Homeಮುಖಪುಟಫೆ:13-ಎಂಡಿಎನ್ ಜನ್ಮದಿನ ನೆನಪು; ರೈತರಿಗೆ ಕಾನೂನು ಪಾಠ ಕಲಿಸಿದ ಪ್ರೊಫೆಸರ್

ಫೆ:13-ಎಂಡಿಎನ್ ಜನ್ಮದಿನ ನೆನಪು; ರೈತರಿಗೆ ಕಾನೂನು ಪಾಠ ಕಲಿಸಿದ ಪ್ರೊಫೆಸರ್

- Advertisement -
- Advertisement -

ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಗೇಣಿದಾರರ ಹೋರಾಟ ನಡೆಯುತ್ತಿತ್ತು. ಮನೆಗಳನ್ನು ಜಪ್ತಿ ಮಾಡಲಾಗುತ್ತಿತ್ತು. ಹೆಣ್ಣುಮಕ್ಕಳನ್ನು ಒಂದುಗೂಡಿಸಿ ಹೋರಾಟ ಮಾಡುತ್ತಿದ್ದ ಕಾಲವದು. ಆ ಸಂದರ್ಭದಲ್ಲಿ ಕಡಿದಾಳು ಶಾಮಣ್ಣನವರು ಪರಿಚಯವಾದರು. ಶಿವಮೊಗ್ಗ ಜಿಲ್ಲೆ, ಹೊಳೆಹೊನ್ನೂರು ವ್ಯಾಪ್ತಿಯ ಹನುಮಂತಪುರದಲ್ಲಿ ರೈತಸಂಘದ ಸಭೆಯಾಗುತ್ತಿರುವ ಸಂಬಂಧ ಶಾಮಣ್ಣ ಪತ್ರ ಬರೆದಿದ್ದರು. ಅನೇಕರು ಅಲ್ಲಿಗೆ ಹೋದೆವು. ಆ ಸಭೆಯಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಎನ್.ಡಿ.ಸುಂದರೇಶ್, ಪ್ರೊ.ರವಿವರ್ಮಕುಮಾರ್ ಸೇರಿದಂತೆ ಅನೇಕ ರೈತನಾಯಕರು ಇದ್ದರು. ಸಾಗರದಂತೆ ಜನ ಸೇರಿದ್ದರು. ಮೊದಲ ಬಾರಿಗೆ ನಂಜುಂಡಸ್ವಾಮಿಯವರ ಭಾಷಣ ಕೇಳಿದೆ. ಅಲ್ಲಿಂದ ಅವರ ವಿಚಾರ ಸ್ಪಷ್ಟತೆಗೆ ಮಾರುಹೋಗಿ, ನಂತರದ ದಿನಗಳಲ್ಲಿ ಹಾಸನ ಜಿಲ್ಲೆಗೆ ಅವರನ್ನು ಆಹ್ವಾನಿಸಿದೆವು.

