ನಮ್ಮ ಹಕ್ಕೊತ್ತಾಯಗಳು ಮತ್ತು ಬೇಡಿಕೆಗಳ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಪ್ರತಿಭಟನೆಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲಾಗುವುದು ಎಂದು ಒಳಮೀಸಲಾತಿ ಹೋರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಒಳಮೀಸಲಾತಿ ಜಾರಿ ವಿಳಂಬ ಖಂಡಿಸಿ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ರಾಜೀನಾಮೆಗೆ ಆಗ್ರಹಿಸಿದ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ’ದ ಮುಖಂಡರು, ಸಚಿವರ ಮನೆಗೆ ಮುತ್ತಿಗೆ ಹಾಕುವುದಕ್ಕೆ ಮುಂದಾದಾಗ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಒಕ್ಕೂಟ, “ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಗಾಗಿ ಆಗ್ರಹಿಸಿ ಕಳೆದ 35 ವರ್ಷಗಳಿಂದ ನಿರಂತರವಾಗಿ ಬೀದಿ ಹೋರಾಟ ಹಾಗೂ ಕಾನೂನು ಹೋರಾಟದಿಂದಾಗಿ ಆಗಸ್ಟ್ 1 2024ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದ 7 ಜನ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಒಳಮೀಸಲಾತಿಯ ಪರವಾಗಿ ತೀರ್ಪು ನೀಡಿ, ರಾಜ್ಯ ಸರ್ಕಾರಗಳ ಹೆಗಲಿಗೆ ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ನೀಡಿ 14 ತಿಂಗಳುಗಳು ಕಳೆದರೂ ಒಳಮೀಸಲಾತಿ ಕುರಿತಂತೆ ತಾರ್ಕಿಕ ಅಂತ್ಯ ಕಂಡಿಲ್ಲ” ಎಂದು ಬೇಸರ ಹೊರಹಾಕಿದ್ದಾರೆ.
“ಕರ್ನಾಟಕ ಸರ್ಕಾರ ತಡವಾಗಿ ಒಳಮೀಸಲಾತಿ ಜಾರಿ ಮಾಡಲು ನಿವೃತ್ತ ನ್ಯಾಯಾಧೀಶರಾದ ಹೆಚ್. ಎನ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ಆಯೋಗ ರಚಿಸಿ ದತ್ತಾಂಶ ಸಂಗ್ರಹ ಮಾಡಿ, ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಯ ಕುರಿತು ನಿರ್ಣಯ ಮಾಡಲಾಗಿದೆ. ಇದು ಒಳಮೀಸಲಾತಿ ಹೋರಾಟಕ್ಕೆ ತಾತ್ವಿಕ ಗೆಲುವು ಸಿಕ್ಕಂತಾಗಿದೆ. ಆದರೆ, ಒಳಮೀಸಲಾತಿಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕಳೆದ 2 ತಿಂಗಳಿನಿಂದ ರಾಜ್ಯ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಯು ವಿಳಂಬ ಧೋರಣೆ ಅನುಸರಿಸುತ್ತಿರುವುದು ಒಳಮೀಸಲಾತಿ ಹೋರಾಟಗಾರರಲ್ಲಿ ರಾಜ್ಯ ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೇಲೆ ಹಾಗೂ ಕರ್ನಾಟಕ ಸರ್ಕಾರದ ಮೇಲೆ ವಿಶ್ವಾಸವಿಲ್ಲದಾಗಿದೆ” ಎಂದು ಹೇಳಿದ್ದಾರೆ.
ವಿಳಂಬ ಖಂಡಿಸಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಎಚ್.ಸಿ. ಮಹಾದೇವಪ್ಪ ಮನೆಗೆ ಒಳಮೀಸಲಾತಿ ಹೋರಾಟಗಾರರು ಮುತ್ತಿಗೆ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಹೋರಾಟಗಾರರನ್ನು ಬಂಧಿಸಿದರು.
“ನಮ್ಮ ಹಕ್ಕೊತ್ತಾಯಗಳಿಗೆ ಸಂಬಂಧಿಸಿದಂತೆ ಸರ್ಕಾರ ತೀರ್ಮಾನ ತೆಗೆದುಕೊಳ್ಳದಿದ್ದರೆ ಹೋರಾಟವನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲಾಗುವುದು, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಲಾಗುವುದು” ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಹಕ್ಕೊತ್ತಾಯಗಳು
1. ಬಡ್ತಿ, ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಒಳಮೀಸಲಾತಿಯನ್ನು ಅನ್ವಯಿಸಿ ಕೂಡಲೇ ಆದೇಶ ಹೊರಡಿಸಬೇಕು.
2. ಎಕೆ, ಎಡಿ, ಎಎ ಕುರಿತು ಈಗಾಗಲೇ ಹೊರಡಿಸಿರುವ ಆದೇಶದಲ್ಲಿ ಹಲವು ಗೊಂದಲಗಳಿರುವುದರಿಂದ ಪರಿಷ್ಕರಿಸಿ ಮರು ಆದೇಶವನ್ನು ತಕ್ಷಣವೇ ಹೊರಡಿಸಬೇಕು.
3. ಜಸ್ಟೀಸ್ ಎಚ್.ಎನ್. ನಾಗಮೋಹನ್ ದಾಸ್ ವರದಿಯಲ್ಲಿರುವ 4 ಲಕ್ಷ 73 ಸಾವಿರ ಜನರಲ್ಲಿ ನಕಲಿ ಜನರಿರುವ ಸಂಶಯ ಒಳಮೀಸಲಾತಿ ಹೋರಾಟಗಾರರಲ್ಲಿದೆ. ಹಾಗಾಗಿ, ಕೂಡಲೇ ಈ 4 ಲಕ್ಷ 73 ಸಾವಿರ ಜನರ ಮಾಹಿತಿಯನ್ನು ಬಹಿರಂಗಗೊಳಿಸಬೇಕು.
4. ತೆಲಂಗಾಣ ಮಾದರಿಯಂತೆ ಸ್ಥಳೀಯ ಸಂಸ್ಥೆಗಳಿಗೂ ಒಳಮೀಸಲಾತಿಯನ್ನು ಅನ್ವಯಿಸಬೇಕು.
5. ಆರ್ಥಿಕ ಕ್ಷೇತ್ರಗಳಿಗೂ ಒಳಮೀಸಲಾತಿಯನ್ನು ಅನ್ವಯಿಸಿ ಆದೇಶ ಹೊರಡಿಸಬೇಕು.
6. ಶಾಶ್ವತ ಆಯೋಗ ರಚಿಸಿ ಅಲೆಮಾರಿ ಸಮುದಾಯಗಳಿಗೆ ಶೇ.1 ಮೀಸಲಾತಿಯನ್ನು ನೀಡಬೇಕು.
7. ಎಸ್‌ಸಿಎಸ್‌ಪಿ/ಟಿಎಸ್‌ಪಿ ಸಲಹೆಗಾರರ ಹುದ್ದೆಯನ್ನು ಕೂಡಲೇ ರದ್ದುಪಡಿಸಬೇಕು ಹಾಗೂ ಹಲವು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡಬೇಕು.
8. ಒಳಮೀಸಲಾತಿ ಜಾರಿ ಕಾವಲು ಸಮಿತಿಯನ್ನು ರಚಿಸಬೇಕು.
ಒಳಮೀಸಲಾತಿ ಹೋರಾಟ: ಸಚಿವ ಮಹದೇವಪ್ಪ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಮುಖಂಡರ ಬಂಧನ


