Homeಚಳವಳಿಮೀಸಲಾತಿ ಮತ್ತು ಆರ್ಥಿಕತೆ : ಡಾ. ಬಿ.ಸಿ ಬಸವರಾಜ್

ಮೀಸಲಾತಿ ಮತ್ತು ಆರ್ಥಿಕತೆ : ಡಾ. ಬಿ.ಸಿ ಬಸವರಾಜ್

- Advertisement -
- Advertisement -

ಮೀಸಲಾತಿ ಕಣ್ಣಗಾಯಕ್ಕೊಂದು ಕನ್ನಡಿ

ಸರಣಿ ಸಂಪಾದಕರು: ವಿಕಾಸ್ ಆರ್‌ ಮೌರ್ಯ

ನಾನು ಕ್ಲಾಸಲ್ಲಿ ಮಧ್ಯೆ ಒಮ್ಮೊಮ್ಮೆ ಮೀಸಲಾತಿ ಬಗ್ಗೆ ವಿದ್ಯಾರ್ಥಿಗಳ ಅನಿಸಿಕೆಯನ್ನು ಕೇಳಿದಾಗ ಸಾಮಾನ್ಯವಾಗಿ “ಈ ಎಪ್ಪತ್ತು ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದವರು ಮೀಸಲಾತಿಯಿಂದಾಗಿಯೇ ಇತರ ಮೇಲ್ಜಾತಿಯವರ ಸರಿಸಮಕ್ಕೇ ಆರ್ಥಿಕವಾಗಿ ಮುಂದುವರೆದಿದಾರೆ, ಹಾಗಾಗಿ ಮೀಸಲಾತಿ ಕೊಟ್ರೆ ಜಾತಿ ಆಧಾರಿತಕ್ಕಿಂತಲೂ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮೀಸಲಾತಿ ಕೊಡುವುದು ಬೆಟರ್” ಎಂಬ ಉತ್ತರ ಬಹುತೇಕ ವಿದ್ಯಾರ್ಥಿಗಳಿಂದ ಬರ್ತಿದೆ. ಈ ವಿಷಯದಲ್ಲಿ ಬಹುಸಂಖ್ಯಾತ ವಿದ್ಯಾರ್ಥಿಗಳು ಓದಿ ತಮ್ಮ ಅಭಿಪ್ರಾಯ ರೂಪಿಸಿಕೊಳ್ಳುವುದಕಿಂತ ಸುತ್ತಲಿನ ಸಮಾಜದ ಸಾಮಾನ್ಯ ಗ್ರಹಿಕೆಯನ್ನೇ ತಮ್ಮ ಅನಿಸಿಕೆಯನ್ನಾಗಿ ಮಾಡಿಕೊಂಡಿರುತ್ತಾರೆ ಎನ್ನುವುದು ನಮಗೆ ತಿಳಿದ ಸತ್ಯ.

ಮೀಸಲಾತಿ ಇರುವುದು ಆರ್ಥಿಕ ಅಸಮಾನತೆಗಿಂತ ಮುಖ್ಯವಾಗಿ ಸಾಮಾಜಿಕ ಅಸಮಾನತೆಯನ್ನು ಸರಿಪಡಿಸಲು ಎಂಬುದು ನಿರ್ವಿವಾದವಾದ ವಿಷಯವಾದರೂ, ಆರ್ಥಿಕ ಸಮಾನತೆ ಒಂದು ಮಟ್ಟಿಗೆ ಸಾಮಾಜಿಕ ಅಸಮಾನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂಬ ಹಿನ್ನೆಲೆಯೊಳಗೆ ಮೀಸಲಾತಿಯಿಂದ ನಮ್ಮ ವಿದ್ಯಾರ್ಥಿಗಳು ಹೇಳುವಂತೆ ಆರ್ಥಿಕ ಅಸಮಾನತೆಯಾದರೂ ಕಡಿಮೆಯಾಗಿದೆಯೇ ಎಂದು ನೋಡುವ ಪ್ರಯತ್ನ ಮಾಡೋಣ.

