ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕುಸಿದಿದೆ ಎಂಬ ಚರ್ಚೆ ಆರಂಭವಾಗಿದ್ದು, ವಿಡಿಯೋಗಳಿಗೆ ಡಿಸ್‌ಲೈಕ್‌ಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ. ಈ ಬಾರಿಯ ಆಗಸ್ಟ್ 30ರ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿ ಹತ್ತುಲಕ್ಷಕ್ಕೂ ಡಿಸ್‌ಲೈಕ್ ಗಳಿಸಿ, ದಾಖಲೆ ಬರೆದಿತ್ತು. ಅಲ್ಲಿಂದಿಚೀಗೆ ಮೋದಿಯವರ ಯಾವ ವಿಡಿಯೋ ಸಹ ಬಿಡದ ಜಾಲತಾಣಿಗರು ಡಿಸ್‌ಲೈಕ್ ಸುರಿಮಳೆ ಮುಂದುವರೆಸಿದ್ದಾರೆ.
ಇಂದು ರಾಜಸ್ತಾನದ ಜೈಪುರದಲ್ಲಿ ನಡೆದ ಪತ್ರಿಕಾ ಗೇಟ್ ಉದ್ಘಾಟನಾ ಕಾರ್ಯಕ್ರಮದ ವಿಡಿಯೋ ಕೂಡ ಲೈಕ್‌ಗಳಿಗಿಂತ ಅತಿ ಹೆಚ್ಚು ಡಿಸ್‌ಲೈಕ್‌ಗಳನ್ನು ಪಡೆಯುತ್ತಾ ಸಾಗಿದೆ. ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಭಾರತೀಯ ಜನತಾ ಪಾರ್ಟಿಯ ಚಾನೆಲ್‌ಗಳಲ್ಲಿ ಈ ವಿಡಿಯೋಗೆ ಡಿಸ್‌ಲೈಕ್‌ಗಳು ಯಥೇಚ್ಚವಾಗಿ ಹರಿದುಬಂದಿವೆ.
ಇನ್ನು ರೋಜ್‌ಗಾರ್ ದೊ (ಉದ್ಯೋಗ ಕೊಡಿ) ಎಂಬ ಕಮೆಂಟ್‌ಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಮೋದಿಯವರ ಅಧಿಕೃತ ಚಾನೆಲ್‌ನಲ್ಲಿ ಕಾಮೆಂಟ್‌ಗಳನ್ನು ಬ್ಲಾಕ್ ಮಾಡಲಾಗಿದೆ.

ಇದನ್ನೂ ಓದಿ: ಭಾರತೀಯರು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ್ದು ಏನನ್ನು? : ಆಗಸ್ಟ್ ತಿಂಗಳ ಮಾಹಿತಿ
ಭಾರತೀಯ ಜನತಾ ಪಾರ್ಟಿ ಚಾನೆಲ್‌ನಲ್ಲಿ ಮಾತ್ರ ಕಾಮೆಂಟ್ ಮಾಡಬಹುದಾಗಿದೆ. ಈ ಚಾನೆಲ್‌ನಲ್ಲಿ ಈ ಬರಹ ಬರೆಯುವ ಹೊತ್ತಿಗೆ ಲೈಕ್‌ಗಳ ಸಂಕ್ಯೆ 2.2ಸಾವಿರ ಇದ್ದರೆ 5.7 ಸಾವಿರ ಡಿಸ್‌ಲೈಕ್‌ಗಳಿವೆ. ಇಲ್ಲಿ ಕಾಮೆಂಟ್ ಮಾಡುತ್ತಿರುವವರೆಲ್ಲಾ ಉದ್ಯೋಗಕ್ಕಾಗಿ ಆಗ್ರಹಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಐಪಿಎಸ್ ಪ್ರೊಬೇಷನರಿ ಅಧಿಕಾರಿಗಳೊಂದಿಗೆ ಪ್ರಧಾನಿ ನಡೆಸಿದ್ದ ವಿಡಿಯೋ ಸಂವಾದಕ್ಕೂ ಡಿಸ್‌ಲೈಕ್‌ಗಳ ಸುರಿಮಳೆ ಸುರಿದಿತ್ತು. ಆ ವಿಡಿಯೋಗೆ ಭಾರತೀಯ ಜನತಾ ಪಾರ್ಟಿಯ ಅಧಿಕೃತ ಚಾನೆಲ್‌ನನಲ್ಲಿ ಡಿಸ್‌ಲೈಕ್‌ಗಳು ಕಾಣಿಸದಂತೆ ಮಾಡಲಾಗಿತ್ತು.
ಯುವ ಸಮೂಹ ಉದ್ಯೋಗಕ್ಕಾಗಿ ಈ ರೀತಿಯಲ್ಲೂ ಪ್ರತಿಭಟನೆ ಶುರು ಮಾಡಿದ್ದಾರೆ. ಸ್ಟೂಡೆಂಟ್ಸ್ ಡಿಸ್‌ಲೈಕ್ ಮೋದಿ ಎಂಬ ಅಭಿಯಾನ ಶುರುಮಾಡಿದ್ದೇವೆ. ಸದ್ಯ ಅತಿ ಹೆಚ್ಚು ಡಿಸ್‌ಲೈಕ್‌ಗಳನ್ನು ಹೊಂದಿರುವ ವಿಡಿಯೋಗಳು ಅಂದರೆ ಅವು ಪ್ರಧಾನಿಯವರದ್ದು. ಯುವಜನತೆ ಯೋಚಿಸುತ್ತಿದ್ದಾರೆ. ಹಾಗಾಗೀ ಡಿಸ್‌ಲೈಕ್ ಮಾಡುವ ಮೂಲಕ ತಮ್ಮ ಪ್ರತಿರೋಧ ಒಡ್ಡುತ್ತಿದ್ದಾರೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕರಾದ ಸರೋವರ್ ಬೆಂಕಿಕೆರೆ ತಿಳಿಸಿದ್ದಾರೆ.


