‘ವಿಚಾರಣೆಯಿಲ್ಲದೆ ದೀರ್ಘಕಾಲದವರೆಗೆ ಜೈಲಿನಲ್ಲಿಡುವುದು’ ಸಂವಿಧಾನದ ಅಡಿಯಲ್ಲಿ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. 2018ರ ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ.
ವಿಶೇಷ ನ್ಯಾಯಾಲಯವು ಒಂಬತ್ತು ತಿಂಗಳಲ್ಲಿ ಆರೋಪ ರೂಪಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಆರೋಪ ರೂಪಿಸುವುದು ಪ್ರಕರಣದ ವಿಚಾರಣೆ ಆರಂಭದ ಮೊದಲ ಹೆಜ್ಜೆಯಾಗಿದೆ ಎಂದಿದೆ.
ನ್ಯಾಯಮೂರ್ತಿಗಳಾದ ಎ.ಎಸ್ ಗಡ್ಕರಿ ಮತ್ತು ಕಮಲ್ ಖಾಟಾ ಅವರ ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠವು ಎಲ್ಗರ್ ಪರಿಷತ್ ಪ್ರಕರಣದಲ್ಲಿ ಜನವರಿ 8ರಂದು ಸಂಶೋಧಕ ರೋನಾ ವಿಲ್ಸನ್ ಮತ್ತು ಹೋರಾಟಗಾರ ಸುಧೀರ್ ಧಾವಳೆ ಅವರಿಗೆ ಜಾಮೀನು ನೀಡಿದೆ.
ಈ ಇಬ್ಬರು ದೀರ್ಘ ಕಾಲದಿಂದ ಸೆರೆವಾಸ ಅನುಭವಿಸುತ್ತಿರುವುದು ಮತ್ತು ಪ್ರಕರಣದ ವಿಚಾರಣೆ ಶೀಘ್ರದಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ ಎಂಬ ಅಂಶಗಳನ್ನು ಗಮನಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ವಿಲ್ಸನ್ ಮತ್ತು ಧಾವಳೆ ಅವರು ಈಗಾಗಲೇ ಆರು ವರ್ಷಗಳಿಗೂ ಹೆಚ್ಚು ಸಮಯವನ್ನು ವಿಚಾರಣೆಗೆ ಮುನ್ನ ಜೈಲಿನಲ್ಲಿ ಕಳೆದಿದ್ದಾರೆ ಎಂಬುವುದನ್ನು ಹೈಕೋರ್ಟ್ ಗಮನಿಸಿದೆ.
ಮಂಗಳವಾರ (ಜ.14) ಲಭ್ಯವಾದ ನ್ಯಾಯಾಲಯದ ವಿವರವಾದ ಆದೇಶ ಪ್ರತಿಯಲ್ಲಿ, ಆರೋಪಿಯನ್ನು ವಿಚಾರಣೆಯಿಲ್ಲದೆ ದೀರ್ಘಕಾಲದವರೆಗೆ ಸೆರೆಮನೆಯಲ್ಲಿಡುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂಬುದು ಕಾನೂನಿನ ಸ್ಥಿರ ಮತ್ತು ಮಾನ್ಯತೆ ಪಡೆದ ತತ್ವವಾಗಿದೆ ಎಂದು ಹೈಕೋರ್ಟ್ ಹೇಳಿದೆ.
“ದೀರ್ಘಕಾಲದ ಸೆರೆವಾಸ ಮತ್ತು ವಿಚಾರಣೆ ಶೀಘ್ರದಲ್ಲೇ ಪೂರ್ಣಗೊಳ್ಳುವ ಸಾಧ್ಯತೆಯಿಲ್ಲದ ಕಾರಣ, ವಿಚಾರಣಾಧೀನ ಕೈದಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅವಶ್ಯಕತೆಯಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
“ವಿಶೇಷ ನ್ಯಾಯಾಧೀಶರು (ಎನ್‌ಐಎ) ಆರೋಪಪಟ್ಟಿ ಸಲ್ಲಿಸುವ ಹಂತವನ್ನು ಮತ್ತು ಸಾಧ್ಯವಾದಷ್ಟು ವಿಚಾರಣೆಯನ್ನು ತ್ವರಿತಗೊಳಿಸುವಂತೆ ನಾವು ವಿನಂತಿಸುತ್ತೇವೆ. ಇಂದಿನಿಂದ 9 ತಿಂಗಳ ಅವಧಿಯಲ್ಲಿ ಆರೋಪಪಟ್ಟಿ ಸಲ್ಲಿಸುವ ಹಂತವನ್ನು ಪೂರ್ಣಗೊಳಿಸಬೇಕು” ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಾಲಯವು ವಿಲ್ಸನ್ ಮತ್ತು ಧಾವಳೆ ಅವರಿಗೆ ತಲಾ 1 ಲಕ್ಷ ರೂಪಾಯಿಗಳ ಭದ್ರತಾ ಠೇವಣಿ ಇಡುವಂತೆ ಸೂಚಿಸಿದೆ.
