ಸಿಡ್ನಿಯ ಹಾರ್ಬರ್ ಬ್ರಿಡ್ಜ್‌ನ ಐತಿಹಾಸಿಕ ರ‍್ಯಾಲಿಯ ಬಳಿಕ, ಆಸ್ಟ್ರೇಲಿಯಾದಾದ್ಯಂತ ಭಾನುವಾರ (ಆ.24) ಗಾಝಾ ಪರ ಬೃಹತ್ ಪ್ರತಿಭಟನೆಗಳು ನಡೆದಿವೆ.
ಗಾಝಾದಲ್ಲಿ ನರಮೇಧವನ್ನು ನಿಲ್ಲಿಸಬೇಕು, ಅಲ್ಲಿ ಕೃತಕ ಕ್ಷಾಮ ಸೃಷ್ಟಿಸಿರುವ ಇಸ್ರೇಲ್‌ಗೆ ಜಾಗತಿಕ ನಿರ್ಬಂಧ ಹೇರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಮಾನ್ಯತೆ ನೀಡುವುದಾಗಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಆಗಸ್ಟ್ 11ರಂದು ಘೋಷಿಸಿದ್ದಾರೆ. ಇದು ಆಸ್ಟ್ರೇಲಿಯಾ ಮತ್ತು ಇಸ್ರೇಲ್ ನಡುವಿನ ಸಂಬಂಧ ಹದೆಗೆಟ್ಟಿರುವುದನ್ನು ಸೂಚಿಸಿದೆ.
ಈ ಬೆಳವಣಿಗೆಯು ಆಸ್ಟ್ರೇಲಿಯಾದ ಗಾಝಾ ಪರ ಪ್ರತಿಭಟನೆಗೆ ಆಡಳಿತವೇ ಬೆಂಬಲ ನೀಡಿದಂತಾಗಿದೆ. ಪ್ರತಿಭಟನಾಕಾರರಿಗೂ ಯಾವುದೇ ಅಡತಡೆಗಳು ಎದುರಾಗುತ್ತಿಲ್ಲ ಎಂದು ವರದಿಗಳು ಹೇಳಿವೆ.
ಭಾನುವಾರ ಆಸ್ಟ್ರೇಲಿಯಾದಾದ್ಯಂತ 40ಕ್ಕೂ ಹೆಚ್ಚು ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ ಎಂದು ‘ಪ್ಯಾಲೆಸ್ಟೈನ್ ಆಕ್ಷನ್ ಗ್ರೂಪ್’ ತಿಳಿಸಿದೆ. ವಿವಿಧ ರಾಜ್ಯಗಳ ರಾಜಧಾನಿಗಳಾದ ಸಿಡ್ನಿ, ಬ್ರಿಸ್ಬೇನ್ ಮತ್ತು ಮೆಲ್ಬೋರ್ನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬ್ರಿಸ್ಬೇನ್‌ನಲ್ಲಿ ಸುಮಾರು 50,000 ಜನರು ಸೇರಿದಂತೆ ದೇಶದಾದ್ಯಂತ ಸುಮಾರು 350,000ಕ್ಕೂ ಹೆಚ್ಚು ಜನರು ಪ್ರತಿಭಟನಾ ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಗ್ರೂಪ್ ಹೇಳಿದೆ.
ಆದರೆ, ಪೊಲೀಸರು ಬ್ರಿಸ್ಬೇನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇವಲ 10,000 ಜನರು ಮಾತ್ರ ಭಾಗವಹಿಸಿದ್ದಾರೆಂದು ಅಂದಾಜಿಸಿದ್ದಾರೆ. ಸಿಡ್ನಿ ಮತ್ತು ಮೆಲ್ಬೋರ್ನ್‌ನಲ್ಲಿನ ಜನಸಂದಣಿಯ ಗಾತ್ರದ ಬಗ್ಗೆ ಪೊಲೀಸರು ಖಚಿತ ಮಾಹಿತಿ ನೀಡಿಲ್ಲ ಎಂದು ಅಲ್ ಜಝೀರಾ ವರದಿ ಮಾಡಿದೆ.