ಇದನ್ನೂ ಓದಿ: ದಲಿತರ ಮೀಸಲಾತಿ: ಬೆಳಕಾಗಬೇಕಾಗಿದೆ ಬೆಂಕಿ – ಡಾ.ರವಿಕುಮಾರ್ ನೀಹ 

2012ರ NSSO (ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್) ವರದಿಯ ಪ್ರಕಾರ ದೇಶದಲ್ಲಿ ಒಟ್ಟು ಸಂಘಟಿತ ವಲಯದಲ್ಲಿ 8.56 ಕೋಟಿ ಉದ್ಯೋಗಿಗಳಿದ್ದು ಅದರಲ್ಲಿ 6 ಕೋಟಿಯಷ್ಟು ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಉಳಿದ 2.56 ಕೋಟಿ ಸರ್ಕಾರಿ ಉದ್ಯೋಗಿಗಳಲ್ಲಿ 1.54 ಕೋಟಿಯಷ್ಟು ಮಾತ್ರ ಖಾಯಂ ಹುದ್ದೆ ಹೊಂದಿರುತ್ತಾರೆ. ಈ 1.54 ಕೋಟಿ ಕಾಯಂ ಹುದ್ದೆಗಳಿಗೆ ಮಾತ್ರ ಮೀಸಲಾತಿ ಅನ್ವಯವಾಗುತ್ತಿದ್ದು ಅದರಲ್ಲಿ 25.86 ಲಕ್ಷ ಮಂದಿಯಷ್ಟು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಅಂದರೆ, ಒಟ್ಟು 8.56 ಕೋಟಿ ಉದ್ಯೋಗಗಳಲ್ಲಿ (ಖಾಸಗಿ ಮತ್ತು ಸರ್ಕಾರಿ ಉದ್ಯೋಗಗಳು ಸೇರಿ) ಕೇವಲ 3% ನಷ್ಟು ಮಾತ್ರ ಕಾಯಂ ಉದ್ಯೋಗಗಳನ್ನು ಮೀಸಲಾತಿಯ ಮೂಲಕ ಪರಿಶಿಷ್ಟ ಜಾತಿಯವರು ಪಡೆದಿರುತ್ತಾರೆ.

ಹೀಗೆ ಮೀಸಲಾತಿಯ ಮೂಲಕ ಕಾಯಂ ಸರ್ಕಾರೀ ಉದ್ಯೋಗ ಪಡೆದ ಪರಿಶಿಷ್ಟ ಜಾತಿಯ ಬಡತನ ಕಡಿಮೆಯಾಗಿದೆಯೇ ನೋಡೋಣ. 2011-12 ರ NSSO ವರದಿಯಂತೆ ಗ್ರಾಮೀಣ ಪ್ರದೇಶದಲ್ಲಿ ಪರಿಶಿಷ್ಟ ಜಾತಿಯ ಶೇ 29 ರಷ್ಟು ರೈತರು, ಶೇ 43 ರಷ್ಟು ಕಾರ್ಮಿಕರು ಮತ್ತು ನಗರ ಪ್ರದೇಶದ ಪರಿಶಿಷ್ಟ ಜಾತಿಯ ಶೇ 23 ರಷ್ಟು ಸ್ವ ಉದ್ಯೋಗಿಗಳು ಮತ್ತು ಶೇ 38 ರಷ್ಟು ಕಾರ್ಮಿಕರು ಬಡತನದ ರೇಖೆಗಿಂತ ಕೆಳಗಿದ್ದಾರೆ. ಆದರೆ, ಕಾಯಂ ಸರ್ಕಾರೀ ಹುದ್ದೆಯಲ್ಲಿರುವ ಪರಿಶಿಷ್ಟ ಜಾತಿಯವರಲ್ಲಿ ಕೇವಲ ಶೇ 12 ರಿಂದ 13 ರಷ್ಟು ಮಾತ್ರ ಬಡತನ ರೇಖೆಗಿಂತ ಕೆಳಗಿದ್ದಾರೆ.

