ಪ್ರವಾದಿ ಮುಹಮ್ಮದ್ ಕುರಿತು ಇಬ್ಬರು ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳಿಂದಾಗಿ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ತೀವ್ರ ಹಿನ್ನಡೆ ಉಂಟಾಗುತ್ತಿದೆ. ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಕೂಗು ಹೆಚ್ಚಾದ ಹಿನ್ನೆಲೆಯಲ್ಲಿ ಕತಾರ್, ಕುವೈತ್ ಮತ್ತು ಇರಾನ್ ದೇಶಗಳು ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿವೆ.
ಕತಾರ್‌ನಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ತಲ್ ಸಮನ್ಸ್ ನೀಡಿರುವ ಕತಾರ್, “ಇಂತಹ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ಶಿಕ್ಷೆಯಿಲ್ಲದೆ ಮುಂದುವರಿಸಲು ಅವಕಾಶ ನೀಡುವುದು ಮಾನವ ಹಕ್ಕುಗಳ ರಕ್ಷಣೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಇದು ಮತ್ತಷ್ಟು ಪೂರ್ವಾಗ್ರಹಗಳಿಗೆ ಕಾರಣವಾಗಬಹುದು. ಹಿಂಸೆ ಮತ್ತು ದ್ವೇಷವನ್ನು ಸೃಷ್ಟಿಸಬಹುದು” ಎಂದು ತಿಳಿಸಿದೆ.
“ಈ ಪ್ರತಿಕೂಲ ಹೇಳಿಕೆಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು” ಎಂದು ಕುವೈತ್ ಒತ್ತಾಯಿಸಿದೆ. “ಇದರ ಮುಂದುವರಿಕೆಯು ದ್ವೇಷವನ್ನು ಹೆಚ್ಚಿಸುತ್ತದೆ” ಎಂದು ಕುವೈತ್ ಆತಂಕ ವ್ಯಕ್ತಪಡಿಸಿದೆ.
“ಭಾರತೀಯ ಟಿವಿ ಶೋನಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಅವಮಾನ” ಎಂಬ ಸುದ್ದಿಯನ್ನು ಇರಾನ್ ಇಂಟರ್ನ್ಯಾಷನಲ್ ಇಂಗ್ಲಿಷ್ ವರದಿ ಮಾಡಿದ್ದು, ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದೆ.
ಈ ಹೇಳಿಕೆ ಸರ್ಕಾರದ ಅಭಿಪ್ರಾಯ ಆಗಿರುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದ್ದು, “ಆಡಳಿತಾರೂಢ ಬಿಜೆಪಿ, ತನ್ನ ನಾಯಕರ ವಿರುದ್ಧ ಕ್ರಮ ಕೈಗೊಂಡಿದೆ” ಎಂಬ ವಿಷಯವನ್ನು ತಿಳಿಸಿದೆ.
ಕತಾರ್ ಪ್ರಧಾನಿ ಶೇಖ್ ಖಾಲಿದ್ ಬಿನ್ ಖಲೀಫಾ ಬಿನ್ ಅಬ್ದುಲಜೀಜ್ ಅಲ್ ಥಾನಿ ಅವರನ್ನು ಭಾರತದ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಭೇಟಿ ಮಾಡುವ ನಡುವೆ ಕತಾರ್ ಖಂಡನೆ ಹೊರಬಿದ್ದಿದೆ.
ಕಳೆದ ವಾರ ದೇಶಾದ್ಯಂತ ನಡೆದ ಸರಣಿ ಕೋಮು ಘಟನೆಗಳ ಹಿನ್ನಲೆಯಲ್ಲಿ, ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ಅವರು ಟಿವಿ ಡಿಬೇಟ್ ಸಂದರ್ಭದಲ್ಲಿ ಪ್ರವಾದಿಯನ್ನು ಅವಮಾನಿಸುವ ಹೇಳಿಕೆ ನೀಡಿದ್ದರು. ನವೀನ್ ಜಿಂದಾಲ್ ಅವರು ಪ್ರವಾದಿ ಕುರಿತು ಟ್ವೀಟ್ ಮಾಡಿ, ನಂತರ ಡಿಲೀಟ್ ಮಾಡಿದ್ದರು.
ಬಿಜೆಪಿ ಕ್ರಮ ವಹಿಸಿದ ನಂತರ ತಮ್ಮ ಹೇಳಿಕೆಗಳನ್ನು ನೂಪುರ್ ಶರ್ಮಾ, ನವೀನ್ ಜಿಂದಾಲ್ ವಾಪಸ್ ಪಡೆದಿದ್ದಾರೆ. ಬಿಜೆಪಿ ಈ ಇಬ್ಬರು ನಾಯಕರನ್ನು ಪಕ್ಷದಿಂದ ಉಚ್ಚಾಟಿಸಿದೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಸಮಸ್ಯೆ ಉಲ್ಬಣಿಸಿದೆ. ಶುಕ್ರವಾರದ ಪ್ರಾರ್ಥನೆಯ ನಂತರ ಎರಡು ಗುಂಪುಗಳ ಘರ್ಷಣೆಯಲ್ಲಿ ಕಾನ್ಪುರದಲ್ಲಿ 40 ಜನರು ಗಾಯಗೊಂಡಿದ್ದಾರೆ.
“ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವ ಯಾವುದೇ ಸಿದ್ಧಾಂತದ ವಿರುದ್ಧವಿದ್ದೇವೆ” ಎಂದು ಬಿಜೆಪಿ ಹೇಳಿದೆ. “ಅಂತಹ ಜನರನ್ನು ಅಥವಾ ವಿಚಾರಧಾರೆಗಳನ್ನು ನಾವು ಪ್ರೊತ್ಸಾಹಿಸುವುದಿಲ್ಲ” ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
ಬಿಜೆಪಿ ಹೇಳಿಕೆಯನ್ನು ಕಸದಬುಟ್ಟಿಗೆ ತಳ್ಳಿದ ಕಾಂಗ್ರೆಸ್, “ಇದು ಸ್ಪಷ್ಟವಾದ ನಕಲಿ ನೆಪವಲ್ಲದೆ ಬೇರೇನೂ ಅಲ್ಲ, ಇದು ಸ್ಪಷ್ಟವಾಗಿ ಪ್ರಹಸನವಷ್ಟೇ. ಆಗಿರುವ ಹಾನಿಯ ನಿಯಂತ್ರಣದ ಮತ್ತೊಂದು ಪ್ರಯತ್ನವಷ್ಟೇ” ಎಂದಿದೆ.