ಅಧಿಕಾರಿಗಳು ಹೇಗೆ ವಂಚಿಸುತ್ತಿದ್ದಾರೆ, ಶೋಷಣೆ ಯಾವ ರೀತಿ ಆಗುತ್ತಿದೆ, ನಮ್ಮ ಭೂಮಿಯನ್ನು ಹೇಗೆ ಕಸಿಯುತ್ತಿದ್ದಾರೆ ಎಂಬುದನ್ನು ನಂಜುಂಡಸ್ವಾಮಿಯವರು ತಿಳಿಯಾಗಿ ಹೇಳುತ್ತಿದ್ದರು. ಅವರ ಭಾಷಣಗಳಿಂದ ನಮಗೆ ಹೆಚ್ಚಿನ ಸ್ಪಷ್ಟತೆ ಸಿಗುತ್ತಿತ್ತು. ಪೊಲೀಸ್‌ನವರನ್ನು ಕಂಡು ನಾವು ಮೊದಲೆಲ್ಲ ಹೆದರುತ್ತಿದ್ದ ನಮಗೆ, ’ಪೊಲೀಸ್‌ನವರಿಗೆ ಹೆದರಬಾರದು. ಅವರು ನಮ್ಮ ತೆರಿಗೆ ಹಣದಿಂದ ಸಂಬಳ, ಸವಲತ್ತು ಪಡೆಯುತ್ತಾರೆ. ಪೊಲೀಸರು ಪಬ್ಲಿಕ್ ಸರ್ವೆಂಟ್‌ಗಳು’ ಎನ್ನುತ್ತಿದ್ದರು ಪ್ರೊಫೆಸರ್. ’ಪಬ್ಲಿಕ್ ಸರ್ವೆಂಟ್’ ಎಂಬ ಪದವನ್ನು ಮೊದಲು ಕೇಳಿದ್ದು ಅವರ ಬಾಯಿಂದಲೇ. ’ಅವರು ಸಾರ್ವಜನಿಕ ಸೇವಕರು. ಸರ್ಕಾರಿ ಅಧಿಕಾರಿಗಳಾಗಬಹುದು, ರಾಜಕಾರಣಿಗಳಾಗಬಹುದು. ಅವರಿಗೆ ಊಟ, ಬಟ್ಟೆ, ಸಂಬಳವನ್ನು ಕೊಡುತ್ತಿರುವವರು ನಾವು’ ಎಂದು ಹೇಳುತ್ತಿದ್ದರು. ಪೊಲೀಸರು ಯಾರಾದರೂ ನಮ್ಮನ್ನು ಬಂಧಿಸಲು ಬಂದಾಗ, ’ನೀವು ವಾರೆಂಟ್ ತಂದಿದ್ದೀರಾ?’ ಎಂದು ಪ್ರಶ್ನಿಸಲು ನಮಗೆ ಸಾಧ್ಯವಾಯಿತು. ಒಬ್ಬ ಗ್ರಾಮೀಣ ಮಹಿಳೆಗೆ ಆತ್ಮಸ್ಥೈರ್ಯ, ಕಾನೂನು ಅರಿವು ಬಂದಿದ್ದು, ವಿಚಾರವಂತಿಕೆ ಬೆಳೆದದ್ದು ಎಂ.ಡಿ.ಎನ್ ಅವರಿಂದ.

ಸುಂದರೇಶ್

ಪೊಲೀಸರು ಜಪ್ತಿಗೆ ಬಂದಾಗ ಎಲ್ಲ ಗಂಡಸರು ಓಡಿಹೋಗಿ ತಲೆ ಮರೆಸಿಕೊಂಡುಬಿಡುತ್ತಿದ್ದರು. ಹೆಣ್ಣುಮಕ್ಕಳು ಒದ್ದಾಡುತ್ತಿದ್ದರು. ಅಂತಹ ಸಮಯದಲ್ಲಿ ನಾನು ಹೆಣ್ಣುಮಕ್ಕಳನ್ನು ಸಂಘಟನೆ ಮಾಡುತ್ತಿದ್ದೆ. ಅನಕ್ಷರಸ್ಥ ಮಹಿಳೆಯರು ಬ್ಯಾಂಕ್ ಅಧಿಕಾರಿಗಳನ್ನು ಅದ್ಭುತವಾಗಿ ಪ್ರಶ್ನಿಸಲಾರಂಭಿಸಿದರು. ಅರಳಾಳುಸಂದ್ರದ ಬ್ಯಾಂಕ್ ಅಧಿಕಾರಿಗಳನ್ನು ಕೂಡಿಹಾಕಿದ ಮಹಿಳೆಯರು, ಮೆಣಸಿನಕಾಯಿ ಘಾಟು ಹಾಕಿದ್ದರು. ಈ ಧೈರ್ಯ ಬಂದಿದ್ದು ನಂಜುಂಡಸ್ವಾಮಿಯವರಿಂದ. ರಾಜಕಾರಣಿಗಳ ಬೇಜವಾಬ್ದಾರಿತನ, ಲಂಪಟತನವನ್ನು ಬಿಡಿಸಿಬಿಡಿಸಿ ನಮಗೆ ಹೇಳುತ್ತಿದ್ದರು. ’ನಾವು ರೈತರು. ಕೊಡಬೇಕಾಗಿರುವ ಸಾಲ ತುಂಬಾ ಕಡಿಮೆ. ಆದರೆ ಸರ್ಕಾರ ನಮಗೆ ನೂರು ಕೋಟಿ ರೂ. ವಾಪಸ್ ಕೊಡಬೇಕು. ನಮ್ಮಿಂದ ಕಡಿಮೆ ಬೆಲೆಗೆ ಆಹಾರ ಖರೀದಿಸಿದ್ದಾರೆ. ನಾವು ಸಾಲಗಾರರಲ್ಲ, ಸರ್ಕಾರವೇ ಬಾಕಿದಾರ’ ಎಂಬ ಪರಿಕಲ್ಪನೆಯನ್ನು ಬಿತ್ತಿದವರು ಪ್ರೊಫೆಸರ್.

ನಮ್ಮ ಗ್ರಾಮಕ್ಕೂ ನಂಜುಂಡಸ್ವಾಮಿಯವರು ಬಂದಿದ್ದರು. 1981ರಲ್ಲಿ ರೈತಸಂಘಕ್ಕೆ ನಾಲ್ಕು ಜನ ಉಪಾಧ್ಯಕ್ಷರನ್ನು ನೇಮಿಸಲಾಯಿತು. ಆ ನಾಲ್ಕು ಜನರಲ್ಲಿ ನಾನು ಒಬ್ಬಳಾಗಿದ್ದೆ. ಎಲ್ಲಿ ಜಪ್ತಿಯಾದರೂ ಅಲ್ಲಿ ಮರುಜಪ್ತಿಗೆ ಹೋಗುತ್ತಿದ್ದೆವು. ಮೊದಲೆಲ್ಲ ರೈತರು ಸರ್ಕಾರಿ ನೌಕರರ ಬಳಿ ಕೈಮಡಚಿ ನಿಲ್ಲುತ್ತಿದ್ದರು. ಆದರೆ ರೈತಸಂಘದಿಂದಾಗಿ ಧೈರ್ಯವಾಗಿ ಮಾತನಾಡಲು ಕಲಿತರು.

’ನಿಮ್ಮ ಮನೆಗಳ ಜಪ್ತಿಗೆ ಬಂದರೆ ಮುದ್ದೆ ಕೋಲು, ಪೊರಕೆ ತೆಗೆದುಕೊಳ್ಳಿ’ ಎಂದು ಪ್ರೊಫೆಸರ್ ಹೇಳುತ್ತಿದ್ದರು. ತುಮಕೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪಾವಟೆ ಎಂಬಾತನಿದ್ದ. ರೈತಸಂಘದ ಬೋರ್ಡ್‌ಗಳನ್ನು ಕಿತ್ತುಹಾಕಿ ಎಂದು ಹೇಳಿಕೆ ನೀಡಿದ್ದ. ಬೋರ್ಡ್‌ಗಳನ್ನು ಏನಾದರೂ ಮುಟ್ಟಿದರೆ ಹೆಣ್ಣು ಮಕ್ಕಳು ಕಸಪೊರಕೆ ತೆಗೆದುಕೊಂಡು ಉತ್ತರ ಕೊಡುತ್ತೇವೆ ಎಂದು ಸ್ಟೇಟ್‌ಮೆಂಟ್ ಕೊಟ್ಟಿದ್ದೆವು. ಇಂತಹ ಹೋರಾಟಗಳಿಗೆ ಆಗಾಗ ಗೆಲುವು ಸಿಕ್ಕರೂ, ಹತ್ತು ವರ್ಷಗಳ ನಂತರದಲ್ಲಿ ಆಗುವ ಸಮಸ್ಯೆಗಳ ಕುರಿತು ಪ್ರೊಫೆಸರ್ ಎಚ್ಚರಿಸುತ್ತಿದ್ದರು. ಜಾಗತೀಕರಣ ಬಂದರೆ ನಾವು ಜೀತದ ಆಳಾಗುತ್ತೇವೆ. ಜಾಗತೀಕರಣ ನಮ್ಮ ಅಸ್ಮಿತೆಯನ್ನು ನಾಶ ಮಾಡುತ್ತದೆ ಎನ್ನುತ್ತಿದ್ದರು. ಅವರು ಹೇಳಿದ್ದು ಭವಿಷ್ಯವಾಣಿಯೋ ಎಂಬಂತೆ ಇಂದು ನಮ್ಮ ಮುಂದೆ ಎಲ್ಲವೂ ಅನಾವರಣಗೊಳ್ಳುತ್ತಿದೆ.

ರೈತರ ಅನ್ನ ತಿಂದು ರೈತರಿಗೆ ದ್ರೋಹ ಬಗೆದಿರುವ ಗುಂಡೂರಾವ್ ಸರ್ಕಾರಕ್ಕೆ ಓಟು ಕೊಡಬೇಡಿ, ತೆರಿಗೆಯನ್ನು ಕಟ್ಟಬೇಡಿ ಎಂದು ನಂಜುಂಡಸ್ವಾಮಿ ಗುಡುಗಿದರು. ನಂತರ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಬಂತು. ಹೆಗಡೆ ನಯವಾಗಿ ವಂಚಿಸಿದರು. ’ಹಸಿರು ಟವೆಲ್ ನನ್ನ ತಂದೆ ಸಮಾನ. ರೈತರು ಕೇಳುತ್ತಿರುವ ಡಿಮ್ಯಾಂಡ್ ಡಿಮ್ಯಾಂಡೇ ಅಲ್ಲ. ಹೀಗಾಗಿ ನಮ್ಮನ್ನು ಅಧಿಕಾರಕ್ಕೆ ತನ್ನಿ. ರೈತರ ಒತ್ತಾಯಗಳನ್ನು ಈಡೇರಿಸುತ್ತೇನೆ’ ಎಂದು ಹೆಗಡೆ ಹೇಳಿದ್ದರು. ಅಧಿಕಾರಕ್ಕೆ ಬಂದರೂ ಕೂಡ. ’ಕಾಂಗ್ರೆಸ್‌ನವರು ಲೂಟಿ ಮಾಡಿದ್ದಾರೆ. ಖಜಾನೆ ಖಾಲಿಯಾಗಿದೆ. ಆರು ತಿಂಗಳು ಅವಕಾಶ ಕೊಡಿ, ಆಮೇಲೆ ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ’ ಎಂದು ಅಧಿಕಾರಕ್ಕೆ ಬಂದಮೇಲೆ ಹೇಳಿದರು. ಮುಂದೆ ಹೆಗಡೆಯವರು ಒಡೆದು ಆಳುವ ನೀತಿ ಅನುಸರಿಸಿದರು. ರೈತಸಂಘದಲ್ಲಿ ಒಬ್ಬರನ್ನೊಬ್ಬರಿಗೆ ಎತ್ತಿಕಟ್ಟಿದ್ದರು. ಮುಂಚೂಣಿಯಲ್ಲಿದ್ದವರಿಗೆ ಸಣ್ಣಪುಟ್ಟ ಕೆಲಸವನ್ನು ಕೊಟ್ಟು ಬಾಯಿ ಮುಚ್ಚಿಸಿದರು. ಸಂಘಟನೆಯನ್ನು ವೀಕ್ ಮಾಡಲು ಯತ್ನಿಸಿದರು. ನಂಜುಂಡಸ್ವಾಮಿಯವರಿಗೆ ಇವನ್ನೆಲ್ಲಾ ಕಂಡು ಸಿಟ್ಟು ಬಂದಿತ್ತು. ಹೀಗಾಗಿ ಆ ಘಟ್ಟದಲ್ಲಿ ಅತಿ ಬೇಸರದಿಂದ ಮಾತನಾಡುತ್ತಿದ್ದರು. ಕೆಲವೊಮ್ಮೆ ಪ್ರೊಫೆಸರ್ ಮಾತನಾಡುತ್ತಿದ್ದ ರೀತಿ ನಮಗೂ ಇಷ್ಟವಾಗುತ್ತಿರಲಿಲ್ಲ. ಹೆಗಡೆಯವರು ಮಾಡುತ್ತಿರುವ ಅನ್ಯಾಯ ಎಲ್ಲರಿಗೂ ನೋವು ತಂದಿದ್ದು ನಿಜ. ಆದರೆ ಒಮ್ಮೊಮ್ಮೆ ಪ್ರೊಫೆಸರ್ ಸಿಟ್ಟಿನಿಂದ ಅತೀವ ನೋವಿನಿಂದ ಉದ್ರೇಕರಾಗಿ ಮಾತನಾಡುತ್ತಿದ್ದಾಗ ಕೆಲವು ತಕರಾರುಗಳಿದ್ದವು. ಪ್ರಶ್ನಿಸುವಷ್ಟು ಧೈರ್ಯ ಅಂದು ಇರಲಿಲ್ಲ.

’ಸಂಘಟನೆ ನನ್ನ ಕಾಲಬುಡದಲ್ಲಿದೆ’ ಎಂದು ಹೆಗಡೆ ಹೇಳಿದ್ದರು. ’ಸಂಘಟನೆಯ ಶಕ್ತಿಯನ್ನು ತೋರಿಸುತ್ತೇವೆ’ ಎಂದು ಗುಡುಗಿದ ನಂಜುಂಡಸ್ವಾಮಿಯವರು 1984ರಲ್ಲಿ ಜೈಲ್ ಬರೋ ಚಳವಳಿಗೆ ಕರೆ ನೀಡಿದರು. ’ಸಂಚಾರಕ್ಕೆ ತೊಂದರೆ ಕೊಡುತ್ತಾರೆ, ಆಸ್ಪತ್ರೆಗಳಿಗೆ ತೊಂದರೆಯಾಗುತ್ತದೆ, ಜನರಿಗೆ ತೊಂದರೆಯಾಗುತ್ತದೆ’ ಎಂದು ಜನರನ್ನು ಪ್ರಚೋದಿಸಿ ಹೋರಾಟವನ್ನು ಮುಗಿಸಲು ಹೆಗಡೆ ಸರ್ಕಾರ ಯತ್ನಿಸಿತ್ತು. ನಾವೊಂದು ಕರಪತ್ರ ಮಾಡಿಸಿ, ’ನಾವು ರಸ್ತೆಯಲ್ಲಿ ಕೂರುತ್ತೇವೆ. ತಕ್ಷಣ ನಮ್ಮನ್ನು ಜೈಲಿಗೆ ಹಾಕಬೇಕು. ರಸ್ತೆ ತಡೆ ನಮ್ಮ ಉದ್ದೇಶವಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ಜೈಲನ್ನು ತುಂಬುವುದು ನಮ್ಮ ಗುರಿ’ ಎಂದು ತಿಳಿಸಿದೆವು. ಹಾಗಾಗಿ ಇಡೀ ಕರ್ನಾಟಕದ ಎಲ್ಲ ಜೈಲುಗಳು ತುಂಬಿ ಹೋದೆವು. ಊಟ ಕೊಡಲು ಕೂಡ ಅವರಿಂದ ಆಗಲಿಲ್ಲ.

