‘ದಿ ವೈರ್’ ಸಂಪಾದಕ ಸಿದ್ಧಾರ್ಥ್ ವರದರಾಜನ್ ಮತ್ತು ಹಿರಿಯ ಪತ್ರಕರ್ತ ಕರಣ್ ಥಾಪರ್ ವಿರುದ್ಧ
ಅಸ್ಸಾಂ ಪೊಲೀಸರು ‘ದೇಶದ್ರೋಹ ಪ್ರಕರಣ’ ದಾಖಲಿಸಿರುವುದಕ್ಕೆ ಪತ್ರಕರ್ತರ ಸಂಘಗಳಾದ ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಮತ್ತು ವಿಮೆನ್ ಪ್ರೆಸ್ ಕಾರ್ಪ್ಸ್ ಮಂಗಳವಾರ (ಆ.19) ದಿಗ್ಭ್ರಮೆ ವ್ಯಕ್ತಪಡಿಸಿವೆ.
ಪತ್ರಕರ್ತರ ವಿರುದ್ದ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರತೀಕಾರದ ಕ್ರಮವಾಗಿದೆ ಎಂದು ಎರಡೂ ಸಂಘಗಳು ಜಂಟಿಯಾಗಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿವೆ. ತಕ್ಷಣ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸಿವೆ.
ಸಂವಿಧಾನದ 19(1)ಎ ವಿಧಿಯ ಅಡಿಯಲ್ಲಿ ನೀಡಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಭಾರತೀಯ ನ್ಯಾಯ ಸಂಹಿತೆಯ (ಬಿಎಎನ್‌ಸ್) ಸೆಕ್ಷನ್ 152 ಅನ್ನು ರದ್ದುಪಡಿಸುವಂತೆ ಆಗ್ರಹಿಸಿವೆ.
The Press Club of India and Indian Women Press Corps, express dismay at the vindictive actions unleashed by the Assame Police, which, through the crime branch in Guwahati, has filed an FIR against The Wire’s editor S Varadarajan and senior journalist Karan Thapar, invoking… pic.twitter.com/91V6EyZeCy
— Press Club of India (@PCITweets) August 19, 2025
ಸೆಕ್ಷನ್ 152 ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳಿಗೆ ಸಂಬಂಧಿಸಿದೆ. ‘ದೇಶದ್ರೋಹ ಕಾನೂನು’ ಎಂದು ಸುಲಭವಾಗಿ ಕರೆಯುವ ಈ ವಸಾಹತುಶಾಹಿ ಸೆಕ್ಷನ್, ಹಳೆಯ ಕ್ರಿಮಿನಲ್ ಕಾನೂನು ಭಾರತೀಯ ದಂಡ ಸಂಹಿತೆ(ಐಪಿಸಿ)ಯಲ್ಲಿ ಸೆಕ್ಷನ್ 124ಎ ಎಂದು ಗುರುತಿಸಲಾಗಿತ್ತು.
ಒಂದು ಪ್ರಕರಣದಲ್ಲಿ ಸಿದ್ದಾರ್ಥ್ ವರದರಾಜನ್ ಮತ್ತು ದಿ ವೈರ್ ನಡೆಸುತ್ತಿರುವ ಪ್ರತಿಷ್ಠಾನದ ಸದಸ್ಯರಿಗೆ ಬಂಧನದಿಂದ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿದ್ದರೂ, ಯಾವುದೇ ಕಾರಣವಿಲ್ಲದೆ ಇನ್ನೊಂದು ಎಫ್‌ಐಆರ್ ದಾಖಲಿಸಿರುವ ಪೋಲಿಸರು ಆ.22ರಂದು ಗುವಾಹಟಿಯ ಕ್ರೈಂ ಬ್ರ್ಯಾಂಚ್ ಪೋಲಿಸ್ ಠಾಣೆಯಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ವರದರಾಜನ್ ಮತ್ತು ಕರಣ್ ಥಾಪರ್ ಅವರಿಗೆ ಸೂಚಿಸಿದ್ದಾರೆ. ಹಾಜರಾಗದಿದ್ದರೆ ಅವರ ಬಂಧನವಾಗುವ ಭೀತಿಯಿದೆ ಎಂದು ಪತ್ರಕರ್ತರ ಸಂಘಟನೆಗಳು ಹೇಳಿಕೆಯಲ್ಲಿ ತಿಳಿಸಿವೆ.
ಸುಪ್ರೀಂ ಕೋರ್ಟ್ ಮೇ 2022ರಲ್ಲಿ ಈ ಹಿಂದಿನ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಅಡಿಯಲ್ಲಿ ದೇಶದ್ರೋಹದ ವಿಚಾರಣೆಗಳು ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ ಎಂದು ಪತ್ರಕರ್ತರ ಸಂಘಗಳು ಹೇಳಿವೆ.