ಈ ಅಂಕಿಅಂಶಗಳ ಪ್ರಕಾರ, ಮೀಸಲಾತಿಯಿಂದ ಸಿಕ್ಕಿದ ಕಾಯಂ ಸರ್ಕಾರೀ ಉದ್ಯೋಗ ಪರಿಶಿಷ್ಟ ಜಾತಿಯವರ ಆರ್ಥಿಕ ಪರಿಸ್ಥಿತಿಯನ್ನು ಒಂದು ಮಟ್ಟಿಗಾದರೂ ಉತ್ತಮಗೊಳಿಸಿದೆ. ಈ ಲೇಖನದಲ್ಲಿ ಮೀಸಲಾತಿಯಿಂದ ಪರಿಶಿಷ್ಟ ಜಾತಿಯ ಮೇಲಾಗಿರುವ ಪರಿಣಾಮವನ್ನು (ಒಂದು ಕಾಲದಲ್ಲಿ ಅಧಿಕೃತವಾಗಿ ಮತ್ತು ಈಗಲೂ ಅಸ್ಪೃಶ್ಯತೆಗೆ ಒಳಗಾಗಿ ಹೆಚ್ಚು ತುಳಿತಕ್ಕೊಳಗಾದವರು ಎಂಬ ಕಾರಣಕ್ಕಾಗಿ) ಚರ್ಚಿಸಲಾಗುತ್ತಿದೆ. ಮೀಸಲಾತಿಯಿಂದ ಒಂದು ಮಟ್ಟಿಗೆ ಪರಿಶಿಷ್ಟ ಜಾತಿಯಲ್ಲಾದ ಆರ್ಥಿಕ ಅಭಿವೃದ್ಧಿ ಇತರೆ ಹಿಂದುಳಿದ ಜಾತಿಗಳಲ್ಲಿ ಇನ್ನೂ ಹೆಚ್ಚಾಗಿಯೇ ಆಗಿದೆ (ಇತರೆ ಹಿಂದುಳಿದ ಜಾತಿಗಳಿಗೆ ಪರಿಶಿಷ್ಟರಿಗಿಂತ ಹೆಚ್ಚಿನ ಸಾಮಾಜಿಕ ಅನುಕೂಲತೆ ಇದೆ ಎನ್ನುವ ಕಾರಣಕ್ಕೆ) ಎಂಬುದನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

ಆದರೆ, ಮೀಸಲಾತಿಯಿಂದ ಪರಿಶಿಷ್ಟ ಜಾತಿಯ ಆರ್ಥಿಕ ಅಭಿವೃದ್ಧಿ ಈ ಎಪ್ಪತ್ತು ವರ್ಷಗಳಲ್ಲಿ ಆಗಬೇಕಿದ್ದಷ್ಟು ಆಗಿದೆಯೇ ಎಂದು ನೋಡಿದರೆ ವಾಸ್ತವ ನಿರಾಶಾದಾಯಕವಾಗಿದೆ. ಇದರಿಂದ ಮೀಸಲಾತಿ ಬಡತನ ನಿರ್ಮೂಲನದಲ್ಲಿ ಸೋತಿದೆ ಎಂದು ಹೇಳಲಾಗುವುದಿಲ್ಲ. ಇದಕ್ಕೆ ನಿಜವಾದ ಕಾರಣ, ದೇಶದಲ್ಲಿ ಇರುವ ಶೇಕಡಾ ಎಂಬತ್ತರಷ್ಟು ಉದ್ಯೋಗಗಳು ( ಸರ್ಕಾರಿ ಮತ್ತು ಖಾಸಗಿ ಎಲ್ಲವೂ ಸೇರಿ) ಮೀಸಲಾತಿಗೆ ಒಳಪಡದಿರುವುದೇ ಆಗಿದೆ. ಮೇಲಿನ ಅಂಕಿಅಂಶಗಳು ತೋರಿಸುವಂತೆ, ಒಟ್ಟು ಉದ್ಯೋಗಗಳಲ್ಲಿ ಮೀಸಲಾತಿಯಿಂದ ಪರಿಶಿಷ್ಟರಿಗೆ ದಕ್ಕಿರುವುದು ಕೇವಲ 3% ರಷ್ಟು ಉದ್ಯೋಗಗಳು ಎನ್ನುವುದು ಮೀಸಲಾತಿ ಪರಿಶಿಷ್ಟರ ಆರ್ಥಿಕ ಉನ್ನತಿಗೆ ಸಹಾಯ ಮಾಡಿದ್ದರೂ ಆ ಸಹಾಯ ಆಗಿರುವುದು ಕೆಲವರಿಗೆ ಮಾತ್ರ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ: ವಾಸ್ತವ ಮತ್ತು ವೈರುಧ್ಯಗಳು – ಭಾರತೀದೇವಿ.ಪಿ

