ಕೇಂದ್ರ ಸರ್ಕಾರದ ವಿರುದ್ಧ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ತಾರತಮ್ಯ ತೋರುತ್ತಿರುವ ಮೋದಿ ಸರ್ಕಾರದ ಧೋರಣೆಯನ್ನು ಖಂಡಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಭಾರತದಲ್ಲಿ ಫೆಡರಲಿಸಂಗೆ ಹಣಕಾಸಿನ ವಿಷಯದಲ್ಲಿ ಉದಯೋನ್ಮುಖ ಸವಾಲುಗಳು’ ಎಂಬ ವಿಷಯದ ಕುರಿತು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೆಮಿನಾರ್ ನ್ನು ಉದ್ಘಾಟಿಸಿ, ಸಿಎಂ ನಾರಾಯಣಸ್ವಾಮಿ ಮಾತನಾಡಿದರು. ಜಿಎಸ್ ಟಿ ಹಾಗೂ ಇತರೆ ಯೋಜನೆಗಳ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ಪುದುಚೇರಿಯನ್ನು ರಾಜ್ಯವಾಗಿ ಪರಿಗಣಿಸುತ್ತಿದೆ. ಆದರೆ ಇತರೆ ರಾಜ್ಯಗಳಿಗೆ ಮಾತ್ರ ಪುದುಚೇರಿ ಕೇಂದ್ರಾಡಳಿತ ಪ್ರದೇಶವಾಗಿದೆ. ಕೇಂದ್ರಾಡಳಿತ ಪ್ರದೇಶಗಳನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಸರ್ಕಾರ, ಟ್ರಾನ್ಸ್ ಜೆಂಡರ್ ನಂತೆ ಪರಿಗಣಿಸುತ್ತಿದೆ ಎಂದು ಕಿಡಿಕಾರಿದರು.
ಪುದುಚೇರಿಗೆ ಅನುದಾನ ಮಂಜೂರು ಮಾಡುವಾಗ ಕೇಂದ್ರವು ವಿಭಿನ್ನ ನಿಲುವು ತಳೆಯುತ್ತಿದೆ. ಕೇಂದ್ರಾಡಳಿತ ಪ್ರದೇಶವನ್ನು ಟ್ರಾನ್ಸ್ ಜೆಂಡರ್ ನಂತೆ ಪರಿಗಣಿಸುತ್ತಿದೆ. ಪುದುಚೇರಿಯನ್ನು ಕೆಲ ಯೋಜನೆಗಳಿಗೆ ಕೇಂದ್ರ ಸರ್ಕಾರ ರಾಜ್ಯದಂತೆ ಪರಿಗಣಿಸುತ್ತಿದ್ದು, ಇತರರಿಗೆ ಕೇಂದ್ರಾಡಳಿತ ಪ್ರದೇಶವೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಇದೊಂದು ವಿಚಿತ್ರ ವಿಧಾನ ಮತ್ತು ಅಸಹಾಯಕತೆಯನ್ನು ಪ್ರದರ್ಶಿಸುತ್ತಿದೆ ಎಂದು ಹೇಳಿದರು.
ಪ್ರಾದೇಶಿಕ ಬಜೆಟ್ ಗೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಪುದುಚೇರಿಯನ್ನು ನಿರ್ಲಕ್ಷಿಸುತ್ತಿದೆ. ಪುದುಚೇರಿಗೆ ಬರಬೇಕಿದ್ದ ಶೇ. 30ರಷ್ಟು ಅನುದಾನದಲ್ಲಿ ಶೇ. 26ಕ್ಕೆ ಅನುದಾನವನ್ನು ಇಳಿಕೆ ಮಾಡಿದೆ. ಕೇಂದ್ರ ಸರ್ಕಾರದ ಸಮರ್ಪಕ ಬೆಂಬಲದ ಕೊರತೆಯಿಂದ ಉಚಿತ ಅಕ್ಕಿ ವಿತರಣೆ ಯೋಜನೆಯಲ್ಲಿ ಸಾಕಷ್ಟು ಅಡೆತಡೆ, ತೊಂದರೆಗಳನ್ನು ಪುದುಚೇರಿ ಅನುಭವಿಸುತ್ತಿದೆ. ಇನ್ನು ಲೆಫ್ಟಿನೆಂಟ್ ಗವರ್ನರ್ ಅವರ ಆಡಳಿತಾತ್ಮಕ ಅಡಚಣೆಗಳು ನಮಗೆ ಮುಜುಗರವನ್ನುಂಟು ಮಾಡಿವೆ ಎಂದು ಕೇಂದ್ರದ ಧೋರಣೆಯ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ತಡರಾತ್ರಿ ಶರದ್ ಪವಾರ್ ಭೇಟಿಯಾದ ಉದ್ಧವ್ ಠಾಕ್ರೆ: ಅಂತಿಮ ಹಂತಕ್ಕೆ ತಲುಪಿದ ಸರ್ಕಾರ ರಚನೆ ಕಸರತ್ತು.
