ಹುಬ್ಬಳ್ಳಿಯಲ್ಲಿ ನಡೆದ ಗರ್ಭಿಣಿ ಯುವತಿಯ ಮರ್ಯಾದೆಗೇಡು ಹತ್ಯೆ ಖಂಡಿಸಿ ಮಂಡ್ಯದ ಮಳವಳ್ಳಿ ಪಟ್ಟಣದ ಅನಂತ್ ರಾವ್ ವೃತ್ತದಲ್ಲಿ ಜನವಾದಿ ಮಹಿಳಾ ಸಂಘಟನೆ, ಡಿವೈಎಫ್‌ಐ, ಎಸ್‌ಎಫ್‌ಐ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ (ಡಿ.24) ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ಅವರು, ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದಿರುವ ಕ್ರೂರ ಘಟನೆಯನ್ನು ಮಾನವೀಯ ನಾಗರಿಕ ಸಮಾಜ ಸಹಿಸುವುದಿಲ್ಲ ಎಂದರು.
ಎಂಟು ಶತಮಾನಗಳ ಹಿಂದೆಯೇ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿ ಜಾತಿಯತೆಯನ್ನು ಹೋಗಲಾಡಿಸಲು ಅಡಿಪಾಯ ಹಾಕಿದ್ದರು. ಆದರೆ, ಸಮಾಜದಲ್ಲಿ ಇಂದಿಗೂ ಮೇಲ್ಜಾತಿಯವರ ಅಟ್ಟಹಾಸ, ಜಾತಿ ತಾರತಮ್ಯ, ಜಾತಿ ದ್ವೇಷ, ಅಸ್ಪೃಶ್ಯತೆ, ದಲಿತರನ್ನು ಒಪ್ಪಿಕೊಳ್ಳಲಾಗದಂತ ಮನಸ್ಥಿತಿ ಆಳವಾಗಿದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಗರ್ಭಿಣಿಯಾದ ತನ್ನ ಮಗಳನ್ನೇ ಅಮಾನುಷವಾಗಿ ತಂದೆಯೇ ಕೊಲ್ಲುವ ಜಾತಿ ಪ್ರತಿಷ್ಠೆಯು ಘನ ಘೋರವಾಗಿದೆ. ಈ ಜಾತಿ ತಾರತಮ್ಯ, ಜಾತಿ ದ್ವೇಷ, ಅಸ್ಪೃಶ್ಯತೆ ನಿರ್ಭೀಜಗೊಳಿಸದೆ ಸಮಾಜದಲ್ಲಿ ಬೆಳವಣಿಗೆ, ಸಾಮರಸ್ಯ ತರುವುದು ಸಾಧ್ಯವಿಲ್ಲ ಎಂದು ತಿಳಿಸಿದರು.
ಮರ್ಯಾದೆಗೇಡು ಹತ್ಯೆ ನಡೆಸಿದ ಎಲ್ಲರ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮೃತ ಮಾನ್ಯಾಳ ಪತಿ ವೀವೇಕಾನಂದ ದೊಡ್ಡಮನಿ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಸರ್ಕಾರ ಅಂತರ್ಜಾತಿ ವಿವಾಹವಾಗುವ ಎಲ್ಲಾ ಯುವಕ, ಯುವತಿಯರಿಗೆ ಸೂಕ್ತ ಕಾನೂನು ರಕ್ಷಣೆ ನೀಡಬೇಕು. ಅವರಿಗೆ ಸಾಮಾಜಿಕ, ಆರ್ಥಿಕ ಬಲ ತುಂಬಲು ಪ್ರೋತ್ಸಾಹ ಧನ ಹೆಚ್ಚಳಗೊಳಿಸಬೇಕು ಹಾಗೂ ಮೀಸಲಾತಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮರ್ಯಾದಗೇಡು ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್ ಹಲವು ಮಹತ್ವದ ಆದೇಶಗಳನ್ನು ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಬದ್ದತೆಯಿಂದ ಪಾಲಿಸುವ ಮೂಲಕ ಸಮಾಜದಲ್ಲಿ ಮರ್ಯಾದೆಗೇಡು ಹತ್ಯೆಯ ವಿರುದ್ದ ಕಠಿಣ ಕಾನೂನು ಜಾರಿಗೆ ತರಬೇಕು. ಮಹಿಳೆಯರ ಮೇಲಾಗುವ ಎಲ್ಲ ತರಹದ ದೌರ್ಜನ್ಯಗಳನ್ನು ತಡೆಗಟ್ಟಲು ನ್ಯಾ. ಜಿ.ಎಸ್ ವರ್ಮಾ ಸಮಿತಿಯ ಹಾಗೂ ಉಗ್ರಪ್ಪ ಸಮಿತಿಯ ಶಿಫಾರಸ್ಸುಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಜನವಾದಿ ಮಹಿಳಾ ಸಂಘಟನೆಯ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಸುಶೀಲಾ ಹಾಗೂ ಜಿಲ್ಲಾ ಉಪಾಧ್ಯಕ್ಷೆ ಶೋಭಾ ಪ್ರತಿಭಟನೆಯಲ್ಲಿ ಮಾತನಾಡಿದರು. ತಾಲೂಕು ಅಧ್ಯಕ್ಷ ಜಯಶೀಲ, ಪ್ರೇಮ, ಸಿಐಟಿಯು ರಾಜ್ಯ ಮುಖಂಡ ರಾಮಕೃಷ್ಣ, ಆನಂದ ಮತ್ತಯ ಇತರರು ಭಾಗವಹಿಸಿದ್ದರು.


