ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ತನ್ನ ಪಯಣವನ್ನು ಸೆಮಿಫೈನಲ್ ನಲ್ಲಿಯೇ ಕೊನೆಗೊಳಿಸಿದರೂ ಫೈನಲ್ ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಹಣಾಹಣಿ ಎಲ್ಲಾ ಕ್ರಿಕೆಟ್ ಪ್ರೇಮಿಗಳಲ್ಲಿ ತುದಿಗಾಲಲ್ಲಿ ನಿಲ್ಲಿಸಿತ್ತು. ಈಗ ವಿಶ್ವಕಪ್ ಜ್ವರ ನಿಧಾನವಾಗಿ ಇಳಿಯುತ್ತಿದೆ. ಅದರ ಬೆನ್ನಲ್ಲೇ ಪ್ರೊ ಕಬ್ಬಡಿ ಹವಾ ಜುಲೈ 20 ರಿಂದ ಆರಂಭವಾಗುತ್ತಿದೆ.
ಭಾರತದಲ್ಲಿ ಅತಿ ಹೆಚ್ಚು ಕ್ರಿಕೆಟ್ ಪ್ರೇಮಿಗಳಿದ್ದರೂ ಸಹ ಕಬ್ಬಡ್ಡಿ ನೋಡುವವರ ಸಂಖ್ಯೆಯೇನು ಕಡಿಮೆಇಲ್ಲ. ಅದರಲ್ಲೂ 2014ರಿಂದ ಪ್ರೊ ಕಬ್ಬಡ್ಡಿ ಆವೃತ್ತಿ ಆರಂಭವಾದಾಗಿನಿಂದ ಕಬ್ಬಡ್ಡಿ ನೋಡಿ ಆನಂದಿಸುವವರ ಸಂಖ್ಯೇ ದಿನೇ ದಿನೇ ಏರುತ್ತಲೇ ಇದೆ. ಕಳದ ವರ್ಷಾಂತ್ಯದಲ್ಲಿ ಜರುಗಿದ 6ನೇ ಆವೃತ್ತಿಯಲ್ಲಂತೂ ಮನೆಮಂದಿಯೆಲ್ಲ ಕಬ್ಬಡ್ಡಿ ನೋಡುವ ಮೂಲಕ ಸಂಭ್ರಮಿಸಿದರು. ಆ ಸಂಭ್ರಮ ಈಗ ಮತ್ತೆ ಬರಲಿದೆ. ಮಶಾಲ್ ಸ್ಪೋಟ್ರ್ಸ್ ಪ್ರೈವೈಟ್ ಲಿಮಿಡೆಟ್ ವತಿಯಿಂದ ನಡೆಯುವ ಪ್ರೊ ಕಬ್ಬಡ್ಡಿ ಸೀಸನ್ 7, ಜುಲೈ 20 ರಿಂದ ಆರಂಭವಾಗಲಿದ್ದು ಕಬ್ಬಡ್ಡಿ ಪ್ರೇಮಿಗಳ ಮನದಲ್ಲಿ ಉತ್ಸಾಹ ಪುಟಿದೆದ್ದಿದೆ.
ಜುಲೈ 20 ರಂದು ಹೈದರಾಬಾದ್ ನ ಗಂಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ತೆಲಗು ಟೈಟನ್ಸ್ ಮತ್ತು ಯು ಮುಂಬಾ ತಂಡಗಳು ಸೆಣಸಲಿವೆ. ಅದೇ ದಿನ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಪಟ್ನಾ ಪೈರೇಟ್ಸ್ ತಂಡಗಳ ನಡುವೆ ಹಣಾಹಣಿ ನಡೆಯಲಿದೆ.
ಆಗಸ್ಟ್ 31 ರಿಂದ ಸೆಪ್ಟಂಬರ್ 6ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿಯೂ ಕಬ್ಬಡ್ಡಿ ಪಂದ್ಯಗಳು ನಡೆಯಲಿದ್ದು ಬೆಂಗಳೂರಿನ ಅಭಿಮಾನಿಗಳು ಸಹ ನೇರವಾಗಿ ಕಬ್ಬಡ್ಡಿ ನೋಡಬಹುದಾಗಿದೆ. ಅಕ್ಟೋಬರ್ 19 ರಂದು ಫೈನಲ್ ಪಂದ್ಯ ನಡೆಯಲಿದೆ.
