Homeಕರ್ನಾಟಕಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ದೆಹಲಿಯಲ್ಲಿ ಹೋರಾಟ; ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆದ ಅಲೆಮಾರಿಗಳು

ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ದೆಹಲಿಯಲ್ಲಿ ಹೋರಾಟ; ಕಾಂಗ್ರೆಸ್ ಹೈಕಮಾಂಡ್ ಗಮನ ಸೆಳೆದ ಅಲೆಮಾರಿಗಳು

- Advertisement -
- Advertisement -

ಜಸ್ಟೀಸ್ ನಾಗಮೋಹನ್‌ ದಾಸ್ ಸಮಿತಿ ಆಯೋಗದ ಶಿಫಾರಸ್ಸಿನಂತೆ ಶೇ.1 ರಷ್ಟು ಪ್ರತ್ಯೇಕ ಮೀಸಲಾತಿ ನಿಡಬೇಕು ಎಂದು ಆಗ್ರಹಿಸಿ ಅಲೆಮಾರಿ ಸಮುದಾಯಗಳು ತಮ್ಮ ಹೋರಾಟವನ್ನು ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಸಿದವು.

ಇಷ್ಟು ದಿನ ರಾಜ್ಯಕ್ಕೆ ಸೀಮಿತವಾಗಿದ್ದ ಹೋರಾಟವನ್ನು ಇದೀಗ ರಾಷ್ಟ್ರ ರಾಜಧಾನಿಗೆ ವಿಸ್ತರಿಸಿದ್ದಾರೆ. ಅಲೆಮಾರಿಗಳ ಹೋರಾಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದ್ದು, ಅಲೆಮಾರಿಗಳು ಅನಿವಾರ್ಯವಾಗಿ ‘ದೆಹಲಿ ಚಲೋ’ ಹಮ್ಮಿಕೊಂಡಿದ್ದರು. ತಮ್ಮ ಹೋರಾಟದ ಭಾಗವಾಗಿ ಇಂದು ಕಾಂಗ್ರೆಸ್‌ ಪಕ್ಷದ ಉನ್ನತ ನಾಯಕರನ್ನು ಭೇಟಿಯಾದ ಅಲೆಮಾರಿ ಹೋರಾಟದ ನಿಯೋಗ, ಪ್ರತ್ಯೇಕ ಮೀಸಲಾತಿಗೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

 

ನವದೆಹಲಿಯ ಪ್ರಸಿದ್ಧ ⁠ಜಂತರ್ ಮಂತರ್‌ನಲ್ಲಿ ಅಲೆಮಾರಿಗಳು ವಿಶಿಷ್ಠ ಮತ್ತು ಆಕ್ರೋಶಭರಿತರಾಗಿ ಪ್ರತಿಭಟಿಸಿದರು. ದೆಹಲಿಯ ⁠ಕಾಂಗ್ರೆಸ್ ಪ್ರಧಾನ ಕಚೇರಿಯ ಮುಂದೆ ಸಹ ಅಲೆಮಾರಿಗಳು ತಮ್ಮ ಪ್ರದರ್ಶನ ನೀಡಿದರು. ಅಲೆಮಾರಿ ನಿಯೋಗದ ಜೊತೆಗೆ ಮಾತನಾಡಿದ ಕಾಂಗ್ರೆಸ್‌ ಮುಖಂಡರು, ⁠ಸಮಸ್ಯೆ ಬಗೆಹರಿಸುವ ಪ್ರಕ್ರಿಯೆ ಕುರಿತು ತೀರ್ಮಾನ ತಗೆದುಕೊಳ್ಳಲು ಸಮಯ ಕೇಳಿದ್ದಾರೆ ಎಂದು ಹೋರಾಟಗಾರರು ಮಾಹಿತಿ ನೀಡಿದ್ದಾರೆ.

