ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹಿಂಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಹೊಸ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ.
ರಾಷ್ಟ್ರಪತಿ ಆಡಳಿತ ವಾಪಸ್ ಪಡೆಯುವ ಆದೇಶಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. 2018ರಲ್ಲಿ, ರಾಜ್ಯಪಾಲರ ಆಡಳಿತ ಆರು ತಿಂಗಳ ಪೂರ್ಣಗೊಂಡ ನಂತರ, ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ್ದರು. ಮೆಹಬೂಬಾ ಮುಫ್ತಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಜೂನ್‌ನಲ್ಲಿ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದ ರಾಜ್ಯದಲ್ಲಿ ಕೇಂದ್ರದ ಆಡಳಿತವನ್ನು ಹೇರುವ ಆದೇಶಕ್ಕೆ ಕೋವಿಂದ್ ಸಹಿ ಹಾಕಿದ್ದರು.
1996ರ ನಂತರ, 2018ರಲ್ಲಿ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ಕೇಂದ್ರದ ಆಡಳಿತವನ್ನು ಹೇರಲಾಗಿತ್ತು. ಗೆಜೆಟ್ ಅಧಿಸೂಚನೆಯ ಪ್ರಕಾರ, ರಾಷ್ಟ್ರಪತಿಗಳು ಅಂದಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಂದ ಸ್ವೀಕರಿಸಿದ ವರದಿ ಪರಿಗಣಿಸಿದ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರು.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ಮೈತ್ರಿಕೂಟ ಜಯಬೇರಿ ಭಾರಿಸಿದ್ದು, ಸರ್ಕಾರ ರಚನೆಗೆ ಅಣಿಯಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರು ತನ್ನ ಮಗ ಉಮರ್ ಅಬ್ದುಲ್ಲಾ ಅವರು ಮುಂದಿನ ಸಿಎಂ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಉಮರ್ ಅಬ್ದುಲ್ಲಾ ಈಗಾಗಲೇ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ಇದನ್ನೂ ಓದಿ : ಮದ್ರಸಾಗಳಿಗೆ ಧನ ಸಹಾಯ ನಿಲ್ಲಿಸುವಂತೆ ಮಕ್ಕಳ ಹಕ್ಕುಗಳ ಆಯೋಗ ಪತ್ರ : ವಿರೋಧ ವ್ಯಕ್ತಪಡಿಸಿದ ಮುಸ್ಲಿಂ ಸಂಘಟನೆಗಳು