ಈ ಸಲ ಕಪ್ ನಮ್ಮದೆ ಎಂದು ಬೆಂಗಳೂರಿನ ಆರ್‍ಸಿಬಿ ತಂಡದ ಪರವಾಗಿ ಅಭಿಮಾನಿಗಳು ಮೂರು ವರ್ಷದಿಂದ ಹಂಬಲಿಸಿ ಸೋತು ಕಂಗಾಲಾದಾಗ ಕೊನೆಗೂ ಕಪ್ ತಂದುಕೊಟ್ಟವರು ಬೆಂಗಳೂರು ಬುಲ್ಸ್. ಹೌದು ಕ್ರಿಕೆಟ್‍ನಲ್ಲಿ ಬೆಂಗಳೂರಿಗೆ ಕಪ್ ಸಿಗದ ನೋವನ್ನು ಮರೆಸಿದ್ದು ಕಬ್ಬಡ್ಡಿಯಲ್ಲಿ ಬೆಂಗಳೂರು ಕಪ್ ಗೆದ್ದುದ್ದು. ಇದೇ ವರ್ಷ ಜನವರಿ 5ರಂದು ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವನ್ನು ಮಣಿಸಿ ಬೆಂಗಳೂರು ತಂಡ ಪ್ರಶಸ್ತಿ ಜಯಿಸಿ ಸಂಭ್ರಮಿಸಿತು. ಆ ಪಂದ್ಯದ ಹೀರೋ ಪವನ್ ಕುಮಾರ್ ಶೆಹ್ರಾವತ್ ಕರ್ನಾಟಕ ಮನೆ ಮಾತಾದರು.

ಇದುವರೆಗೂ ನಡೆದ ಆರು ಆವೃತ್ತಿಗಳಲ್ಲಿ ಪಟ್ನಾ ಪೈರೇಟ್ಸ್ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮೊದಲ ಬಾರಿಗೆ ಜೈಪುರ್ ಪಿಂಕ್ ಪ್ಯಾಂಥರ್ಸ್, ಎರಡನೇ ಬಾರಿಗೆ ಯು ಮುಂಬಾ ಚಾಂಪಿಯನ್ ಆದರೆ 3,4,5 ನೇ ಆವೃತ್ತಿಗಳಲ್ಲಿ ಪಟ್ನಾ ಪೈರೇಟ್ಸ್ ಸತತವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2018ರಲ್ಲಿ 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಅಮೋಘ ಪ್ರದರ್ಶನ ಮೂಲಕ ಚಾಂಪಿಯನ್ ಆಗಿ ಸಂಭ್ರಮಿಸಿದೆ.
12 ಐಪಿಎಲ್ ಸೀಸನ್‍ಗಳಲ್ಲಿ ಪ್ರಶಸ್ತಿ ಜಯಿಸಲಾಗದ ಬೆಂಗಳೂರು, 6 ಸೀಸನ್‍ಗಳ ಕಬ್ಬಡ್ಡಿಯಲ್ಲಿ ಪ್ರಸಸ್ತಿ ಜಯಿಸಿದೆ ಎಂಬುದು ಮೇಲ್ನೋಟಕ್ಕೆ ಕಬ್ಬಡ್ಡಿಯಲ್ಲಿ ಮುಂದಿದೆ ಎನ್ನಬಹುದು. ಇಂತಹ ಕಬ್ಬಡ್ಡಿ ಪಂದ್ಯಗಳು ಆರಂಭವಾಗಲು ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇದೆ. ಈ ಕಬ್ಬಡ್ಡಿ ಜುಲೈನಿಂದ ಆರಂಭವಾಗಿ ಅಕ್ಟೊಬರ್‍ವರೆಗೂ ತನ್ನ ಪ್ರಭುತ್ವ ಸಾಧಿಸಲಿದೆ. ಸದ್ಯಕ್ಕೆ ವಿಶ್ವಕಪ್ ಗುಂಗಿನಿಂದ ಹೊರಬಂದಿರುವ ಕ್ರೀಡಾ ಪ್ರೇಮಿಗಳಿಗೆ ಕಬ್ಬಡ್ಡಿಯ ರಸದೌತಣ ಸಿಗುವುದಂತೂ ಖಚಿತ. ಬೆಂಗಳೂರು ಪರವಾಗಿ ಪವನ್ ಕುಮಾರ್ ಶೆಹ್ರಾವತ್ ಮತ್ತು ನಾಯಕ ರೋಹಿತ್ ಕುಮಾರ್ ಪ್ರಮುಖ ಆಕರ್ಷಣೆಯಾಗಿದ್ದಾರೆ.