ನ್ಯಾ. ನಾಗಮೋಹನ್​ ದಾಸ್ ಅವರು ತಮ್ಮ ವರದಿಯಲ್ಲಿ​ ಅಲೆಮಾರಿಗಳು ಮೊದಲ ಆದ್ಯತೆ ನೀಡಿ, ಶೇ.1 ಪ್ರತ್ಯೇಕ ಮೀಸಲಾತಿ ಶಿಫಾರಸ್ಸು ಮಾಡಿದ್ದರು. ಜೊತೆಗೆ, ಪರಿಶಿಷ್ಟ ಸಮುದಾಯವನ್ನ ಐದು ವಿಭಾಗಗಳಾಗಿ ವಿಂಗಡಿಸಿದ್ದರು. ಆದರೆ, ಪರಿಶಿಷ್ಠ ಜಾತಿ ಪಟ್ಟಿಯಲ್ಲಿರುವ ಸ್ಪೃಶ್ಯ ಸಮುದಾಯದ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಿಯನ್ನು ಮೂರು ವಿಭಾಗ ಮಾಡಿದ್ದರು. ಅಲೆಮಾರಿಗಳಿಗೆ ಶಿಫಾರಸ್ಸು ಮಾಡಿದ್ದ ಶೇ.1 ನ್ನು ಲಂಬಾಣಿ, ಭೋವಿ, ಕೊರಷ-ಕೊರಮ ಜಾತಿಗಳಂತ ಪ್ರಬಲ ಸಮುದಾಯ ಜೊತೆಗೆ ಸೇರಿಸಿದ್ದರು. ಇದನ್ನು ವಿರೋಧಿಸಿ 59 ಅಲೆಮಾರಿ ಸಮುದಾಯಗಳು ಹೋರಾಟ ನಡೆಸುತ್ತಿವೆ.

“ಒಳಮೀಸಲಾತಿ ಜಾರಿಗಾಗಿ ಕರ್ನಾಟಕ ಸರ್ಕಾರ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಡಾ. ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆರೋಗವು, ವರ್ಗ 1: ಅತ್ಯಂತ ಹಿಂದುಳಿದ ಅಲೆಮಾರಿ ಜಾತಿಗಳು – 1% ಮೀಸಲಾತಿ, ವರ್ಗ 2: ಹೆಚ್ಚು ಹಿಂದುಳಿದ ಮಾದಿಗರು ಮತ್ತು ಸಂಬಂಧಿತ ಜಾತಿಗಳು – 6% ಮೀಸಲಾತಿ, ವರ್ಗ 3: ಹಿಂದುಳಿದ ಹೊಲಯರು ಮತ್ತು ಸಂಬಂಧಿತ ಜಾತಿಗಳು – 5% ಮೀಸಲಾತಿ, ವರ್ಗ 4: ಕಡಿಮೆ ಹಿಂದುಳಿದ ಲಂಬಾಣಿ, ಭೋವಿ, ಕೊರಚ ಹಾಗೂ ಸಂಬಂಧಿತ ಜಾತಿಗಳು – 4% ಮೀಸಲಾತಿ, ವರ್ಗ 5: ತಮ್ಮನ್ನು AK, AD ಹಾಗೂ AA ಎಂದು ಗುರುತಿಸಿಕೊಳ್ಳುವ ಇತರ ಜಾತಿಗಳು – 1% ಮೀಸಲಾತಿ ಹಂಚಿಕೆ ಮಾಡಬೇಕೆಂದು ಶಿಫಾರಸು ಮಾಡಿತ್ತು. ಆದರೆ, ಸರ್ಕಾರವು ಕೆಲವು ಸಂಪುಟ ಸಚಿವರ ಒತ್ತಡಕ್ಕೆ ಮಣಿದು, ಪ್ರಬಲ ರಾಜಕೀಯ ಲಾಬಿಗಳ ಬೇಡಿಕೆಗಳನ್ನು ಪೂರೈಸುವ ಆತುರದಲ್ಲಿ, ದಲಿತ ಅಲೆಮಾರಿ ಸಮುದಾಯವನ್ನು ಬಲಿಯ ಕುರಿಯನ್ನಾಗಿ ಮಾಡಲಾಗಿದೆ. ಹೆಚ್ಚು ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ಕಡಿಮೆ ಹಿಂದುಳಿದ ಸಮುದಾಯಗಳೊಂದಿಗೆ ವಿಲೀನಗೊಳಿಸಲಾಗಿದೆ. ಇದು ರಾಜಕೀಯ ಅಪರಾಧ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀಸಲಾತಿಗೆ ಆಗ್ರಹಿಸಿ ಅಲೆಮಾರಿಗಳಿಂದ ದೆಹಲಿ ಚಲೋ; ನ್ಯಾಯ ಸಿಗುವವರೆಗೂ ದೆಹಲಿಯಲ್ಲೇ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -