ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ಹೊಗಳಿ, ಕಳೆದ ವರ್ಷ ಪೊಲೀಸ್ ಪ್ರಕರಣದಲ್ಲಿ ಸಿಲುಕಿದ್ದ ವಿವಾದಿತ ಪ್ರೊಫೆಸರ್ ಶೈಜಾ ಆಂಡವನ್ ಅವರನ್ನು ಯೋಜನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಆಗಿ ಕ್ಯಾಲಿಕಟ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) ಭಡ್ತಿ ನೀಡಿದೆ. ಇದು ಭಾರೀ ವಿರೋಧಕ್ಕೆ ಕಾರಣವಾಗಿದೆ.
ಪ್ರೊ. ಶೈಜಾ ಡೀನ್ ಆಗಿ ನೇಮಿಸಿ ಫೆಬ್ರವರಿ 24 ರಂದು ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಕುರಿತು ಮಾತನಾಡಿರುವ ಅವರು, “ನನ್ನ ನೇಮಕ ಎನ್‌ಐಟಿ ಕ್ಯಾಲಿಕಟ್‌ನ ನಿರ್ದೇಶಕರು ತೆಗೆದುಕೊಂಡ ನಿರ್ಧಾರ” ಎಂದು ಹೇಳಿದ್ದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಕಳೆದ ವರ್ಷದ ಜನವರಿ 30ರ ಮಹಾತ್ಮ ಗಾಂಧಿಯವರ ಪುಣ್ಯಸ್ಮರಣೆಯಂದು ಹಿಂದುತ್ವ ರಾಜಕೀಯಕ್ಕೆ ಹೆಸರುವಾಸಿಯಾದ ವಕೀಲ ಕೃಷ್ಣ ರಾಜ್ ಹಾಕಿದ್ದ ಪೋಸ್ಟ್ ಒಂದಕ್ಕೆ “ಭಾರತವನ್ನು ಉಳಿಸಿದ್ದಕ್ಕಾಗಿ ಗೋಡ್ಸೆಯ ಬಗ್ಗೆ ಹೆಮ್ಮೆಯಿದೆ” ಎಂದು ಪ್ರೊ. ಶೈಜಾ ಕಾಮೆಂಟ್ ಮಾಡಿದ್ದರು. ಆಗ ಅವರು, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿದ್ದರು.
ವ್ಯಾಪಕ ವಿರೋಧ ವ್ಯಕ್ತವಾದ ನಂತರ ಶೈಜಾ ಅವರು ಆ ಕಾಮೆಂಟ್ ಅನ್ನು ಡಿಲಿಟ್ ಮಾಡಿದ್ದರು. ಆದರೆ, ಕುನ್ನಮಂಗಲಂ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಶೈಜಾ ನಂತರ ಜಾಮೀನು ಪಡೆದರು. ವಿವಾದಿತ ಕಾಮೆಂಟ್ ಕುರಿತು ತನಿಖೆ ನಡೆಸಲು ಎನ್‌ಐಟಿ ಒಂದು ಸಮಿತಿಯನ್ನು ರಚಿಸಿತ್ತು ಮತ್ತು ಆ ಸಮಿತಿಯ ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಫೆಬ್ರವರಿ 2024 ರಂದು ದಿ ನ್ಯೂಸ್ ಮಿನಿಟ್ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ್ದ ಪ್ರೊ. ಶೈಜಾ “ನಾನು ಮೊದಲು ಕಾಮೆಂಟ್ ಮಾಡಿದಾಗ ಅದರ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ. ನಾನು ‘ವೈ ಐ ಕಿಲ್ಡ್ ಗಾಂಧಿ’ ಪುಸ್ತಕವನ್ನು ಓದಿದ್ದೆ ಮತ್ತು ಅದರಲ್ಲಿ ಉಲ್ಲೇಖಿಸಲಾದ ಕೆಲವು ಅಂಶಗಳು ನಿಜವೆಂದು ಭಾವಿಸಿದ್ದೆ. ಆದ್ದರಿಂದ ನಾನು ಕಾಮೆಂಟ್ ಮಾಡಿದ್ದೆ. ಆದರೆ, ಈಗ, ನಾನು ಆ ಕಾಮೆಂಟ್ ಮಾಡಬಾರದಿತ್ತು ಎಂದು ಅನಿಸಿತು. ಹಾಗಾಗಿ, ಅದನ್ನು ಡಿಲಿಟ್ ಮಾಡಿದೆ” ಎಂದು ಹೇಳಿದ್ದರು.
ಶೈಜಾ ಅವರನ್ನು ಡೀನ್ ಆಗಿ ಭಡ್ತಿ ನೀಡಿ ನೇಮಕ ಮಾಡಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿ ಎನ್‌ಐಟಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಹೇಳಿದೆ. “ಕೇಂದ್ರ ಸರ್ಕಾರದ ಅಡಿಯಲ್ಲಿರುವ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಕಾರ್ಯಸೂಚಿಯನ್ನು ಜಾರಿಗೊಳಿಸಲಾಗುತ್ತಿದೆ ಎಂಬುವುದನ್ನು ಶೈಜಾ ಅವರ ನೇಮಕಾತಿ ತೋರಿಸುತ್ತದೆ. ಗಾಂಧೀಜಿಯನ್ನು ಅವಮಾನಿಸಿದ ಪ್ರಾಧ್ಯಾಪಕಿಗೆ ಬಡ್ತಿ ನೀಡಲಾಗಿದೆ. ಅವರ ನೇಮಕಾತಿ ಹಿಂಪಡೆಯುವವರೆಗೆ ನಾವು ಹೋರಾಟ ನಡೆಸುತ್ತೇವೆ” ಎಂದು ಕಾಂಗ್ರೆಸ್ ಕೋಝಿಕ್ಕೋಡ್ ಜಿಲ್ಲಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೇಳಿದ್ದಾರೆ.
ಜಗ್ಗಿ ವಾಸುದೇವ್ ನೇತೃತ್ವದ ಶಿವರಾತ್ರಿಯಲ್ಲಿ ಪಾಲ್ಗೊಂಡ ಡಿಕೆಶಿ : ಕಾಂಗ್ರೆಸ್ ನಾಯಕರು, ಪ್ರಗತಿಪರರಿಂದ ಆಕ್ಷೇಪ