ಅಲ್ಲದೇ ಜಮ್ಮುಕಾಶ್ಮೀರ ಹಾಗೂ ಲಡಾಖ್ ನ್ನು ಹೊಸದಾಗಿ ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಆದರೆ ಹಳೆಯ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯನ್ನು 15 ನೇ ಕೇಂದ್ರ ಹಣಕಾಸು ಆಯೋಗದ ಸದಸ್ಯರನ್ನಾಗಿ ಸೇರಿಸಿಕೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಕೇರಳ ಹಣಕಾಸು ಸಚಿವ ಥಾಮಸ್ ಇಸಾಕ್ ಮಾತನಾಡಿ, ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಹಸ್ತಕ್ಷೇಪ ಪುದುಚೇರಿಯಲ್ಲಿ ಪ್ರಜಾಪ್ರಭುತ್ವದ ಅಪಹಾಸ್ಯವಾಗುತ್ತಿರುವುದನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದರು.
ಡಿಎಂಕೆ ಪಕ್ಷದ ಎಂ.ಕೆ.ಕನಿಮೋಳಿ ಮಾತನಾಡಿ, ಉತ್ತಮ ಪ್ರದರ್ಶನ ನೀಡುತ್ತಿರುವ ಮತ್ತು ಪ್ರಗತಿಪರ ರಾಜ್ಯಗಳಿಗೆ ದಂಡ ವಿಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ಧಾರಗಳು, ವರ್ತನೆ ಪ್ರಗತಿಪರ ರಾಜ್ಯಗಳಿಗೆ ಮಾರಕವಾಗಿವೆ. ಜಿಎಸ್ ಟಿ ಹೇರಿಕೆ ಮತ್ತು ಆರ್ಥಿಕ ನಷ್ಟದಿಂದ ಮತ್ತಷ್ಟು ಹಾನಿಯುಂಟಾಗಿದೆ. ತಿರುಪುರದಂತಹ ಕೈಗಾರಿಕಾ ಪ್ರದೇಶಗಳಲ್ಲಿ ಹೊಸ ತೆರಿಗೆ ವಿಧಿಸಿದ್ದರಿಂದ ಕೆಲ ಕೈಗಾರಿಕೆಗಳು ಬಾಗಿಲು ಹಾಕಿವೆ. ಉದ್ಯೋಗ ನಷ್ಟ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಿಳುನಾಡು ಸಿಪಿಐ (ಎಂ) ಕಾರ್ಯದರ್ಶಿ ಬಾಲಕೃಷ್ಣನ್ ಮಾತನಾಡಿ, ಕ್ಯಾಬಿನೆಟ್ ನಿರ್ಧಾರಗಳನ್ನು ಅನುಷ್ಠಾನಗೊಳಿಸುವಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ನಿರಂತರ ಹಸ್ತಕ್ಷೇಪವಿದೆ. ಹೀಗಿದ್ದರೆ ಹುದ್ದೆಯ ಅಗತ್ಯವಿಲ್ಲ. ಎಲ್ಲವೂ ಸ್ವಯಂಚಾಲಿತವಾಗಿದೆ. ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಬಹುಸಾಂಸ್ಕೃತಿಕ ಮತ್ತು ಬಹುಭಾಷೆ ಹಾಗೂ ವೈವಿಧ್ಯತೆಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.


