ಪ್ರವಾದಿ ಮುಹಮ್ಮದ್ ಕುರಿತ ಅವಹೇಳನಾಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಕೋಲ್ಕತ್ತಾ ಪೊಲೀಸರು ಮುಂದಿನ ಸೋಮವಾರ (ಜೂನ್ 20) ವಿಚಾರಣೆಗೆ ಕರೆದಿದ್ದಾರೆ.
ಪ್ರಕರಣ ಕುರಿತಂತೆ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಜೂನ್ 20 ರಂದು ನರ್ಕೆಲ್ದಂಗ ಪೊಲೀಸ್ ಠಾಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಅಬುಲ್ ಸೊಹೈಲ್, ನೂಪುರ್ ಶರ್ಮಾ ಅವರ ಹೇಳಿಕೆಗಳ ಮೇಲೆ ಕೊಂಟೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಟಿವಿ ಚರ್ಚೆಯ ಸಂದರ್ಭದಲ್ಲಿ ನೂಪುರ್ ಶರ್ಮಾ, ಪ್ರವಾದಿ ಮುಹಮ್ಮದ್ ಕುರಿತು ಅವಹೇಳನಾಕರಿ ಹೇಳಿಕೆ ವಿರೋಧಿಸಿ ದೇಶದ ಹಲವಾರು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ.
ಇದನ್ನೂ ಓದಿ: ರಾಜಸ್ಥಾನ: ಮದ್ಯಪಾನ ಮಾಡಲು ನಿರಾಕರಿಸಿದ ಬುಡಕಟ್ಟು ಯುವಕನ ಮೇಲೆ ಅಮಾನುಷ ಹಲ್ಲೆ
ಇದರ ಜೊತೆಗೆ ಮಹಾರಾಷ್ಟ್ರದ ಭಿವಂಡಿ ಪೊಲೀಸರಿಂದ ಸಮನ್ಸ್ ಪಡೆದಿರುವ ನೂಪುರ್ ಶರ್ಮಾ, ತಮ್ಮ ಹೇಳಿಕೆಯನ್ನು ದಾಖಲಿಸಲು ಪೊಲೀಸರ ಮುಂದೆ ಹಾಜರಾಗಲು ಸಮಯ ಕೋರಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೂಪುರ್ ಶರ್ಮಾ ಅವರಿಗೆ ಸಮಯಾವಕಾಶ ನೀಡಲಾಗಿದ್ದು, ಸೋಮವಾರ (ಜೂನ್.13) ಭಿವಂಡಿ ಪೊಲೀಸರ ಮುಂದೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಆಕೆಗೆ ಎಷ್ಟು ಸಮಯವನ್ನು ನೀಡಲಾಗಿದೆ ಎಂಬುದನ್ನು ಅಧಿಕಾರಿ ನಿರ್ದಿಷ್ಟಪಡಿಸಿಲ್ಲ.
ಮೇ 30 ರಂದು ರಾಝಾ ಅಕಾಡೆಮಿಯ ಪ್ರತಿನಿಧಿಯೊಬ್ಬರು ನೀಡಿದ ದೂರಿನ ಮೇರೆಗೆ ಥಾಣೆ ಜಿಲ್ಲೆಯ ಭಿವಂಡಿ ಪೊಲೀಸರು ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿಯವರ ಬಗ್ಗೆ ಮಾಡಿದ ಹೇಳಿಕೆಗಳ ಮೇಲೆ ನೂಪುರ್ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ ಪ್ರವಾದಿ ವಿರುದ್ಧ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿದ ಆರೋಪದ ಮೇಲೆ ಉಚ್ಛಾಟಿತ ಬಿಜೆಪಿ ಕಾರ್ಯಾಧ್ಯಕ್ಷ ನವೀನ್ ಕುಮಾರ್ ಜಿಂದಾಲ್ ವಿರುದ್ಧವೂ ಅವರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಪ್ರತಿಭಟನಾಕಾರರ ಮನೆ ಮೇಲೆ 2ನೇ ದಿನವೂ ಮುಂದುವರೆದ ಬುಲ್ಡೋಜರ್ ದಾಳಿ


