ವಾಟ್ಸಾಪ್ ಗ್ರೂಪ್‌ನಲ್ಲಿ ಗಣೇಶ ಚತುರ್ಥಿಗೆ ಶುಭಾಶಯ ಕೋರಿ ಹಾಕಲಾಗಿದ್ದ ಪೋಸ್ಟ್‌ಗಳನ್ನು (ಸಂದೇಶ) ಅಳಿಸಿದ ಆರೋಪದ ಮೇಲೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ newindianexpress.com ವರದಿ ಮಾಡಿದೆ.
ಕೋಟಾ ಜಿಲ್ಲೆಯ ಲಾತೂರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಾಂಶುಪಾಲ ಶಫಿ ಮೊಹಮ್ಮದ್ ಅನ್ಸಾರಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು ಶಾಲೆಯ ಬಳಿ ಜಮಾಯಿಸಿ ಪ್ರತಿಭಟಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಪೋಷಕರು ಮತ್ತು ಶಿಕ್ಷಕರನ್ನು ಒಳಗೊಂಡ ಶಾಲೆಯ ವಾಟ್ಸಾಪ್ ಗ್ರೂಪಿನಿಂದ ಗಣೇಶನ ಚಿತ್ರ ಇರುವ ಪೋಸ್ಟ್‌ಗಳನ್ನು ಅನ್ಸಾರಿ ಅವರು ಅಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಮಾತನಾಡಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ನರೇಂದ್ರ ನಾಡಾರ್ ಅವರು, “ಶಾಲಾ ಆಡಳಿತ ಮತ್ತು ಅಭಿವೃದ್ಧಿ ಸಮಿತಿ (ಎಸ್‌ಎಂಡಿಸಿ) ಎಂಬ ಹೆಸರಿನ ವಾಟ್ಸಾಪ್ ಗ್ರೂಪಿನಲ್ಲಿ ಗಣೇಶ ಚತುರ್ಥಿಗೆ ಶುಭಾಶಯ ಕೋರಿ ಗ್ರಾಮಸ್ಥರು ಸಂದೇಶಗಳನ್ನು ಹಂಚಿಕೊಂಡಿದ್ದರು. ಪ್ರಾಂಶುಪಾಲ ಅನ್ಸಾರಿಯವರು ಆ ಸಂದೇಶಗಳನ್ನು ಅಳಿಸಿದ್ದಾರೆ. ಇದಾಗಿ ಎರಡು ಗಂಟೆಗಳ ಬಳಿಕ, ಶಾಲೆಯ ಶಿಕ್ಷಕರೊಬ್ಬರು ಅದೇ ರೀತಿಯ ಶುಭಾಶಯದ ಸಂದೇಶ ಹಾಕಿದ್ದರು. ಅದನ್ನೂ ಅನ್ಸಾರಿ ಅಳಿಸಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ” ಎಂದು ತಿಳಿಸಿದ್ದಾರೆ.
ಕೋಮು ಸೌಹಾರ್ದತೆ ಕದಡಿದ ಆರೋಪದ ಮೇಲೆ ಅನ್ಸಾರಿಯವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಸ್ಥಳೀಯರು ಶಾಲೆಯ ಬಳಿ ಜಮಾಯಿಸಿ ಪ್ರತಿಭಟಿಸಿದ್ದರು. ಈ ವಿಷಯ ತಿಳಿದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಹೆಚ್‌ಒ) ಉತ್ತಮ್ ಸಿಂಗ್ ಸೇರಿದಂತೆ ಬಾಪವಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಿಸಲು ಘಟನಾ ಸ್ಥಳಕ್ಕೆ ತೆರಳಿದ್ದರು.
ಕೋಮು ಸೌಹಾರ್ದತೆಗೆ ಭಂಗ ತಂದ ಆರೋಪದ ಮೇಲೆ ಅನ್ಸಾರಿ ಅವರನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)ಯ ಸೆಕ್ಷನ್ 127ರ ಅಡಿಯಲ್ಲಿ ಬಂಧಿಸಲಾಗಿದೆ. ಆದರೆ, ಅವರಿಗೆ ಜಾಮೀನು ಮಂಜೂರಾಗಿದ್ದು, ಸಂಜೆಯ ವೇಳೆಗೆ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ, ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಎಸ್‌ಹೆಚ್‌ಒ ಉತ್ತಮ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೌದ್ಧ ಧರ್ಮ ಎಂಬ ಕಾರಣಕ್ಕೆ ದಲಿತ ಯುವಕನಿಗೆ ದೇವಸ್ಥಾನ ಪ್ರವೇಶ ನಿರಾಕರಣೆ; ಶಿವಸೇನಾ ಮುಖಂಡನ ಬೆಂಬಲಿಗರಿಂದ ಸಾಮೂಹಿಕ ಹಲ್ಲೆ


