ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ವಿರುದ್ಧ ಢಾಕಾದಲ್ಲಿ ಯೋಜಿಸಲಾಗಿದ್ದ ಪ್ರತಿಭಟನೆಗೆ ಮುನ್ನ ಬಾಂಗ್ಲಾದೇಶ ಸೇನೆಯು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಬಂಧಿಸಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ಪ್ರತಿಭಟನೆಗೆ ಮುಂಚಿತವಾಗಿ ಢಾಕಾ ಕೋಟೆಯಾಗಿ ಮಾರ್ಪಟ್ಟಿದೆ ಎಂದು ವರದಿಗಳು ಹೇಳಿವೆ.
ಅವಾಮಿ ಲೀಗ್ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಲಾಗಿದ್ದು, ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ)ದ 191 ಪ್ಲಟೂನ್‌ಗಳನ್ನು ನಗರ ಮತ್ತು ಇತರ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ವರದಿಯಾಗಿದೆ. ಶೇಖ್ ಹಸೀನಾ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅವಾಮಿ ಲೀಗ್ ನಡೆಸಲು ಉದ್ದೇಶಿಸಿದ್ದ ಪ್ರಮುಖ ಶಕ್ತಿ ಪ್ರದರ್ಶನದಲ್ಲಿ, ಕಾರ್ಯಕರ್ತರು, ಬೆಂಬಲಿಗರು ಮತ್ತು ಭೂಗತ ನಾಯಕರು ಢಾಕಾದ ಗುಲಿಸ್ತಾನ್, ಝೀರೋ ಪಾಯಿಂಟ್ ಮತ್ತು ನೂರ್ ಹೊಸೈನ್ ಸ್ಕ್ವೇರ್ ಪ್ರದೇಶಗಳಲ್ಲಿ ಜಮಾಯಿಸುವ ನಿರೀಕ್ಷೆಯಿತ್ತು. ಈ ಪ್ರತಿಭಟನೆಯಲ್ಲಿ ತಮ್ಮ ನಾಯಕರ ವಿರುದ್ಧ ನಡೆಸುತ್ತಿರುವ ಸುಳ್ಳು ಪ್ರಚಾರದ ವಿರುದ್ಧ, ಪಕ್ಷದ ವಿದ್ಯಾರ್ಥಿ ವಿಭಾಗವಾದ ಛಾತ್ರ ಲೀಗ್ ಅನ್ನು ನಿಷೇಧಿಸುವುದರ ವಿರುದ್ಧ ಮತ್ತು ಅವಾಮಿ ಲೀಗ್ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ಕಿರುಕುಳದ ವಿರುದ್ಧ ಪ್ರತಿಭಟಿಸುವ ಬಗ್ಗೆ ಪಕ್ಷವು ಯೋಜಿಸಿತ್ತು.
ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ), ಜಮಾತ್-ಎ-ಇಸ್ಲಾಮಿ ಮತ್ತು ಇತರ ಗುಂಪುಗಳ ಪ್ರತಿಭಟನೆಗಳ ನಂತರ ಈ ವರ್ಷದ ಆಗಸ್ಟ್ 5 ರಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದರು. ಇದರ ನಂತರ ದೇಶದ ನೇತೃತ್ವವನ್ನು ನೋಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್ ಅವರು ವಹಿಸಿಕೊಂಡಿದ್ದಾರೆ. ಈ ವೇಳೆ ಶೇಖ್ ಹಸೀನಾ ಅವರ ಪಕ್ಷದ ಮೇಲೆ ಭಾರಿ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಅವಾಮಿ ಲೀಗ್‌ನ ಯಾವುದೇ ಸಭೆ ಅಥವಾ ಪ್ರತಿಭಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಬಿಎನ್‌ಪಿ ಮತ್ತು ಜಮಾತ್ ಘೋಷಿಸಿವೆ. ಅವಾಮಿ ಲೀಗ್‌ನ ಪ್ರಧಾನ ಕಛೇರಿಯಾದ ಗುಲಿಸ್ತಾನ್‌ನಂತಹ ಪ್ರದೇಶಗಳು ಮತ್ತು ಇತರ ಸಂಭಾವ್ಯ ಪ್ರತಿಭಟನಾ ಸ್ಥಳಗಳನ್ನು ಜಮಾತ್-ಎ-ಇಸ್ಲಾಮಿ ಮತ್ತು BNP ಕಾರ್ಯಕರ್ತರು ಅವಾಮಿ ಲೀಗ್ ಬೆಂಬಲಿಗರು ಸೇರುವುದನ್ನು ತಡೆಯಲು ಆಕ್ರಮಿಸಿಕೊಂಡಿದ್ದಾರೆ.
ಪ್ರತಿಭಟನೆಗೆ ಅನುಮತಿ ನಿರಾಕರಿಸಿರುವ ಮುಹಮ್ಮದ್ ಯೂನಸ್ ಆಡಳಿತವು ಅವಾಮಿ ಲೀಗ್ ಪಕ್ಷವನ್ನು “ಫ್ಯಾಸಿಸ್ಟ್ ಪಕ್ಷ” ಎಂದು ಉಲ್ಲೇಖಿಸಿದೆ. ಜೊತೆಗೆ ಯಾವುದೇ “ಹಿಂಸಾಚಾರವನ್ನು ಪ್ರಚೋದಿಸುವ ಪ್ರಯತ್ನಗಳನ್ನು” ಸಹಿಸುವುದಿಲ್ಲ ಎಂದು ಹೇಳಿದೆ.
