ಈಶಾನ್ಯ ದೆಹಲಿಯ ಭಜನ್‌ಪುರ ಪೊಲೀಸ್ ಠಾಣೆಯಲ್ಲಿ ‘ದಿ ಕಾರವಾನ್’ನ ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಬಗ್ಗೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ(ಪಿಸಿಐ) ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಆಗಸ್ಟ್ 2020ರಲ್ಲಿ, ಪತ್ರಕರ್ತರಾದ ಶಾಹಿದ್ ತಂತ್ರಾಯ್, ಪ್ರಭ್‌ಜಿತ್ ಸಿಂಗ್ ಮತ್ತು ಮಹಿಳಾ ಪತ್ರಕರ್ತೆಯೊಬ್ಬರು ಈಶಾನ್ಯ ದೆಹಲಿಯ ಉತ್ತರ ಘೋಂಡಾ ಸಮೀಪ ವರದಿ ಮಾಡುತ್ತಿದ್ದಾಗ, ಅವರ ಮೇಲೆ ದಾಳಿ ಮಾಡಲಾಗಿದೆ. ಕೋಮು ದೂಷಣೆ, ಕೊಲೆ ಬೆದರಿಕೆ ಮತ್ತು ಲೈಂಗಿಕ ಕಿರುಕುಳ ನೀಡಲಾಗಿದೆ. ದಿ ಕ್ಯಾರವಾನ್ ಪ್ರಕಾರ, ಪತ್ರಕರ್ತರು ಆ ಪ್ರದೇಶದಲ್ಲಿ ಕೇಸರಿ ಧ್ವಜಗಳ ಪೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು, ಆಗ ಸ್ಥಳೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೇರಿ ಹಲವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪತ್ರಕರ್ತರು ಭಜನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸುಮಾರು ನಾಲ್ಕು ವರ್ಷಗಳ ನಂತರ, ಭಜನ್‌ಪುರ ಪೊಲೀಸರು ಪ್ರಭಜಿತ್ ಸಿಂಗ್ ಅವರು ಎಫ್‌ಐಆರ್‌ಗೆ ಸಂಬಂಧಿಸಿದ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇದರಲ್ಲಿ ಮೂವರು ಪತ್ರಕರ್ತರ ವರುದ್ಧ 354 ಮತ್ತು 153ಎ ಯಂತಹ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ನಮ್ಮ ಸಿಬ್ಬಂದಿ ವಿರುದ್ಧದ ಎಫ್‌ಐಆರ್‌ನ ದೃಢೀಕೃತ ಪ್ರತಿಯನ್ನು ನಮಗೆ ನೀಡಲಾಗಿಲ್ಲ. 2020ರ ಘಟನೆ ನಡೆದ ದಿನ ನಮ್ಮ ಎಫ್‌ಐಆರ್‌ಗೆ ಒಂದು ಗಂಟೆಯ ಮೊದಲು ನಮ್ಮ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ನಾವು ತಿಳಿದುಕೊಂಡಿದ್ದೇವೆ. ಘಟನೆಯ ದಿನವೇ ನಾವು ದೂರುಗಳನ್ನು ನೀಡಿದ್ದರೂ, ಪೊಲೀಸರು ನಮ್ಮ ಪ್ರಕರಣವನ್ನು ದಾಖಲಿಸಿರಲಿಲ್ಲ. ಎಫ್‌ಐಆರ್ ಆದ ಮೂರು ದಿನಗಳ ನಂತರ 2020ರ ಆ.14ರಂದು ನಮ್ಮ ಎಫ್‌ಐಆರ್‌ನ್ನು ‘ಕೌಂಟರ್ ಎಫ್‌ಐಆರ್’ ಎಂದು ಪರಿಗಣಿಸಲಾಗುತ್ತಿದೆ ಎಂದು ಪೊಲೀಸರು ನಮಗೆ ತಿಳಿಸಿದ್ದಾರೆ ಎಂದು ಕಾರವಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರೆಸ್ ಕ್ಲಬ್ ಆಫ್ ಇಂಡಿಯಾ ಈ ಹಿಂದೆ ದಾಳಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿತ್ತು ಮತ್ತು ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿತ್ತು. ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿ ಪತ್ರಕರ್ತರ ವಿರುದ್ಧವೇ ತನಿಖೆ ಆರಂಭಿಸಿದ್ದಾರೆ. ಎಫ್ಐಆರ್ ವಿವರಗಳು ಸತ್ಯಗಳಿಗೆ ವಿರುದ್ಧವಾಗಿವೆ. ಪೊಲೀಸರ ದುರ್ವರ್ತನೆ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತರ ವಿರುದ್ಧ ಇದೀಗ ಗಂಭೀರ ಎಫ್ ಐಆರ್ ದಾಖಲಾಗಿರುವುದು ಆತಂಕಕ್ಕೀಡು ಮಾಡಿದೆ. ಆದರೆ ಪತ್ರಕರ್ತರು ದಾಖಲಿಸಿದ ಎಫ್‌ಐಆರ್ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ. ಈ ಬೆಳವಣಿಗೆಯನ್ನು ಪತ್ರಿಕೋದ್ಯಮವನ್ನು ಹತ್ತಿಕ್ಕುವ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹಾಳುಮಾಡುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಕಾರವಾನ್‌ನ ಕಿರುಕುಳಕ್ಕೊಳಗಾದ ಪತ್ರಕರ್ತರನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದೇವೆ ಮತ್ತು ದೆಹಲಿ ಪೊಲೀಸರ ಪಕ್ಷಪಾತೀಯ ಪ್ರತೀಕಾರದ ಕ್ರಮಗಳನ್ನು ಖಂಡಿಸುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ದೆಹಲಿ ಪೊಲೀಸರು ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ವರ್ತಿಸುವಂತೆ, ಪತ್ರಕರ್ತರ ವಿರುದ್ಧದ ಎಫ್‌ಐಆರ್ ಹಿಂಪಡೆಯಲು ಮತ್ತು ದಿ ಕ್ಯಾರವಾನ್ ಪತ್ರಕರ್ತರು ದಾಖಲಿಸಿರುವ ಎಫ್‌ಐಆರ್ ಬಗ್ಗೆ ಸರಿಯಾಗಿ ತನಿಖೆ ಮಾಡಲು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಆಗ್ರಹಿಸಿದೆ.
ಇದನ್ನು ಓದಿ: ‘ನಕಾರಾತ್ಮಕ’ ರಾಜಕೀಯದ ಅಂತ್ಯ: ಚುನಾವಣಾ ಫಲಿತಾಂಶದ ಬಗ್ಗೆ ಅಖಿಲೇಶ್ ಯಾದವ್ ಪ್ರತಿಕ್ರಿಯೆ


