಿನ ಜಾವ 2 ಗಂಟೆಗೆ ಚರ್ಚೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. “ಮಣಿಪುರದ ಬಗ್ಗೆ ಚರ್ಚೆ ನಡೆಸಬೇಕೆಂಬುವುದು ಪ್ರತಿಪಕ್ಷಗಳು ಬೇಡಿಕೆಯಾಗಿದೆ. ಆದರೆ, ಅದು ಮಧ್ಯರಾತ್ರಿ 2 ಗಂಟೆಗೆ ನಡೆಯಬೇಕಾದ ಚರ್ಚೆಯಲ್ಲ. ಮಣಿಪುರದಲ್ಲಿ ನೋವು ಅನುಭವಿಸುತ್ತಿರುವ ಜನರ ಬಗ್ಗೆ ನಿಮಗೆ ಎಷ್ಟು ಗೌರವವಿದೆ? ಎಂದು ಪ್ರಶ್ನಿಸಿದರು.
“ಬಂಡುಕೋರರು ಮತ್ತು ಪ್ರತಿಭಟನಾಕಾರರ ಕೈಗಳಿಗೆ ಶಸ್ತ್ರಾಸ್ತ್ರಗಳು ಹೇಗೆ ಸಿಕ್ಕಿತು? ಗೃಹ ಸಚಿವರು ಮುಕ್ತ ಸಂಚಾರದ ಭರವಸೆ ನೀಡಿದ ನಂತರವೂ ರಕ್ತಪಾತ ಏಕೆ ಆಯಿತು? 16 ಜನರು ಗಂಭೀರವಾಗಿ ಮತ್ತು 103 ಜನರು ಸಾಮಾನ್ಯವಾಗಿ ಏಕೆ ಗಾಯಗೊಂಡರು. ರಾಷ್ಟ್ರಪತಿ ಆಳ್ವಿಕೆ ಮಾಡಿದ್ದೇನು? ಎಂದು ಕನಿಮೋಳಿ ಕೇಳಿದರು.
“ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಮಾಡಿದ್ದೇವೆ ಎನ್ನುವ ಧೈರ್ಯಶಾಲಿ ಮಂತ್ರಿ ಏನಾದರು? ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳು ತೃಪ್ತಿಕರವಾಗಿಲ್ಲ. ಮಣಿಪುರದಲ್ಲಿ ನೀವು ನ್ಯಾಯಯುತ ಚುನಾವಣೆ ನಡೆಸಿ, ಸುಭದ್ರ ಸರ್ಕಾರ ರಚಿಸುತ್ತೀರಿ ಎಂದು ನಾನು ಭಾವಿಸುತ್ತೇನೆ” ಎಂದು ಎನ್‌ಸಿಪಿ ಎಸ್‌ಪಿಯ ಸಂಸದೆ ಸುಪ್ರಿಯಾ ಸುಳೆ ಹೇಳಿದರು.
ಒಬ್ಬ ಮುಸ್ಲಿಂ ಸಂಸದನಿಲ್ಲದ ಬಿಜೆಪಿ ವಕ್ಫ್ ಆಸ್ತಿ ರಕ್ಷಣೆ ಮಾಡುತ್ತದೆ ಎನ್ನುವುದು ವಿಪರ್ಯಾಸ: ಡಿಎಂಕೆ ಸಂಸದ ಎ. ರಾಜ


