ಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಾಲಕಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಕುರಿತು ಸೂಕ್ತ ತನಿಖೆ ನಡೆಸಬೇಕು ಮತ್ತು ಶಾಲಾ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಇಂದು (ಜು.7) ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆಗಳ ನೇತೃತ್ವ ಮತ್ತು ಇತರ ಪ್ರಗತಿಪರ ಸಂಘಟನೆಗಳ ಬೆಂಬಲದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೊಪ್ಪ ಟೌನ್‌ಹಾಲ್‌ನಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಲಿದೆ.
ಪ್ರತಿಭಟನೆಯಲ್ಲಿ ಹೋರಾಟಗಾರ, ಎದ್ದೇಳು ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ ಅಶೋಕ್ ಅವರು ಪಾಲ್ಗೊಳ್ಳಲಿದ್ದಾರೆ.
ಮೃತ ಬಾಲಕಿಯ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವ ಹೋರಾಟಕ್ಕೆ ಸಾರ್ವಜನಿಕರು ಕೈ ಜೋಡಿಸುವಂತೆ ಕೊಪ್ಪದ ಪ್ರಗತಿಪರ ಸಂಘಟನೆಗಳ ಸಂಘಟಕರು ಮನವಿ ಮಾಡಿದ್ದಾರೆ.
“ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2023ರಲ್ಲಿ ಬಾಲಕಿ ಮೃತಪಟ್ಟ ಜಾಗದಲ್ಲೇ ವಾರದ ಹಿಂದೆ ಇನ್ನೊಬ್ಬಳು ಬಾಲಕಿ ಮೃತಪಟ್ಟಿದ್ದಾಳೆ. ಸಾರ್ವಜನಿಕರಂತೆಯೇ ನಮ್ಮಲ್ಲೂ ಈ ಬಗ್ಗೆ ಅನುಮಾನ ಮೂಡಿದೆ” ಎಂದು ಶಾಸಕ ಟಿ.ಡಿ ರಾಜೇಗೌಡ ಭಾನುವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಕಿಯ ಸಾವಿನ ಸಮಗ್ರ ತನಿಖೆಯಾಗಬೇಕು ಎನ್ನುವ ಉದ್ದೇಶದಿಂದಲೇ ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ. ವರದಿ ಬಂದ ಕೂಡಲೇ ಪ್ರಾಮಾಣಿಕ ತನಿಖೆ ಮಾಡಿಸಲಾಗುವುದು. ವಸತಿ ಶಾಲೆಯಲ್ಲಿ ಎಲ್ಲಾ ಅಧಿಕಾರಿ, ಪೋಷಕರನ್ನು ಕರೆಯಿಸಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಸಲಾಗುವುದು ಎಂದಿದ್ದಾರೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೊಪ್ಪ ತಾಲೂಕಿನ ಬೊಮ್ಲಾಪುರ ಗ್ರಾಮದ ಶಮಿತಾ(14) ಜೂನ್ 29 ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಶನಿವಾರ ಎಂದಿನಂತೆ ಎಲ್ಲರೊಂದಿಗೆ ಸಾಮಾನ್ಯವಾಗಿದ್ದ ಶಮಿತಾ, ರಾತ್ರಿ ವೇಳೆ ಸಹಪಾಠಿಗಳು ನಿದ್ರೆಗೆ ಜಾರಿದ ಬಳಿಕ ವಸತಿ ಶಾಲೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಸಣ್ಣ ವಯಸ್ಸಿನ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದರ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ವರದಿಗಳ ಪ್ರಕಾರ, ಇದೇ ಶಾಲೆಯಲ್ಲಿ ಕಳೆದ ವರ್ಷ, ಅಂದರೆ 2023ರ ಜುಲೈ 27ರಂದು ಕೊಪ್ಪ ತಾಲೂಕಿನ ನಾರ್ವೆ ಗ್ರಾಮದ ಅಮೂಲ್ಯ ಎಂಬ 14 ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ಅದಾಗಿ ಒಂದು ವರ್ಷಕ್ಕೆ ಮತ್ತೊಂದು ಬಾಲಕಿಯ ಸಾವಾಗಿದೆ.
‘ಮೋದಿಯನ್ನು ನಿಮಗಿಂತ ಹೆಚ್ಚು ಪ್ರಶ್ನೆ ಮಾಡೋನು ನಾನೇ’: ಸಚಿವ ಎಂ.ಬಿ ಪಾಟೀಲ್‌ಗೆ ಪ್ರಕಾಶ್ ರಾಜ್ ತಿರುಗೇಟು