ಹೋಗಲಿ, ಮೀಸಲಾತಿಯ ಪ್ರಯೋಜನ ಪಡೆದ ಬಹುತೇಕ ಪರಿಶಿಷ್ಟ ಜಾತಿಯ ಜನ ತಮ್ಮ ಬಡತನವನ್ನು ಮೀರಿ ಶ್ರೀಮಂತರಾಗಿಬಿಟ್ಟಿದ್ದಾರೆಯೇ ಎಂದು ನೋಡಿದರೆ ಅದೂ ಇಲ್ಲ. ಇಂದಿಗೂ ಶೇ 96 ರಷ್ಟು ಪರಿಶಿಷ್ಟ ಜಾತಿಯ ಕಾಯಂ ಉದ್ಯೋಗಿಗಳು ಹೊಂದಿರುವ ತಲಾ ಕೃಷಿ ಭೂಮಿ ಐದು ಎಕರೆಗಿಂತಲೂ ಕಡಿಮೆ. ಇದಕ್ಕೆ ಪ್ರಮುಖ ಕಾರಣ ತಮಗಿದ್ದ ಸಾಮಾಜಿಕ ಅನಾನುಕೂಲತೆಯಿಂದಾಗಿ ಹೆಚ್ಚು ಓದಲಾಗದೆ ಬಹುತೇಕ ಸಿ ಮತ್ತು ಡಿ ಗ್ರೇಡ್ ಉದ್ಯೋಗಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದ್ದು. ಕೇಂದ್ರ ಸರ್ಕಾರದ ಪಬ್ಲಿಕ್ ಸೆಕ್ಟರುಗಳಲ್ಲಿ ಇರುವ ಪರಿಶಿಷ್ಟ ಜಾತಿಯ ಉದ್ಯೋಗಿಗಳಲ್ಲಿ ಶೇ 81 ರಷ್ಟು ಮಂದಿ ಸಿ ಮತ್ತು ಡಿ ಗ್ರೇಡ್ ಉದ್ಯೋಗಗಳಲ್ಲಿರುವುದು ಈ ಅಂಶವನ್ನು ದೃಢೀಕರಿಸುತ್ತದೆ.

ಇದೇ ಹಿನ್ನೆಲೆಯಲ್ಲಿ, ಈಗ ಒಟ್ಟಾರೆಯಾಗಿ ಮೇಲ್ಜಾತಿ, ಇತರೆ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿಗಳ ನಡುವಿನ ಆರ್ಥಿಕ ಅಸಮಾನತೆ ಯಾವ ಸ್ಥಿತಿಯಲ್ಲಿದೆ ನೋಡೋಣ.
ಪಟ್ಟಿ 1ರಲ್ಲಿರುವ 2012 – 14ರ NSSO ಟೇಬಲ್ ಗಮನಿಸಿ.

2014ರಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಮೇಲ್ಜಾತಿಯವರು ಶೇ 21, ಇತರೆ ಹಿಂದುಳಿದ ವರ್ಗ ಶೇ 36 ಮತ್ತು ಪರಿಶಿಷ್ಟ ಜಾತಿಯವರು ಶೇ 18.6 ರಷ್ಟಿದ್ದಾರೆ.

ಪರಿಶಿಷ್ಟ ಜಾತಿಯವರಲ್ಲಿ ಶೇ 30 ರಷ್ಟು ಮತ್ತು ಹಿಂದುಳಿದ ವರ್ಗದಲ್ಲಿ ಶೇ 20 ರಷ್ಟು ಬಡವರಾಗಿದ್ದರೆ, ಮೇಲ್ಜಾತಿಯವರಲ್ಲಿ ಅದು ಕೇವಲ ಶೇ 9 ರಷ್ಟಿದೆ.