ಸಿಡ್ನಿಯ ಪ್ರತಿಭಟನೆಯ ಆಯೋಜಕ ಜೋಶ್ ಲೀಸ್ ಅವರು, “ಆಸ್ಟ್ರೇಲಿಯನ್ನರು ಗಾಝಾದಲ್ಲಿ ನರಮೇಧವನ್ನು ಕೊನೆಗೊಳಿಸಬೇಕು ಮತ್ತು ನಮ್ಮ ಸರ್ಕಾರ ಇಸ್ರೇಲ್‌ಗೆ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಲು ಬೀದಿಗೆ ಬಂದಿದ್ದಾರೆ” ಎಂದು ಹೇಳಿದ್ದಾರೆ. ಪ್ರತಿಭಟಾ ರ‍್ಯಾಲಿಗಳಲ್ಲಿ ಭಾಗವಹಿಸಿದವರು ಪ್ಯಾಲೆಸ್ತೀನ್ ಧ್ವಜಗಳನ್ನು ಹಿಡಿದು ‘ಫ್ರೀ ಫ್ರೀ ಪ್ಯಾಲೆಸ್ಟೈನ್’ ಎಂಬ ಘೋಷಣೆಗಳನ್ನು ಕೂಗಿದರು ಎಂದು ಅಲ್ ಜಝೀರಾ ವಿವರಿಸಿದೆ.
ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಮಾನ್ಯತೆ ನೀಡುತ್ತೇವೆ ಎಂಬ ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲ್ಬನೀಸ್ ಅವರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ಆಸ್ಟ್ರೇಲಿಯಾದಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಿವೆ.
ಫ್ರಾನ್ಸ್, ಯುನೈಟೆಡ್ ಕಿಂಗ್‌ಡಂ ಮತ್ತು ಕೆನಡಾ ದೇಶಗಳು ದ್ವಿರಾಷ್ಟ್ರ ಸೂತ್ರವನ್ನು ಬೆಂಬಲಿಸಿದ್ದು, ಪ್ಯಾಲೆಸ್ತೀನ್‌ಗೆ ಪ್ರತ್ಯೇಕ ರಾಷ್ಟ್ರದ ಮಾನ್ಯತೆ ನೀಡುವುದಾಗಿ ಘೋಷಿಸಿವೆ. ಇದಕ್ಕೆ ಆಸ್ಟ್ರೇಲಿಯಾದ ಅಲ್ಬನೀಸ್ ಅವರ ಲೇಬರ್ ಸರ್ಕಾರ ಧ್ವನಿಗೂಡಿಸಿದೆ. ಇಸ್ರೇಲ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.
ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಆಗಸ್ಟ್ 3ರಂದು ಪ್ಯಾಲೆಸ್ತೀನ್ ಪರ ಅಥವಾ ಗಾಝಾ ಜನತೆಯ ಪರ ಬೃಹತ್ ಪ್ರತಿಭಟನೆ ನಡೆದಿತ್ತು. ಲಕ್ಷಾಂತರ ಜನರು ಐತಿಹಾಸಿಕ ಹಾರ್ಬರ್ ಬ್ರಿಡ್ಜ್ ಮೇಲೆ ರ್‍ಯಾಲಿ ನಡೆಸಿದ್ದರು. ಆ ಬಳಿಕ ಆಗಸ್ಟ್ 11ರಂದು ಪ್ರಧಾನಿ ಅಲ್ಬನೀಸ್ ಪ್ರತ್ಯೇಕ ಪ್ಯಾಲೆಸ್ತೀನ್ ರಾಷ್ಟ್ರದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಯುದ್ಧ ನೀತಿಯನ್ನು ಉಲ್ಲಂಘಿಸಿದ ಕಾರಣಕ್ಕೆ ಜಾಗತಿಕವಾಗಿ ಖಂಡನೆಗೆ ಗುರಿಯಾಗಿರುವ ಇಸ್ರೇಲ್, ಗಾಝಾ ಮೇಲಿನ ತನ್ನ 22 ತಿಂಗಳ ಸುದೀರ್ಘ ದಾಳಿಯಲ್ಲಿ 62,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಹತ್ಯೆ ಮಾಡಿದೆ. ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಲ್ಲಿನ ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ವಿರುದ್ಧ ಯುದ್ಧ ಅಪರಾಧಗಳಿಗಾಗಿ ಬಂಧನ ವಾರಂಟ್ ಹೊರಡಿಸಿದೆ.


