ಬೆಲೆ ಏರಿಕೆಯಿಂದ ಜನತೆ ಸಂಕಷ್ಟದಲ್ಲಿದ್ದು, ದಿನನಿತ್ಯದ ಅಗತ್ಯತೆಗಳಲ್ಲಿ ರಾಜಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ, ಅದರೆ ಮೋದಿ ಸರ್ಕಾರ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ. ನವದೆಹಲಿಯ ಗಿರಿ ನಗರದಲ್ಲಿನ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ ರಾಹುಲ್ ಗಾಂಧಿ, ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ತಮಗಾದ ಸಂಕಷ್ಟವನ್ನು ವಿವರಿಸಿದ ಗೃಹಿಣಿಯರೊಂದಿಗಿನ ಸಂವಾದದ ಕುರಿತಾದ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಎಕ್ಸ್‌ನಲ್ಲಿ ವಿಡಿಯೊ ಜೊತೆಗೆ ಬರೆದಿರುವ ರಾಹುಲ್ ಗಾಂಧಿ ಅವರು, “ಕೆಲವು ದಿನಗಳ ಹಿಂದೆ, ನಾನು ಸ್ಥಳೀಯ ತರಕಾರಿ ಮಾರುಕಟ್ಟೆಗೆ ಹೋಗಿದ್ದೆ. ಸಾಮಾನ್ಯ ಜನರ ಬಜೆಟ್ ಹೇಗೆ ಹದಗೆಡುತ್ತಿದೆ ಮತ್ತು ಹಣದುಬ್ಬರವು ಪ್ರತಿಯೊಬ್ಬರ ಜೀವನವನ್ನು ಹೇಗೆ ಸಂಕಷ್ಟಕ್ಕೀಡು ಮಾಡಿದೆ ಎಂದು ಅಲ್ಲಿ ಶಾಪಿಂಗ್ ಮಾಡುವ ಗ್ರಾಹಕರೊಂದಿಗೆ ಮತ್ತು ಮಾರಾಟಗಾರರೊಂದಿಗೆ ಮಾತನಾಡಿದೆ.” ಹೇಳಿದ್ದಾರೆ.
ಏರುತ್ತಿರುವ ಬೆಲೆಗಳೊಂದಿಗೆ ಜನರು ಹೆಣಗಾಡುತ್ತಿದ್ದಾರೆ ಮತ್ತು ದಿನ ನಿತ್ಯದ ಸಣ್ಣ ಸಣ್ಣ ಅಗತ್ಯಗಳ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ನಾವು ಬೆಳ್ಳುಳ್ಳಿ, ಬಟಾಣಿ, ಅಣಬೆಗಳು ಮತ್ತು ಇತರ ತರಕಾರಿಗಳ ಬೆಲೆಗಳ ಬಗ್ಗೆ ಚರ್ಚಿಸಿ, ಜನರ ನೈಜ ಅನುಭವಗಳನ್ನು ಕೇಳಿದ್ದೇವೆ.
ಒಂದು ಕಾಲದಲ್ಲಿ ಕೆಜಿಗೆ 40 ರೂ. ಇದ್ದ ಬೆಳ್ಳುಳ್ಳಿ ಈಗ ಕೆಜಿಗೆ 400 ರೂ. ಆಗಿದೆ ಮತ್ತು ಅವರೆಕಾಳು ಕೆಜಿಗೆ 120 ಆಗಿದೆ. ಇದು ಎಲ್ಲರ ಬಜೆಟ್ ಅನ್ನು ಬುಡಮೇಲು ಮಾಡಿದೆ” ಎಂದು ಅವರು ಹೇಳಿದ್ದಾರೆ.
“लहसुन कभी ₹40 था, आज ₹400!”
बढ़ती महंगाई ने बिगाड़ा आम आदमी की रसोई का बजट – कुंभकरण की नींद सो रही सरकार! pic.twitter.com/U9RX7HEc8A
— Rahul Gandhi (@RahulGandhi) December 24, 2024
ಬೆಲೆ ಹೀಗೆ ಏರುತ್ತಿದ್ದರೆ ಜನರು ಏನು ತಿನ್ನುತ್ತಾರೆ ಮತ್ತು ಅವರು ಏನು ಉಳಿಸುತ್ತಾರೆ ಎಂದು ಅವರು ಕೇಳಿದ್ದಾರೆ. “ಚಹಾದ ಬಗ್ಗೆ ಮಾತನಾಡುವಾಗ, ಗೃಹಿಣಿಯರ ಸಮಸ್ಯೆಗಳನ್ನು ನಾವು ನಿಕಟವಾಗಿ ಅರ್ಥಮಾಡಿಕೊಂಡಿದ್ದೇವೆ. ಆದಾಯವು ನಿಂತಿದ್ದು, ಹಣದುಬ್ಬರವು ಅನಿಯಂತ್ರಿತವಾಗಿ ಹೆಚ್ಚುತ್ತಿದೆ. ಆಹಾರ ಬೆಲೆ ಏರಿಕೆಯಿಂದ 10 ರೂ. ರಿಕ್ಷಾದ ದರವನ್ನು ನೀಡಲು ಕಷ್ಟಪಡುವಾಗ, ಅವರು ಉಳಿತಾಯ ಮಾಡುವುದು ಹೇಗೆ ಸಾಧ್ಯ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಐದು ನಿಮಿಷಗಳ ವೀಡಿಯೊದಲ್ಲಿ, ರಾಹುಲ್ ಗಾಂಧಿಯವರು ಕೆಲವು ಗೃಹಿಣಿಯರು ತರಕಾರಿಗಳನ್ನು ಖರೀದಿಸುವಾಗ ಮಾರಾಟಗಾರರೊಂದಿಗೆ ಚೌಕಾಸಿ ಮಾಡುವುದನ್ನು ನೋಡುತ್ತಾರೆ. ಈ ಹಿಂದೆ ಬಳಸುತ್ತಿದ್ದ ತರಕಾರಿಯನ್ನು ಖರೀದಿಸಲು ಸಾಧ್ಯವಾಗದೆ ತಮ್ಮ ಆಹಾರ ಪದ್ಧತಿಗೆ ಕಡಿವಾಣ ಹಾಕಬೇಕು ಎಂದು ಗೃಹಿಣಿಯರು ರಾಹುಲ್ ಗಾಂಧಿಗೆ ತಿಳಿಸಿದ್ದಾರೆ. ವೇತನದ ಏರಿಕೆ ಹಾಗೆ ಇದ್ದರೂ, ಬೆಲೆಗಳು ತೀವ್ರವಾಗಿ ಏರಿದೆ ಎಂದು ಅವರು ಹೇಳಿದ್ದಾರೆ.
ಆಹಾರ ಪದಾರ್ಥಗಳ ಬೆಲೆ ಏರಿಕೆ ಕುರಿತು ಸೋಮವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್, ತಾನು ಘೋಷಿಸಿದ ಬುಲೆಟ್ ರೈಲು ಬಂದಿಲ್ಲ ಆದರೆ ಬುಲೆಟ್ ರೈಲಿನ ವೇಗಕ್ಕಿಂತ ವೇಗವಾಗಿ ಹಣದುಬ್ಬರ ಏರುತ್ತಿದ್ದು, ಇದು ಸಾಮಾನ್ಯ ಜನರ ಬೆನ್ನೆಲುಬನ್ನು ಮುರಿದಿದೆ ಎಂದು ಹೇಳಿದೆ.
ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಬ್ಲಂಡರ್ ಸರ್ಕಾರ – ಅಖಿಲೇಶ್ ಯಾದವ್


