ಭೂ ಸ್ವಾಧೀನ ವಿರೋಧಿಸಿ ‘ದೇವನಹಳ್ಳಿ ಚಲೋ’ ಹಮ್ಮಿಕೊಂಡಿದ್ದ ರೈತರು ಮತ್ತು ಹೋರಾಟಗಾರರನ್ನು ಬಂಧಿಸಿದ ಪೊಲೀಸರ ನಡೆ ಖಂಡಿಸಿ, ಇಂದು (ಜೂನ್, 26) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ಪ್ರತಿಭಟಿಸಲು ನಿರ್ಧರಿಸಲಾಗಿದೆ.
ನಟರಾದ ಪ್ರಕಾಶ್ ರಾಜ್, ಚೇತನ್ ಅಹಿಂಸಾ, ಸಾಹಿತಿ ಬರಗೂರು ರಾಮಚಂದ್ರಪ್ಪ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಹೋರಾಟಗಾರ್ತಿ ವಿಜಯಮ್ಮ ಸೇರಿದಂತೆ ಪ್ರಮುಖ ಸಾಹಿತಿಗಳು, ಚಿಂತಕರು ಮತ್ತು ಬುದ್ಧಿಜೀವಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ, ಸಂಯುಕ್ತ ಹೋರಾಟ ಕರ್ನಾಟಕ ಮತ್ತು ವಿವಿಧ ರೈತ, ದಲಿತ, ಪ್ರಗತಿಪರ ಸಂಘಟನೆಗಳು ಈ ಪ್ರತಿಭಟನೆಯನ್ನು ಬೆಂಬಲಿಸಿವೆ.
ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಪ್ರತಿಭಟನೆ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.
ಮುಂದಿನ ನಡೆ ಬಗ್ಗೆ ಪತ್ರಿಕಾಗೋಷ್ಠಿ
ಹೋರಾಟ ನಿರತ ರೈತರು, ಹೋರಾಟಗಾರರನ್ನು ಬಂಧಿಸಿದ ಪೊಲೀಸರ ನಡೆ ಖಂಡಿಸಿ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ, ಸಂಯುಕ್ತ ಹೋರಾಟ ಕರ್ನಾಟ ಸೇರಿದಂತೆ ಹೋರಾಟದ ನೇತೃತ್ವ ವಹಿಸಿರುವ ಸಂಘಟನೆಗಳು ಇಂದು ಪತ್ರಿಕಾಗೋಷ್ಠಿ ಕರೆದಿವೆ.
ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯಲಿದೆ. ದೇವನಹಳ್ಳಿ ಹೋರಾಟದ ಮುಂದಿನ ಹಂತಗಳನ್ನು ಈ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಲಿದ್ದಾರೆ.
ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ
ರೈತರು, ಹೋರಾಟಗಾರರನ್ನು ಅಮಾನುಷವಾಗಿ ಬಂಧಿಸಿರುವುದನ್ನು ಖಂಡಿಸಿ ಇಂದು (ಜೂ.26) ರಾಜ್ಯಾದ್ಯಂತ ಪ್ರತಿಭಟನೆಗೆ ಸಂಯುಕ್ತ ಹೋರಾಟ ಕರೆ ಕೊಟ್ಟಿದೆ. ಹಾಗಾಗಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.
ರೈತರು, ಹೋರಾಟಗಾರರ ಜೊತೆ ಅಮಾನುಷವಾಗಿ ವರ್ತಿಸಿದ ಡಿಎಸ್‌ಪಿ ಸಜಿತ್ ವಿರುದ್ದ ಕ್ರಮ ಕೈಗೊಳ್ಳಬೇಕು. ಅವರನ್ನು ಅಮಾನತು ಮಾಡಿ, ಇಲಾಖಾ ತನಿಖೆಗೆ ಆದೇಶಿಸಬೇಕು. ಭೂ ಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿ ಕೈ ಬಿಡಬೇಕು. ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ರೈತರ ಸುಮಾರು 1700 ಎಕರೆಗೂ ಹೆಚ್ಚು ಕೃಷಿ ಭೂಮಿಯ ಸ್ವಾಧೀನಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ (ಕೆಐಎಡಿಬಿ) ಮುಂದಾಗಿದೆ. ಇದನ್ನು ವಿರೋಧಿಸಿ ಕಳೆದ 1,180 ದಿನಗಳಿಂದ ರೈತರು ನಿರಂತರ ಹೋರಾಟ ನಡೆಸುತ್ತಿದ್ದರು.
