ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ ಸುದ್ದಿಯಾಗುವ ಮಾಜಿ ಸಂಸದ ಪ್ರತಾಪ್ ಸಿಂಹ, ಈಗ ಮತ್ತೊಂದು ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ.
ನಾಗಮಂಗಲದಲ್ಲಿ ಗಣೇಶ ಹಬ್ಬದ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮುಸ್ಲಿಮರ ಬಳಿ ಇರುವ ಪೆಟ್ರೋಲ್ ಬಾಂಬ್, ತಲ್ವಾರ್ ಕಿತ್ತುಕೊಳ್ಳಬೇಕು. ಇಲ್ಲದಿದ್ದರೆ, ನಾವೂ ತಲ್ವಾರ್ ಹಿಡಿಯುತ್ತೇವೆ” ಎಂದಿದ್ದಾರೆ.
“ಹಿಂದೂಗಳು ಯಾವತ್ತೂ ಪ್ರಚೋದನೆ ಮಾಡಲ್ಲ, ಪ್ರತಿಕ್ರಿಯೆ ಕೊಡುತ್ತಾರೆ ಅಷ್ಟೆ. ನಾಗಮಂಗಲದಲ್ಲಿ ಮುಸ್ಲಿಮರು ದಾಳಿ ನಡೆಸಿದ್ದಾರೆ. ಅದಕ್ಕೆ ಹಿಂದೂಗಳು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಆದರೆ, ಹಿಂದೂಗಳ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಾಜ್ಯದ ವಿವಿದೆಡೆ ಗಣೇಶ ಹಬ್ಬದ ಅದ್ದೂರಿ ಮೆರವಣಿಗೆಗಳು ನಡೆಯಲಿದೆ. ಅಲ್ಲಿ, ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಹಿಂದೂಗಳಿಗೆ ರಕ್ಷಣೆ ಕೊಡಬೇಕು. ಇಲ್ಲದಿದ್ದರೆ, ನಾವು ಹಿಂದೂಗಳು ನಮ್ಮ ರಕ್ಷಣೆಗೆ ತಲ್ವಾರ್ ಹಿಡಿಯಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಮಹಿಷ ದಸರಾ ಬಗ್ಗೆ ಮಾತನಾಡಿದ ಮಾಜಿ ಸಂಸದ, “ಚಾಮುಂಡಿಗೆ ಅವಮಾನ ಆಗುವುದಕ್ಕೆ ಬಿಡುವುದಿಲ್ಲ. ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ನಡೆಸಲು ಬಿಡುವುದಿಲ್ಲ. ಮಹಿಷಾ ದಸರಾ ನಡೆಸುವವರು ಅವರ ಮನೆಗಳಲ್ಲಿ ಮಾಡಿಕೊಳ್ಳಲಿ” ಎಂದಿದ್ದಾರೆ.
ಮುಡಾ ಮತ್ತು ವಾಲ್ಮೀಕಿ ನಿಮಗದ ಆಪಾದಿತ ಹಗರಣಗಳ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, “ಮುಖ್ಯಮಂತ್ರಿ ಸಿದ್ದರಾಮಯ್ಯ ತಲೆದಂಡ ಖಚಿತ. ಮುಡಾ ಹಗರಣ ವಿಚಾರ ಹೈಕೋರ್ಟ್‌ನಲ್ಲಿದೆ. ಆ ಪ್ರಕರಣದಲ್ಲಿ ಏನೇ ಆದರೂ, ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡುವುದು ನಿಶ್ಚಿತ. ಆರ್ಥಿಕ ಹಗರಣ ಆದಾಗ, ಆರ್ಥಿಕ ಸಚಿವರೇ ಹೊಣೆಗಾರರಾಗಿರುತ್ತಾರೆ. 88 ಕೋಟಿ ರೂಪಾಯಿ ಅವ್ಯವಹಾರ ಆಗಿರುವ ಬಗ್ಗೆ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೊಪ್ಪಳ | ಮಾದಿಗ ಯುವಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ : ಪ್ರಕರಣ ದಾಖಲು