“ಅವಾಮಿ ಲೀಗ್ ಪಕ್ಷವೂ ಪ್ರಸ್ತುತ ಫ್ಯಾಸಿಸ್ಟ್ ರೂಪದಲ್ಲಿ ಇರುವ ಪಕ್ಷವಾಗಿದೆ. ಈ ಫ್ಯಾಸಿಸ್ಟ್ ಪಕ್ಷಕ್ಕೆ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಮಧ್ಯಂತರ ಸರ್ಕಾರವು ದೇಶದಲ್ಲಿ ಹಿಂಸಾಚಾರ ಅಥವಾ ಕಾನೂನು ಸುವ್ಯವಸ್ಥೆಯನ್ನು ಒಡೆಯುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ” ಎಂದು ಯೂನಸ್ ಅವರ ಪತ್ರಿಕಾ ಕಾರ್ಯದರ್ಶಿ ಶಫೀಕುಲ್ ಆಲಂ ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರ್ಯಾಲಿಗಳು, ಸಭೆಗಳು ಅಥವಾ ಮೆರವಣಿಗೆಗಳನ್ನು ನಡೆಸಲು ಪ್ರಯತ್ನಿಸುವ ಜನರು “ಕಾನೂನು ಜಾರಿಗೊಳಿಸುವ ಏಜೆನ್ಸಿಗಳ ಸಂಪೂರ್ಣವಾಗಿ ಎದುರಿಸುತ್ತಾರೆ” ಎಂದು ಆಲಂ ಹೇಳಿದ್ದಾರೆ. ಏತನ್ಮಧ್ಯೆ, ತಮ್ಮ ಪ್ರತಿಭಟನೆಯು ಬಾಂಗ್ಲಾದೇಶದ ಜನರ ಹಕ್ಕುಗಳಿಗಾಗಿ ಮತ್ತು ಮೂಲಭೂತವಾದಿ ಶಕ್ತಿಗಳ ಉದಯದ ವಿರುದ್ಧವಾಗಿದೆ ಎಂದು ಅವಾಮಿ ಲೀಗ್ ಹೇಳಿದೆ.
“ನಮ್ಮ ಪ್ರತಿಭಟನೆಯು ದೇಶದ ಜನರ ಹಕ್ಕುಗಳನ್ನು ಕಸಿದುಕೊಳ್ಳುವುದರ ವಿರುದ್ಧ; ಮೂಲಭೂತವಾದಿ ಶಕ್ತಿಗಳ ಉದಯದ ವಿರುದ್ಧ; ಸಾಮಾನ್ಯ ಜನರ ಜೀವನವನ್ನು ಅಡ್ಡಿಪಡಿಸುವ ಪಿತೂರಿಯ ವಿರುದ್ಧವಾಗಿದೆ. ಪ್ರಸ್ತುತ ಆಡಳಿತದ ದುರಾಡಳಿತದ ವಿರುದ್ಧದ ಪ್ರತಿಭಟನೆಯಲ್ಲಿ ಅವಾಮಿ ಲೀಗ್ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸೇರಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ” ಎಂದು ಪಕ್ಷವು ಹೇಳಿದೆ.
ಈ ನಡುವೆ ಹಲವಾರು ರಾಜಕೀಯ ಬಣಗಳು ಅವಾಮಿ ಲೀಗ್ ಅನ್ನು ನಿಷೇಧಿಸುವಂತೆ ಕರೆ ನೀಡಿವೆ. ಆದಾಗ್ಯೂ, ಈ ನಿರ್ಧಾರವು ರಾಜಕೀಯ ಪಕ್ಷಗಳ ಮೇಲೆ ಬಿಡಲಾಗಿದೆ ಎಂದು ಪ್ರಧಾನಿ ಯೂನಸ್ ಹೇಳಿದ್ದಾರೆ. ಮಧ್ಯಂತರ ಸರ್ಕಾರದ ಕೆಲವು ಮಂತ್ರಿಗಳು ಕೂಡಾ ಈ ನಿಷೇಧವನ್ನು ವಿರೋಧಿಸಿದ್ದು, ರಾಜಕೀಯ ಒಳಗೊಳ್ಳುವಿಕೆಯ ಮಹತ್ವವನ್ನು ಒತ್ತಿಹೇಳಿದ್ದಾರೆ. ದೇಶದ ಪ್ರಮುಖ ಪಕ್ಷವಾದ BNP ಕೂಡ ಯಾವುದೇ ರಾಜಕೀಯ ಪಕ್ಷದ ನಿಷೇಧವನ್ನು ವಿರೋಧಿಸಿದೆ.
ಇದನ್ನೂ ಓದಿ: ಮಹಾ ವಿಕಾಸ್ ಅಘಾಡಿ ಪ್ರಣಾಳಿಕೆ; ಮಹಿಳೆಯರಿಗೆ ₹3 ಸಾವಿರ, ಜಾತಿ ಗಣತಿ ಭರವಸೆ
ಮಹಾ ವಿಕಾಸ್ ಅಘಾಡಿ ಪ್ರಣಾಳಿಕೆ; ಮಹಿಳೆಯರಿಗೆ ₹3 ಸಾವಿರ, ಜಾತಿ ಗಣತಿ ಭರವಸೆ