ಆದೇಶದ ಪ್ರತಿ ಈಗ ಲಭ್ಯವಿದ್ದು, ಇಬ್ಬರೂ ತಮ್ಮ ಜಾಮೀನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ವಿಶೇಷ ನ್ಯಾಯಾಲಯವನ್ನು ಸಂಪರ್ಕಿಸಬಹುದು. ನಂತರ ಅವರನ್ನು ನವಿ ಮುಂಬೈನ ತಲೋಜಾ ಜೈಲಿನಿಂದ ಬಿಡುಗಡೆ ಮಾಡಲಾಗುತ್ತದೆ.
ವಿಚಾರಣೆಯ ಸಮಯದಲ್ಲಿ ವಿಲ್ಸನ್ ಮತ್ತು ಧಾವಳೆ ಅವರು ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರಾಗಬೇಕು. ತಮ್ಮ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸಬೇಕು ಮತ್ತು ವಿಚಾರಣೆ ಮುಗಿಯುವವರೆಗೆ ನಗರವನ್ನು ಬಿಟ್ಟು ಹೋಗಬಾರದು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಬಂಧಿಸಲ್ಪಟ್ಟ 16 ಜನರಲ್ಲಿ ವಿಲ್ಸನ್ ಮತ್ತು ಧಾವಳೆ ಸೇರಿದಂತೆ ಹತ್ತು ಮಂದಿ ಇಲ್ಲಿಯವರೆಗೆ ಜಾಮೀನು ಪಡೆದಿದ್ದಾರೆ.
ಡಿಸೆಂಬರ್ 31, 2017ರಂದು ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಆರೋಪಿಗಳು ಪ್ರಚೋದನಕಾರಿ ಭಾಷಣಗಳನ್ನು ಮಾಡಿ, ಮರುದಿನ ಜಿಲ್ಲೆಯ ಕೋರೆಗಾಂವ್-ಭೀಮಾದಲ್ಲಿ ಹಿಂಸಾಚಾರಕ್ಕೆ ಕಾರಣರಾದರು ಎಂದು ಆರೋಪಿಸಿ ಪುಣೆ ಪೊಲೀಸರು 2018ರಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸರ ಪ್ರಕಾರ, ಎಲ್ಗರ್ ಪರಿಷತ್ ಸಮಾವೇಶಕ್ಕೆ ಮಾವೋವಾದಿಗಳು ಬೆಂಬಲ ನೀಡಿದ್ದರು.
ಪ್ರಕರಣದಲ್ಲಿ ಜಾಮೀನು ಪಡೆದ ಇತರ ಆರೋಪಿಗಳಲ್ಲಿ ವರವರ ರಾವ್, ಸುಧಾ ಭಾರದ್ವಾಜ್, ಆನಂದ್ ತೇಲ್ತುಂಬ್ಡೆ, ವೆರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೇರಾ, ಶೋಮಾ ಸೇನ್, ಗೌತಮ್ ನವಲಖಾ ಮತ್ತು ಮಹೇಶ್ ರಾವತ್ ಸೇರಿದ್ದಾರೆ.