ಹೋರಾಟದ ನಿರ್ಣಾಯಕ ಹಂತವಾಗಿ ನಿನ್ನೆ (ಜೂನ್ 25, ಬುಧವಾರ) ದೇವನಹಳ್ಳಿ ಪಟ್ಟಣದಲ್ಲಿ ‘ದೇವನಹಳ್ಳಿ ಚಲೋ’ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ಶಾಂತಿಯುತವಾಗಿ ಸಮಾವೇಶ ನಡೆದಿತ್ತು. ಆದರೆ, ಸಂಜೆ 5 ಗಂಟೆಯ ಬಳಿಕ ಹೋರಾಟ ಮುಂದುವರಿಸಲು ಅವಕಾಶ ನಿರಾಕರಿಸಿದ ಪೊಲೀಸರು ರೈತರು, ವಿವಿಧ ಸಂಘಟನೆಗಳ ಮುಖಂಡರು, ವೃದ್ದರು, ಮಹಿಳೆಯರನ್ನು ಬಂಧಿಸಿದ್ದರು.
ಬಂಧಿತರ ಬಿಡುಗಡೆ
ನಮ್ಮನ್ನು ಬಂಧಿಸಿದರೆ ಜಾಮೀನು ಪಡೆಯುವುದಿಲ್ಲ ಎಂದು ಹೋರಾಟಗಾರರು ಹೇಳಿದ್ದರು. ಆದರೆ, ಬಂಧಿತ ಎಲ್ಲರನ್ನು ತಡರಾತ್ರಿ ಬಿಡುಗಡೆ ಮಾಡಲಾಗಿದೆ. ದೇವನಹಳ್ಳಿಯಲ್ಲಿ ಬಂಧಿಸಿ ಕರೆದೊಯ್ದು ಹೆಗ್ಗಡೆ ನಗರ ಪೊಲೀಸ್ ಮೈದಾನದಲ್ಲಿ ಬಿಡಲಾಗಿತ್ತು. ಎಲ್ಲರೂ ಅಲ್ಲಿಯೇ ತಡರಾತ್ರಿವರೆಗೆ ಪ್ರತಿಭಟನೆ ಮುಂದುವರಿಸಿದ್ದರು.
ರೈತರ ಒತ್ತಾಯಕ್ಕೆ ಸಿದ್ದರಾಮಯ್ಯ ಮಣಿಯಲೇಬೇಕು : ನಗರಗೆರೆ ರಮೇಶ್
ರಾಜ್ಯದ ವಿವಿಧ ಪ್ರದೇಶಗಳಿಗೆ ಹರಡುತ್ತಿರುವ ರೈತರ ಹೋರಾಟದ ಕಿಚ್ಚನ್ನು ಗಮನಿಸಿಯಾದರೂ, ಎಂ.ಬಿ ಪಾಟೀಲ್ ಅವರಂತಹ ಕಾರ್ಪೊರೇಟ್ ಕುಳಗಳ ದಾಸರ ಮಾತನ್ನು ಪಕ್ಕಕ್ಕೆ ಸರಿಸಿ ಹಿಂದೆ ತಾವೇ ನೀಡಿದ ಮಾತಿನಂತೆ ಈಗ ರೈತರ ಒತ್ತಾಯಕ್ಕೆ ಸಿದ್ದರಾಮಯ್ಯನವರು ಮಣಿಯಲೇ ಬೇಕಾಗಿದೆ. ಇಲ್ಲವಾದಲ್ಲಿ ಅವಕಾಶವಾದಿ ರಾಜಕಾರಣಿಗಳ ಪಟ್ಟಿಯಲ್ಲಿ ಅವರ ಹೆಸರೂ ಸೇರಿಕೊಂಡು ರಾಜ್ಯದಲ್ಲಿ ಕೆಟ್ಟ ಚರಿತ್ರೆಯ ಹುಟ್ಟಿಗೆ ಕಾರಣರಾದರೆಂದೇ ಜನರ ನೆನಪಿನಲ್ಲಿ ಉಳಿಯುತ್ತಾರೆ. ಈ ವಿಷಯವನ್ನು ಅವರನ್ನು ಸುತ್ತುವರೆದಿರುವ ರಾಜಕಾರಣಿಗಳು ಅವರಿಗೆ ಅರ್ಥ ಮಾಡಿಸುವುದಿಲ್ಲ. ಅವರಿಗೇ ಪ್ರಬುದ್ಧತೆ ಇದ್ದರೆ ಅರ್ಥ ಮಾಡಿಕೊಳ್ಳಬೇಕು. ಪಕ್ಷದೊಳಗೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಗರಂ ಆಗಿರುವ ಹೈಕಮಾಂಡ್‌ಗೆ ರಾಜ್ಯದ ರಾಜಧಾನಿಯ ಸಮೀಪವೇ ನಡೆಯುತ್ತಿರುವ ರೈತರ ಹೋರಾಟ ಗಮನಕ್ಕೆ ಬರಲಿಲ್ಲವೇ? ಇಲ್ಲವೆಂದರೆ, ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ದಿವಾಳಿತನ ಎಷ್ಟು ಆಳವಾಗಿ ಬೇರೂರಿದೆ ಅನ್ನುವುದು ಪ್ರಗಾಢವಾಗಿ ಪ್ರದರ್ಶಿತವಾಗುತ್ತದೆ ಎಂದು ಪ್ರಗತಿಪರ ಹೋರಾಟಗಾರ ನಗರಗೆರೆ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