ರೈತಸಂಘವು ಚುನಾವಣಾ ರಾಜಕೀಯ ಮಾಡಲು ಇಚ್ಛಿಸಿರಲಿಲ್ಲ. ಸಂಘಟನೆಗೆ, ಹೋರಾಟಕ್ಕೆ ಸೀಮಿತವಾಗಿ ಇರಬೇಕೆಂದು ನಿರ್ಧರಿಸಿದ್ದೆವು. ಆದರೆ ಸಂಘಟನೆಯ ಹೋರಾಟಗಾರರ ಮೇಲೆ ಜಾಮೀನುರಹಿತ ಪ್ರಕರಣಗಳನ್ನು ದಾಖಲಿಸುವುದು ಸರ್ಕಾರದಿಂದ ನಡೆಯುತ್ತಿತ್ತು. ಇದಕ್ಕೆ ಉತ್ತರಿಸಬೇಕಿದ್ದರಿಂದ ಚುನಾವಣಾ ಕಣಕ್ಕೆ ಬಂದೆವು. ಮತದಾರ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಬೇಕೆಂದು ಪ್ರೊಫೆಸರ್ ಇಚ್ಛಿಸಿದರು. ’ಮತದಾರ ಅಭ್ಯರ್ಥಿ’ ಎಂಬ ಪರಿಕಲ್ಪನೆ ಜನರಿಗೆ ಸ್ಪಷ್ಟವಾಗಿರಲಿಲ್ಲ. ನಾವು ಮುಂದೆ ನಡೆಯುವ ಪಂಚಾಯಿತಿ ಮಟ್ಟದ ಚುನಾವಣೆಯಲ್ಲಿ ಮೊದಲು ಗೆದ್ದು ಬರೋಣ ಎಂದು ಪ್ರೊಫೆಸರ್ ಅವರಲ್ಲಿ ಒತ್ತಾಯಿಸಿದೆವು. ನಂಜುಂಡಸ್ವಾಮಿಯವರು ಹಠ ಹಿಡಿದರು. ಮತದಾರ ಅಭ್ಯರ್ಥಿ ಚಿಂತನೆ ರೈತಸಂಘದ ಕೈಹಿಡಿಯಲಿಲ್ಲ. ಸಂಘಟನೆಯ ಹೊರಗಿನವರು ಹೆಚ್ಚಾಗಿ ಮತದಾರ ಅಭ್ಯರ್ಥಿಗಳಾದರು. ಅನೇಕರು ಉತ್ತಮ ವ್ಯಕ್ತಿಗಳಾಗಿದ್ದರೂ ರೈತಸಂಘದಲ್ಲಿ ಇದ್ದವರಾಗಿರಲಿಲ್ಲ. ಎಲ್ಲಾದರೂ ಒಂದು ಕಡೆ ಒಬ್ಬ ನುರಿತ ರಾಜಕೀಯ ಅಭ್ಯರ್ಥಿಯನ್ನು ಹಾಕೋಣ. ಪ್ರಾಯೋಗಿಕವಾಗಿ ಒಂದಿಬ್ಬರನ್ನು ಗೆಲ್ಲಿಸೋಣ ಎಂದು ಕೇಳಿಕೊಂಡೆವು. ಪ್ರೊಫೆಸರ್ ಒಪ್ಪಲಿಲ್ಲ. ಮತದಾರ ಅಭ್ಯರ್ಥಿ ಪರಿಕಲ್ಪನೆಯಲ್ಲಿ ಪ್ರೊಫೆಸರ್ ಎಡವಿದ್ದರು.

