ಕೇಂದ್ರ ಸರ್ಕಾರದ ಕೊರೋನಾ ನಿರ್ವಹಣೆಯ ಕುರಿತು ಜನರಲ್ಲಿ ಅಸಮಾಧಾನ ಮನೆ ಮಾಡಿದೆ. ಜನರು ಕೇಂದ್ರ ಸರ್ಕಾರದ ವೈಫಲ್ಯದಿಂದ ಆಕ್ರೋಶಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ನಡೆಯುತ್ತಿರುವ ಕೇಂದ್ರ ಸಚಿವ ಸಂಪುಟ ಸಭೆಯು ಮಹತ್ವ ಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಕೊರೋನಾ ನಿರ್ವಹಣೆಯ ಕುರಿತು ಮಂತ್ರಿಗಳ ಮೌಲ್ಯಮಾಪನ ನಡೆಸಿದ್ದಾರೆ. ಕೇಂದ್ರದ ಹಲವು ಮಂತ್ರಿಗಳ ಕಾರ್ಯವೈಖರಿ ಪ್ರಧಾನಿಗಳಿಗೆ ಸಮಾಧಾನವನ್ನು ತಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿಗಳ ಕಾರ್ಯಾಲಯವು ಕೇಂದ್ರದ ಕೆಲವು ಮಂತ್ರಿಗಳ ಕೆಲಸದ ಕುರಿತು ಕಳೆದ ವಾರ ಮೌಲ್ಯಮಾಪನವನ್ನು ನಡೆಸಿದೆ. ಈ ಸಂದರ್ಭದಲ್ಲಿ ಹಲವು ಪ್ರಶ್ನೆಗಳನ್ನು ಮಂತ್ರಿಗಳಿಗೆ ಕೇಳಲಾಗಿದ್ದು ಕೆಲವರು ಉತ್ತರಿಸಿಲ್ಲ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.
ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್, ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ವಿದೇಶಾಂಗ ಮಂತ್ರಿ ಎಸ್. ಜೈಶಂಕರ್, ಪೆಟ್ರೋಲಿಯಂ ಮಂತ್ರಿ ಧರ್ಮೇಂದ್ರ ಪ್ರಧಾನ್, ಮೀನುಗಾರಿಕೆ ಮತ್ತು ಪಶು ಸಂಗೋಪನೆ ಸಚಿವ ಗಿರಿರಾಜ್ ಸಿಂಗ್, ಐಟಿ ಮಿನಿಸ್ಟರ್ ರವಿ ಶಂಕರ್ ಪ್ರಸಾದ್, ಆರೋಗ್ಯ ಮಂತ್ರಿ ಹರ್ಷವರ್ಧನ್ ಅವರ ಕಾರ್ಯ ನಿರ್ವಹಣೆಯನ್ನು ಪ್ರಧಾನಿಗಳು ಮೌಲ್ಯ ಮಾಪನ ಮಾಡಿದ್ದರೆನ್ನಲಾಗಿದೆ. ಈ ಮಂತ್ರಿಗಳ ಜೊತೆ ಪ್ರಧಾನಿಗಳು ನೇರವಾಗಿ ಸಮಾಲೋಚನ ಸಭೆಗಳನ್ನು ನಡೆಸಿದ್ದಾರೆ.
ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಷ್ಟು ಸಚಿವರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ್ದೀರೆಂದು ಕೇಳಿದ್ದಾರೆ. ಹಾಗೇ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಯಾವ ಪ್ರಯತ್ನಗಳನ್ನು ಮಾಡುತ್ತಿದ್ದೀರಿ ಎಂದು ಕೂಡ ಪ್ರಧಾನಿ ತಮ್ಮ ಸಹುದ್ಯೋಗಿಗಳನ್ನು ಪ್ರಶ್ನಿಸಿದ್ದಾರೆ. ಮುಖ್ಯವಾಗಿ ವ್ಯಾಕ್ಸಿನೇಶನ್ ಗೆ ಸಂಬಂಧಿಸಿದಂತೆ ವ್ಯಾಕ್ಸೀನ್ ಪೂರೈಕೆ ಮತ್ತು ಬೇಡಿಕೆ ಅಂತರ ಕಡಿಮೆ ಮಾಡಲು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಏಂದು ಪ್ರಧಾನಿಗಳು ಕೇಂದ್ರ ಮಂತ್ರಿಗಳನ್ನು ಪ್ರಶ್ನಿಸಿದ್ದಾರೆನ್ನಲಾಗುತ್ತಿದೆ.
ಕೇಂದ್ರ ಸರ್ಕಾರದ ಇಲಾಖೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡಬೇಕು. ಜನರನ್ನು ಸರ್ಕಾರ ತಲುಪಬೇಕು ಎಂದು ಪ್ರಧಾನಿಗಳು ಕಳೆದ ವಾರ ನಡೆದ ಈ ವಿಮರ್ಶ ಸಭೆಯಲ್ಲಿ ಮಂತ್ರಿಗಳಿಗೆ ಸಲಹೆ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇನ್ನು ತಮ್ಮ ಸರ್ಕಾರದ ಮೇಲಿನ ಜನಾಕ್ರೋಶವನ್ನು ತಣಿಸಲು ಬಿಜೆಪಿ ದೇಶಾದ್ಯಂತ ಪ್ರಚಾರ ಸಭೆ ನಡೆಸಲು ತೀರ್ಮಾನಿಸಿದೆ. ಮನೆ ಮನೆಗೆ ತೆರಳಿಗೆ ಕೊರೊನಾ ನಿರ್ವಹಣೆಗ ತಾವು ಮಾಡಿದ ಕೆಲಸಗಳನ್ನು ಪ್ರಚಾರಕ್ಕೆ ತರುವಂತೆ ನಿರ್ಧರಿಸಲಾಗಿದೆ.
ಇದನ್ನೂ ಓದಿ : ಆನೆಗಳಾಯಿತು, ಈಗ ಚಿರತೆಗಳ ಸರದಿ : ಮೈಸೂರಿನಲ್ಲಿ ವನ್ಯ ಪ್ರಾಣಿಗಳಿಗೆ ವಿಷ ಪ್ರಾಶನ