ಬಿಎನ್‌ಎಸ್‌ನ ಸೆಕ್ಷನ್ 152 ಐಪಿಸಿಯ ಸೆಕ್ಷನ್ 124ಎನ ಹೊಸ ಆವೃತ್ತಿ ಎಂದಿರುವ ಸಂಘಗಳು, ದಿ ವೈರ್ ಬಿಎನ್‌ಎಸ್‌ನ ಸೆಕ್ಷನ್ 152 ಅನ್ನು ಪ್ರಶ್ನಿಸಿದೆ ಮತ್ತು ಸುಪ್ರೀಂ ಕೋರ್ಟ್ ಆಗಸ್ಟ್ 12 ರಂದು ಸರ್ಕಾರಕ್ಕೆ ನೋಟಿಸ್ ನೀಡಿದೆ ಎಂದಿವೆ.
ವರದರಾಜನ್ ಮತ್ತು ಥಾಪರ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಮಾಧ್ಯಮವನ್ನು ಗುರಿಯಾಗಿಸಲು ‘ಸೆಕ್ಷನ್ 152 ಒಂದು ಸಾಧನವಾಗಿದೆ’ ಎಂಬುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಪತ್ರಕರ್ತರ ಸಂಘಗಳು ಆಕ್ರೋಶ ವ್ಯಕ್ತಪಡಿಸಿವೆ.
ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 152 ಮತ್ತು ಇತರ ನಿಬಂಧನೆಗಳ ಅಡಿಯಲ್ಲಿ ಅಸ್ಸಾಂನ ಮೋರಿಗಾಂವ್‌ನಲ್ಲಿ ಸಿದ್ಧಾರ್ಥ್ ವರದರಾಜನ್ ವಿರುದ್ಧ ಮೊದಲ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣವು ಜೂನ್ 28,2025 ರಂದು ದಿ ವೈರ್‌ನಲ್ಲಿ ಪ್ರಕಟವಾದ ‘IAF Lost Fighter Jets to Pak Because of Political Leadership’s Constraints’: Indian Defence Attache’ಎಂಬ ಶೀರ್ಷಿಕೆಯ ವರದಿಗೆ ಸಂಬಂಧಿಸಿದೆ.
ವರದಿಯ ವಿರುದ್ದ ಅಸ್ಸಾಂ ಬಿಜೆಪಿ ಕಚೇರಿಯ ಅಧಿಕಾರಿಯೊಬ್ಬರು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಆಗಸ್ಟ್ 12, 2025 ರಂದು ಸುಪ್ರೀಂ ಕೋರ್ಟ್ ವರದರಾಜನ್ ಮತ್ತು ದಿ ವೈರ್ ಪತ್ರಕರ್ತರಿಗೆ ಬಲವಂತದ ಕ್ರಮದಿಂದ ರಕ್ಷಣೆ ನೀಡಿದೆ.
ಗುವಾಹಟಿ ಅಪರಾಧ ವಿಭಾಗವು ಸಿದ್ಧಾರ್ಥ್ ವರದರಾಜನ್ ಮತ್ತು ಕರಣ್ ಥಾಪರ್ ವಿರುದ್ಧ ಮತ್ತೊಂದು ಹೊಸ ಎಫ್‌ಐಆರ್ ದಾಖಲಿಸಿದೆ. ಇದರಲ್ಲಿ, ಬಿಎನ್‌ಎಸ್‌ನ ಸೆಕ್ಷನ್ 152 ಜೊತೆಗೆ ಸೆಕ್ಷನ್ 196, 197(1)(D)/3(6), 353, 45, ಮತ್ತು 61 ರ ಅಡಿಯಲ್ಲಿ ದೇಶದ್ರೋಹದ ಆರೋಪಗಳನ್ನು ಹೊರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 12, 2025 ರಂದು ಸಮನ್ಸ್ ಜಾರಿ ಮಾಡಲಾಗಿದ್ದು, ಇಬ್ಬರೂ ಪತ್ರಕರ್ತರು ಆಗಸ್ಟ್ 22, 2025 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆಪಾದಿತ ಅಪರಾಧ ಅಥವಾ ಎಫ್‌ಐಆರ್ ದಿನಾಂಕದ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳನ್ನು ಪೊಲೀಸರು ಒದಗಿಸಿಲ್ಲ.
ಖಾಸಗಿ ಸಿಮೆಂಟ್ ಕಂಪನಿಗೆ 1 ಸಾವಿರ ಎಕರೆ ಭೂಮಿ ಕೊಡಲು ಮುಂದಾದ ಅಸ್ಸಾಂ ಸರ್ಕಾರ: ಹೈಕೋರ್ಟ್ ತರಾಟೆ


