ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಅವರು ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್‌ಸಿ ಮಹದೇವಪ್ಪ ಸೇರಿದಂತೆ ಅವರ ಅಪಾರ ಪ್ರಮಾಣದ ಶಿಷ್ಯವೃಂದ ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಗ್ಯಾಂಗ್ರೀನ್ ಕಾರಣದಿಂದ ಕಾಲುನೋವಿನ ಸಮಸ್ಯೆ ಎದುರಿಸುತ್ತಿದ್ದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ (ಆ.17) ಸಂಜೆ 7:30ರ ಸುಮಾರಿಗೆ ಅವರು ಹೃದಯಘಾತದಿಂದ ತಮ್ಮ ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ.
ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಪ್ರೊ.ಮಹೇಶ್ ಚಂದ್ರಗುರು ನಂತರ ಮಂಗಳೂರು ವಿ.ವಿಯ ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿದ್ದರು. ನಂತರ ಮೈಸೂರು ವಿವಿಗೆ ವರ್ಗಾವಣೆಗೊಂಡು ವಿವಿಯ ಪತ್ರಿಕೋದ್ಯಮದಲ್ಲಿ ಹಲವಾರು ಕಾರ್ಯಗಳನ್ನು ಕೈಗೊಳ್ಳಲಾಯಿತು. ಜೊತೆಗೆ ಸದಾಕಾಲ ವಿದ್ಯಾರ್ಥಿ ಸ್ನೇಹಿತರಾಗಿದ್ದ ಅವರು, ವಿವಿ ಅಷ್ಟೇ ಅಲ್ಲದೆ ರಾಜ್ಯದಾದ್ಯಂತ ಅಪಾರ ಪ್ರಮಾಣದ ವಿದ್ಯಾರ್ಥಿ ಬಳಗವನ್ನೇ ಸಂಪಾದಿಸಿದ್ದರು. 2019ರಲ್ಲಿ ಸೇವೆಯಿಂದ ನಿವೃತ್ತರಾದ ಅವರು, ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಕೋಮುವಾದದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದರು. ಜೊತೆಗೆ, ಮೈಸೂರು ದಸರಾ ವೇಳೆ ಮಹಿಷಾ ದಸರಾ ಆಚರಣೆಯಲ್ಲಿ ಇವರ ಪಾತ್ರ ಪ್ರಮುಖವಾದದ್ದು.
ಸಂತಾಪ ಸೂಚಿಸಿದ ಸಿಎಂ
ಪ್ರೊ. ಮಹೇಶ್ ಚಂದ್ರ ಗುರು ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಡಾ.ಮಹೇಶ್ ಚಂದ್ರ ಗುರು ಅವರ ನಿಧನದಿಂದ ಸಮಾಜ ಒಬ್ಬ ಚಿಂತನಶೀಲ ಮಾರ್ಗದರ್ಶಕನನ್ನು ಕಳೆದುಕೊಂಡಿದೆ” ಎಂದು ಕಂಬನಿ ಮಿಡಿದಿದ್ದಾರೆ.
“ನನಗೆ ಆತ್ಮೀಯರಾಗಿದ್ದ ಮೈಸೂರಿನ ಪ್ರಗತಿಪರ ಚಿಂತಕ ಡಾ.ಮಹೇಶ್ ಚಂದ್ರಗುರು ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಮಹೇಶ್ ಚಂದ್ರ ಗುರು ಅವರು ತರಗತಿಗಳಿಂದ ಹೊರಗೆ ಕೂಡಾ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ಬುದ್ದ, ಬಸವ, ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಡಾ.ಮಹೇಶ್ ಚಂದ್ರ ಗುರು ಎಂದೂ ಮೌನಕ್ಕೆ ಮೊರೆಹೋಗದೆ ಮತ್ತು ಪರಿಣಾಮವನ್ನೂ ಲೆಕ್ಕಿಸದೆ ನೇರವಾಗಿ ಮತ್ತು ನಿಷ್ಠುರವಾಗಿ ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದರು. ಡಾ.ಮಹೇಶ್ ಚಂದ್ರ ಗುರು ಅವರ ನಿಧನದಿಂದ ಸಮಾಜ ಒಬ್ಬ ಚಿಂತನಶೀಲ ಮಾರ್ಗದರ್ಶಕನನ್ನು ಕಳೆದುಕೊಂಡಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ” ಎಂದು ಹೇಳಿದ್ದಾರೆ.
“ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ, ಪ್ರಸ್ತುತ ವಿದ್ಯಮಾನಗಳಿಗೆ ಪ್ರಖರವಾಗಿ ಸ್ಪಂದಿಸುತ್ತಿದ್ದ ಸೈದ್ಧಾಂತಿಕ ವ್ಯಕ್ತಿ, ಆತ್ಮೀಯರೂ ಆಗಿದ್ದ ಪ್ರೊ.ಮಹೇಶ್ ಚಂದ್ರ ಗುರು ಅವರು ನಮ್ಮನ್ನು ಅಗಲಿದ್ದು ಅತ್ಯಂತ ನೋವಿನ ಸಂಗತಿ.
ಇನ್ನಷ್ಟು ಕಾಲ ಅವರು ನಮ್ಮೊಡನೆ ಮಾರ್ಗದರ್ಶಿ ಶಕ್ತಿಯಾಗಿ ಇರಬೇಕಿತ್ತು. ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಅವರ ವಿದ್ಯಾರ್ಥಿಗಳು, ಸ್ನೇಹಿತರು ಮತ್ತು ಕುಟುಂಬ ವರ್ಗದವರಿಗೆ ದೊರೆಯಲಿ ಎಂದು ನಾನು ಪ್ರಾರ್ಥಿಸುವೆನು” ಎಂದು ಸಚಿವ ಎಚ್‌ಸಿ ಮಹದೇವಪ್ಪ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ; ಆರ್‌ಜಿ ಕರ್ ಹಾಸ್ಪಿಟಲ್ ಕ್ರೈಮ್ ಸ್ಪಾಟ್ ನವೀಕರಣ; ‘ಅವಸರ ಏನಿತ್ತು..?’ ಎಂದು ಪ್ರಶ್ನಿಸಿದ ಕೋರ್ಟ್