ಆದಾಗ್ಯೂ, ಎನ್‌ಐಎ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಆದೇಶವನ್ನು ಪ್ರಶ್ನಿಸಿದ ನಂತರ ಮಹೇಶ್ ರಾವತ್ ಅವರು ಜೈಲಿನಲ್ಲೇ ಇದ್ದರು. ಎಲ್‌ಎಲ್‌ಬಿ ಪರೀಕ್ಷೆಗೆ ಹಾಜರಾಗಲು ಅನುವು ಮಾಡಿಕೊಡಲು ವಿಶೇಷ ಎನ್‌ಐಎ ನ್ಯಾಯಾಲಯ ಮಂಗಳವಾರ (ಜ.14) ಅವರಿಗೆ 18 ದಿನಗಳ ಮಧ್ಯಂತರ ಜಾಮೀನು ನೀಡಿದೆ.
ಆರೋಪಿಗಳಲ್ಲಿ ಒಬ್ಬರಾದ ಸ್ಟಾನ್ ಸ್ವಾಮಿ 2021ರಲ್ಲಿ ಜೈಲಿನಲ್ಲಿದ್ದಾಗ ನಿಧನರಾದರು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರಿಂದ ವಹಿಸಿಕೊಂಡು ಆರೋಪಪಟ್ಟಿ ಸಲ್ಲಿಸಿತ್ತು. ಆದರೆ, ವಿಶೇಷ ನ್ಯಾಯಾಲಯವು ಇನ್ನೂ ಆರೋಪಗಳನ್ನು ರೂಪಿಸಿಲ್ಲ.
ಜೂನ್ 2018ರಲ್ಲಿ ದೆಹಲಿಯ ತಮ್ಮ ಮನೆಯಿಂದ ಬಂಧಿಸಲ್ಪಟ್ಟ ವಿಲ್ಸನ್ ಅವರನ್ನು ತನಿಖಾ ಸಂಸ್ಥೆಗಳು ನಗರ ಮಾವೋವಾದಿಗಳ ಪ್ರಮುಖ ನಾಯಕರಲ್ಲಿ ಒಬ್ಬರು ಎಂದು ಬಣ್ಣಿಸಿವೆ. ಧಾವಳೆ ನಿಷೇಧಿತ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) ದ ಸಕ್ರಿಯ ಸದಸ್ಯರಾಗಿದ್ದರು ಎಂದು ಆರೋಪಿಸಲಾಗಿದೆ.
ಆಗಸ್ಟ್ 2021ರಲ್ಲಿ ಸಲ್ಲಿಸಲಾದ ಎನ್‌ಐಎ ಆರೋಪಪಟ್ಟಿಯಲ್ಲಿ, ವಿಲ್ಸನ್ ಮತ್ತು ಇತರ ಆರೋಪಿಗಳು ನಿಷೇಧಿತ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು, ಅವರು ಸರ್ಕಾರವನ್ನು ದುರ್ಬಲಗೊಳಿಸಲು ಮತ್ತು ರಾಜ್ಯವನ್ನು ತಮ್ಮ ವಶಕ್ಕೆ ಪಡೆಯಲು ಸಶಸ್ತ್ರ ಹೋರಾಟದ ಮೂಲಕ ‘ಜನತಾ ಸರ್ಕಾರ್’ ಸ್ಥಾಪಿಸಲು ಬಯಸಿದ್ದರು ಎಂದು ಆರೋಪಿಸಲಾಗಿದೆ.
ಆರೋಪಿಗಳ ವಿರುದ್ಧ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಸಾಮರಸ್ಯ ಕಾಪಾಡಿಕೊಳ್ಳಲು ಹಾನಿಕರವಾದ ಕೃತ್ಯಗಳನ್ನು ಮಾಡುವುದು, ಸರ್ಕಾರದ ವಿರುದ್ಧ ಯುದ್ಧ ನಡೆಸುವುದು ಮತ್ತು ಕಠಿಣ ಭಯೋತ್ಪಾದನಾ ವಿರೋಧಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ವಿವಿಧ ಸೆಕ್ಷನ್‌ಗಳಡಿ ಒಂದು ಡಜನ್‌ಗೂ ಹೆಚ್ಚು ಆರೋಪಗಳನ್ನು ಹೊರಿಸಲಾಗಿದೆ.
ಮಣಿಪುರದ ಜನರನ್ನು ಭೇಟಿ ಮಾಡಲು ಮೋದಿಗೆ ಇನ್ನೂ ಸಮಯ ಸಿಕ್ಕಿಲ್ಲ – ಕಾಂಗ್ರೆಸ್


