ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ಸು ಪಲ್ಟಿಯಾಗಿ 8 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರದ ಬಳಿ ಸಂಭವಿಸಿದೆ. ದುರಂತದಲ್ಲಿ ಹಲವರು ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಬಸ್ ಪಾವಗಡಿಂದ ತುಮಕೂರಿಗೆ ಬರುತ್ತಿತ್ತು. ಬೆಳಗ್ಗೆ 6.05ಕ್ಕೆ ಪಾವಗಡದಿಂದ ಹೊರಡುವ ವಿಜಯಲಕ್ಷ್ಮಿ ಬಸ್ 9.10ಕ್ಕೆ ತುಮಕೂರು ತಲುಪುತ್ತಿತ್ತು. ಆದರೆ ಸುಮಾರು 8.45ರಲ್ಲಿ ಜಟ್ಟಿ ಅಗ್ರಹಾರ ಬಳಿ ಬರುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಬಸ್ ಎಡಭಾಗಕ್ಕೆ ಪಲ್ಟಿ ಹೊಡೆದಿದೆ. ವೇಗದ ರಭಸಕ್ಕೆ ಬಸ್ ಮುಂಭಾಗದ ಗಾಜು ಪುಡಿಪುಡಿಯಾಗಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಗೆ ಸಾಗಿಸಲಾಗಿದೆ. ದುರಂತವನ್ನು ವೀಕ್ಷಿಸಲು ನೂರಾರು ಮಂದಿ ಸ್ಥಳದಲ್ಲಿ ಸೇರಿದರು. ದುಃಖದ ವಾತಾವರಣ ಮಡುಗಟ್ಟಿತ್ತು.
ಇದೇ ವೇಳೆ ಆಂಬುಲೆನ್ಸ್ ಸ್ಥಳಕ್ಕೆ ಬಂದಿತಾದರೂ ಟಯರ್ ಪಂಚರ್ ಆದ ಹಿನ್ನೆಲೆಯಲ್ಲಿ ಚಾಲಕ ಟಯರ್ ಬದಲಿಸಲು ನಿರತನಾಗಿದ್ದ ದೃಶ್ಯ ಕಂಡುಬಂತು. ಇದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಮೊದಲೇ ಇದೆಲ್ಲವನ್ನು ಪರಿಶೀಲಿಸಿಕೊಂಡು ಬರಬೇಕಾಗಿತ್ತು. ಪಂಚರ್ ಆಗಿರುವುದು ಗೊತ್ತಿದ್ದರೂ ಚಾಲಕ ನಿರ್ಲಕ್ಷ್ಯ ವಹಿಸಿದ್ದಾನೆ ಎಂದು ದೂರಿದರು.
ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠ ಡಾ.ವಂಶಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


