ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಿನ್ನೆ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಪ್ರಚೋದನಾಕಾರಿ ಭಾಷನ ಮಾಡಿದ್ದನ್ನು ಖಂಡಿಸಿ ಇಂದು ಬಳ್ಳಾರಿಯಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು, ಕೂಡಲೇ ಪೊಲೀಸರು ದೂರು ದಾಖಲಿಸುವಂತೆ ಆಗ್ರಹಿಸಿದ್ದಾರೆ.
ನಗರದ ಶಾದಿಮಹಲ್ ಬಳಿ ಜಮಾವಣೆಗೊಂಡ ಸಹಸ್ರಾರು ಜನರು ಸೋಮಶೇಖರ್ ರೆಡ್ಡಿಯ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಅಲ್ಲಿಂದ ನಿನ್ನೆ ಸೋಮಶೇಖರ್ ರೆಡ್ಡಿ ಭಾಷಣ ಮಾಡಿದ್ದ ಗಡಗಿ ಚೆನ್ನಪ್ಪ ವೃತ್ತಕ್ಕೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ರಸ್ತೆಗಳನ್ನು ಬಂದ್ ಮಾಡಿದ್ದಾರೆ.
ದಿಢೀರ್ ಪ್ರತಿಭಟನೆಯಿಂದ ಗೊಂದಲಗೊಂಡ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಡುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ, ಹೆಚ್ಚುವರಿ ಎಸ್ಪಿ ಬಿ.ಎನ್ ಲಾವಣ್ಯ ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ್ದಾರೆ.
ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದು ಎಫ್‌ಐಆರ್ ದಾಖಲಾಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ನಿನ್ನೆ ಪೌರತ್ವ ಕಾಯ್ದೆ ಬೆಂಬಲಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ತಮ್ಮ ನಾಲಿಗೆ ಹರಿಯಬಿಟ್ಟಿದ್ದರು. ಮುಸ್ಲಿಮರೆ ಜಾಸ್ತಿ ನಖರಾ ಮಾಡಿದರೆ ಉಫ್ ಅಂತ ಊದಿಬಿಡ್ತೇವೆ, ನಾವು 80% ಇರೋರು. ನೀವು ಬರೀ 17% ಇರೋದು. ನಾವು ತಿರುಗಿಬಿದ್ರೆ ನಿಮ್ ಪರಿಸ್ಥಿತಿ ಎನಾಗುತ್ತೆ ಗೊತ್ತಾ? ಎಚ್ಚರವಿರಲಿ, ಮೈಮೇಲೆ ಎಚ್ಚರವಿಟ್ಟುಕೊಂಡು ನಮ್ ದೇಶದಲ್ಲಿರಿ… ಎಂದಿದ್ದರು.
ಶಾಸಕರ ಹೇಳಿಕೆಗೆ ಸಾಮಾಜಿಕ ತಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ನಮ್ಮ ಸರ್ವಜನಾಂಗದ ಶಾಂತಿಯ ತೋಟ ಇಲ್ಲಿ ದ್ವೇಷಕ್ಕೆ ಅವಕಾಶವಿಲ್ಲ ಎಂದು ಹಲವರು ಬುದ್ದಿಮಾತು ಹೇಳಿದ್ದರು.