ಜನರು ನಮ್ಮನ್ನು ಕೇಳುತ್ತಿದ್ದರು: ’ನಿಮ್ಮ ನಂಜುಂಡಸ್ವಾಮಿಯವರಿಗೆ ಜಮೀನು ಇದೆಯಾ, ಹೊಲ ಉಳೋದು ಗೊತ್ತಾ, ಮೂಗುದಾರ ಅಂದರೆ ಗೊತ್ತಾ?’ – ಎಂದೆಲ್ಲಾ. ’ನಂಜುಂಡಸ್ವಾಮಿಯವರಿಗೆ ಜಮೀನಿತ್ತು. ಆರಂಭದಲ್ಲಿ ಬೇಸಾಯ ಮಾಡಿರಬಹುದು. ಆದರೆ ಓದಲು ಹೋದಮೇಲೆ ಬೇಸಾಯ ಮಾಡದೆ ಇರಬಹುದು. ಇವೆಲ್ಲಕಿಂತ ಮುಖ್ಯವಾಗಿ ರೈತರಿಗೆ ಕಾನೂನು ಅರಿವು ನೀಡಿದವರು ಅವರು’ ಎಂದು ಹೇಳುತ್ತಿದ್ದೆವು. ಆಗ ನಂಜುಂಡಸ್ವಾಮಿಯವರು ಕೂಡ ಒಂದು ಹೇಳಿಕೆ ಕೊಟ್ಟಿದ್ದರು- ’ನಂಜನಗೂಡಿನಲ್ಲಿ ಜಮೀನಿದೆ. ಅಲ್ಲಿ ಗದ್ದೆ ನಾಟಿ ಮಾಡಬೇಕು. ಹೆಗಡೆ ತಮ್ಮ ಸಂಪುಟದ ಸಚಿವರನ್ನು ಕಳುಹಿಸಿದರೆ ನಾನು ಕೂಲಿ ಕೊಡುತ್ತೇನೆ. ಪೈರು ಕೀಳೋಕೆ ಇಂಥ ಸಚಿವರು ಬೇಕು. ಕೃಷಿ ಮಂತ್ರಿ ನಾಟಿ ಮಾಡಲು ಬೇಕು. ಹೆಗಡೆ ಸೂಪರ್‌ವೈಸರ್ ಆಗಿರಬೇಕು’ ಎಂದು ಹೇಳಿದ್ದರು. ಪ್ರಚೋದಿಸುವ ಕಿಡಿಗೇಡಿ ಹೇಳಿಕೆಗಳಿಗೆ ಅದ್ಭುತವಾದ ಪ್ರತಿ ಹೇಳಿಕೆಗಳನ್ನು ಪ್ರೊಫೆಸರ್ ನೀಡುತ್ತಿದ್ದರು.

ಒಂದು ಸಂದರ್ಭದಲ್ಲಿ ಮಹಿಳಾ ಸಂಘಟನೆ ಮಾಡಬೇಕೆಂದು ಇಚ್ಛಿಸಿದೆವು. ಮಹಿಳೆಯರ ಸಮಸ್ಯೆಗಳ ಬಗ್ಗೆ ರೈತ ಸಂಘ ಮಾತನಾಡಿಲ್ಲ ಎಂದು ಸಂಘಟಕರೊಂದಿಗೆ ಆಕ್ಷೇಪ ವ್ಯಕ್ತಪಡಿಸಿದ್ದೆ. ಮಹಿಳಾ ಸಮಾವೇಶ ಮಾಡಲು ಒಪ್ಪಿದ್ದರು. ಹೆಗಡೆಯವರ ಕ್ಷೇತ್ರದಲ್ಲಿ ಸಮಾವೇಶ ನಡೆಸಬೇಕೆಂದು ಮಹಿಳೆಯರನ್ನು ಸಂಘಟನೆ ಮಾಡಿದ್ದೆ. ಮಹಿಳೆಯರಿಗೆ ಸ್ವಾವಲಂಬನೆಯ ಕುರಿತು ಕ್ಷೇತ್ರಾದ್ಯಂತ ಪ್ರಚಾರ ಮಾಡಿದ್ದೆ. ಹಳಿಯಾಳದಲ್ಲಿ 60 ಸಾವಿರ ಮಹಿಳೆಯರು ಸೇರಿದ್ದರು. ದುರದೃಷ್ಟವಶಾತ್ ಮಹಿಳಾ ಸಮಾವೇಶದಲ್ಲಿ ಮಹಿಳೆಯರ ಸಮಸ್ಯೆಗಳ ಕುರಿತು ಗಂಭೀರ ಚರ್ಚೆಯಾಗಲಿಲ್ಲ ಎಂಬುದು ಕೂಡ ವಿವಾದ ಕೇಂದ್ರವೂ ಆಗಿತ್ತು. ನಂಜುಂಡಸ್ವಾಮಿಯವರ ಕೆಲವು ನಿರ್ಧಾರಗಳನ್ನು ಅಂದು ಪ್ರಶ್ನಿಸಿದ್ದೆ. ಇವೆಲ್ಲಾ ಈಗ ನೆನಪು..

