Homeಮುಖಪುಟಸೋಮಶೇಖರ ರೆಡ್ಡಿ ವಿರುದ್ಧ ದೇಶದ್ರೋಹದ ದೂರು ದಾಖಲಿಸಿ: ಸಿದ್ದರಾಮಯ್ಯ ಒತ್ತಾಯ...

ಸೋಮಶೇಖರ ರೆಡ್ಡಿ ವಿರುದ್ಧ ದೇಶದ್ರೋಹದ ದೂರು ದಾಖಲಿಸಿ: ಸಿದ್ದರಾಮಯ್ಯ ಒತ್ತಾಯ…

ಸಂವಿಧಾನವಿರೋಧಿ ಭಾಷಣ ಮಾಡಿದ ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ ವಿರುದ್ಧ ಕಾಂಗ್ರೆಸ್‌ನಿಂದ ದೂರು ದಾಖಲು..

- Advertisement -
- Advertisement -

ಪ್ರಚೋದನಾತ್ಮಕ ಹೇಳಿಕೆ ನೀಡಿ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಿರುವ ಶಾಸಕ ಸೋಮಶೇಖರ ರೆಡ್ಡಿಯವರ ವಿರುದ್ಧ ದೇಶದ್ರೋಹದ ಕ್ರಿಮಿನಲ್ ಕೇಸು ದಾಖಲಿಸುವಂತೆ ಕಾಂಗ್ರೆಸ್ ಮುಖಂಡರ ನಿಯೋಗ ಇಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದೆ.

ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ರಾಜುರವರು ರಜೆಯಿದ್ದ ಕಾರಣ ಅವರ ಪರವಾಗಿ ಎಡಿಜಿಪಿ ಡಾ.ಎಂ.ಎ.ಸಲೀಂ ಅವರು ದೂರು ಸ್ವೀಕರಿಸಿದ್ದಾರೆ.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ “ಸೋಮಶೇಖರ ರೆಡ್ಡಿಯವರ ಮಾತುಗಳು ಬಿಜೆಪಿಯ ಮನಸ್ಥಿತಿಯನ್ನು ತಿಳಿಸುತ್ತವೆ. ಬಹಳ ಸ್ಪಷ್ಟವಾಗಿ ಒಂದು ಕೋಮನ್ನು ಗುರಿಯಾಗಿಟ್ಟುಕೊಂಡು ಸೋಮಶೇಖರ ರೆಡ್ಡಿ ಮಾತಾಡಿದ್ದಾರೆ. ಸಿಎಎ, ಎನ್‌ಆರ್‌ಸಿ ವಿರುದ್ಧ ದೇಶದ ಉದ್ದಗಲಕ್ಕೂ ಪ್ರತಿಭಟನೆ ನಡೆಯುತ್ತಿದೆ. ಎಲ್ಲಾ ಧರ್ಮದ ಜನರು ಜಾತ್ಯತೀತವಾಗಿ, ಪಕ್ಷಾತೀತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಿರುವಾಗ ಇವರು ಕೋಮುಗಲಭೆಗೆ ಪ್ರಚೋದನೆ ಮಾಡುತ್ತಿದ್ದಾರೆ. ಇದು ದೇಶದ್ರೋಹದ ಕೆಲಸವಾಗಿದೆ” ಎಂದಿದ್ದಾರೆ.

ಸೋಮಶೇಖರ ರೆಡ್ಡಿ ಭಾಷಣ ಸಂಪೂರ್ಣವಾಗಿ ಸಂವಿಧಾನಕ್ಕೆ ವಿರುದ್ಧವಾಗಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಒಬ್ಬ ಶಾಸಕ ಇಂತವರೇ ಸಂವಿಧಾನ ವಿರುದ್ಧವಾಗಿ ಪ್ರಚೋದನಾಕಾರಿಯಾಗಿ ಮಾತಾಡಿದ್ದಾರೆ, ಕೋಮುಗಲಭೆಗೆ ಆಸ್ಪದ ಕೊಡುವ ಮಾತುಗಳನ್ನಾಡಿದ್ದಾರೆ. ಕೂಡಲೇ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ ಅರೆಸ್ಟ್‌ ಮಾಡಬೇಕಿತ್ತು. ಮಾಡಿಲ್ಲ, ಇಂದು ಪ್ರತಿಭಟನೆ ಮಾಡಿದ ಮೇಲೆ, ನಾವು ದೂರು ಕೊಡಲು ಬಂದಾಗ ಮಾತ್ರ ದೂರು ದಾಖಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೂರಿನಲ್ಲಿ ಯಾವು ಸೆಕ್ಷನ್‌ಗಳನ್ನು ಹಾಕಿದ್ದಾರೆ ಗೊತ್ತಿಲ್ಲ. ಇವರನ್ನು ಸುಮ್ಮನೆ ಬಿಟ್ಟರೆ ಸಮಾಜಕ್ಕೆ ಬಹಳ ಅಪಾಯಕಾರಿಯಾಗುತ್ತದೆ. ಆದರೆ ದೇಶದ್ರೋಹದ ಆಧಾರದಲ್ಲಿ ಸೆಕ್ಷನ್‌ಗಳನ್ನು ಹಾಕಿ ಬಂಧಿಸಬೇಕೆಂದು ಒತ್ತಾಯ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಶಾಂತಿ ಕಾಪಾಡಿ

ಈ ಘಟನೆಯಿಂದ ಕೆರಳಿ ಯಾರು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ಶಾಂತಿಯಿಂದ ವರ್ತಿಸಿ. ಕಾನೂನು ಇದೆ, ಅದರ ರೀತಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ನಂಬಿದ್ದೇನೆ. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ ಆಗ ಮುಂದಿನ ನಡೆಯನ್ನು ತೀರ್ಮಾನಿಸೋಣ ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಅವರೊಂದಿಗೆ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಈಶ್ವರ ಖಂಡ್ರೆ ದಿನೇಶ್ ಗುಂಡೂರಾವ್‌, ವಿ.ಎಸ್‌ ಉಗ್ರಪ್ಪ, ಜಮೀರ್‌ ಅಹ್ಮದ್‌ ಖಾನ್‌, ಪುಷ್ಪ ಅಮರನಾಥ್, ಹಂಪನಗೌಡ ಬಾದರ್ಲಿ ಮತ್ತಿತರರು ಹಾಜರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read