ರೈತಸಂಘದ ಹುಟ್ಟು, ಬೆಳವಣಿಗೆ, ಅದರ ಇಂದಿನ ಸ್ಥಿತಿಯನ್ನೆಲ್ಲ ನೆನೆದರೆ ನಮ್ಮ ಮಗುವನ್ನು ನಾವೇ ಕತ್ತು ಹಿಸುಕಿ ಕೊಂದ ಹಾಗೆ ಅನಿಸುತ್ತದೆ. ಇಂದು ನಾಯಿಕೊಡೆಗಳಂತೆ ಸಂಘಟನೆಗಳು ಹುಟ್ಟಿಕೊಂಡಿವೆ. ಸಿದ್ಧಾಂತದ ಬದ್ಧತೆ ಇಲ್ಲ. ಇದನ್ನು ಬಗೆಹರಿಸಿಕೊಂಡು, ಎಲ್ಲರೂ ಒಟ್ಟಾಗಿ ಸೇರಿಕೊಂಡು, ಪ್ರಾಮಾಣಿಕವಾಗಿ ಜನರ ಹಿತಕ್ಕಾಗಿ ದುಡಿಯಬೇಕಾಗಿದೆ. ಆಗಷ್ಟೇ ನಂಜುಂಡಸ್ವಾಮಿಯವರ ಕನಸನ್ನು ಸಾಕಾರಗೊಳಿಸಲು ಸಾಧ್ಯ!

ಪಂಜಾಬ್‌ನ 120 ಸಂಘಟನೆಗಳು ಒಂದು ಬದ್ಧತೆಗೆ ಬಂದು ಹೋರಾಡಿ ಜಯ ಗಳಿಸಿದ್ದು ನಮಗೆ ಮಾದರಿಯಾಗಬೇಕಿದೆ. ಒಬ್ಬೊಬ್ಬರೇ ಹೋರಾಡಿದ್ದರೆ ಗೆಲುವು ಸಿಗುತ್ತಿರಲಿಲ್ಲ. ಎಲ್ಲರೂ ಒಟ್ಟಿಗೆ ಸೇರಿದ್ದರಿಂದ ಒಕ್ಕೂಟ ಸರ್ಕಾರವನ್ನು ಮಣಿಸಲು ಸಾಧ್ಯವಾಯಿತು. ನಿರಂತರ ಹೋರಾಟಗಳು ಇದ್ದೇ ಇರುತ್ತೇವೆ. ಸಂಘಟನೆ, ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಇದು ನಂಜುಂಡಸ್ವಾಮಿಯವರು ಕಲಿಸಿದ ಪಾಠ.

(ನಿರೂಪಣೆ): ಯತಿರಾಜ್ ಬ್ಯಾಲಹಳ್ಳಿ

ಅನಸೂಯಮ್ಮ ಅರಳಾಳುಸಂದ್ರ

ಅನಸೂಯಮ್ಮ ಅರಳಾಳುಸಂದ್ರ
ರಾಮನಗರದ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದವರು. ಕರ್ನಾಟಕ ರಾಜ್ಯ ರೈತಸಂಘ ಆರಂಭದಿಂದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರೈತ ಪರ, ಮಹಿಳಾ ಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕ.ರಾ.ರೈ.ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರು.


ಇದನ್ನೂ ಓದಿ: ರೈತ ಹೋರಾಟ; 80-90ರ ದಶಕದ ಬೆಳವಣಿಗೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...