ಪ್ರತಿ ಕುಟುಂಬದ ಸರಾಸರಿ ಆಸ್ತಿ ಪರಿಶಿಷ್ಟ ಜಾತಿ 6 ಲಕ್ಷ ಮತ್ತು ಹಿಂದುಳಿದ ವರ್ಗ 13 ಲಕ್ಷವಿದ್ದರೆ, ಮೇಲ್ಜಾತಿಯದು 30 ಲಕ್ಷವಿದ್ದು ಇದು ಪರಿಶಿಷ್ಟ ಜಾತಿಗಿಂತ ಐದು ಪಟ್ಟು ಹೆಚ್ಚಾಗಿದೆ.

ನಿರುದ್ಯೋಗದ ಪ್ರಮಾಣ ಪರಿಶಿಷ್ಟರಲ್ಲಿ 7.3 ಮತ್ತು ಹಿಂದುಳಿದ ವರ್ಗದಲ್ಲಿ 5.2 ಇದ್ದರೆ, ಮೇಲ್ಜಾತಿಯಲ್ಲಿ ಇದು 4.3 ಯಷ್ಟಿದೆ. ಮೀಸಲಾತಿ ಅನುಕೂಲದ ಹೊರತಾಗಿಯೂ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿರುವುದನ್ನು ನಾವು ಗಮನಿಸಬೇಕು.
ಇದೇ ಟೇಬಲಿನಲ್ಲಿ MPCE  (Monthly per capita consumption expenditure) ಎನ್ನುವ ಅಂಶ ಗಮನಿಸಿ. ಇದು ಒಬ್ಬ ವ್ಯಕ್ತಿ ತಿಂಗಳಿಗೆ ತನ್ನ ಕನಿಷ್ಟ ಅವಶ್ಯಕತೆಗಳಿಗೆ ಎಷ್ಟು ಖರ್ಚು ಮಾಡುತ್ತಿದ್ದಾನೆ ಎಂದು ತಿಳಿಸುವ ಅಂಶ. ಇದು ಬದುಕುವ ಮಟ್ಟವನ್ನು ಸೂಚಿಸುತ್ತದೆ. ಇಲ್ಲಿ ಮೇಲ್ಜಾತಿಯವನ MPCE 2413 ರೂಗಳಿದ್ದರೆ, ಹಿಂದುಳಿದ ವರ್ಗದವನದು 1531 ಮತ್ತು ಪರಿಶಿಷ್ಟ ಜಾತಿಯವನದು ಕೇವಲ 1294 ರೂಪಾಯಿಗಳಿವೆ.

ಹಾಗೆಯೇ, ಕೆಳಗಿನ 2ನೇ ಟೇಬಲ್ ಗಮನಿಸಿ. ಇಲ್ಲಿ ಸ್ಪಷ್ಟವಾಗಿ ವಿವಿಧ ಜಾತಿಗಳ ನಡುವಿನ ಆರ್ಥಿಕ ಅಸಮಾನತೆ ಇನ್ನೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ದೇಶದ ಒಟ್ಟು ಆಸ್ತಿಯಲ್ಲಿ ಶೇಕಡಾ 45 ರಷ್ಟು ಮೇಲ್ಜಾತಿಯವರ ಒಡೆತನದಲ್ಲಿದ್ದರೆ, ಶೇಕಡಾ 31 ರಷ್ಟು ಹಿಂದುಳಿದ ಜಾತಿಗಳ ಒಡೆತನದಲ್ಲಿದೆ. ಆದರೆ, ಪರಿಶಿಷ್ಟ ಜಾತಿಯವರ ಒಡೆತನದಲ್ಲಿರುವುದು ಕೆರವಲ ಶೇಕಡಾ 7 ರಷ್ಟು ಮಾತ್ರ.

ಮೇಲಿನೆಲ್ಲ ಅಂಕಿಅಂಶಗಳು ಅತ್ಯಂತ ಸ್ಪಷ್ಟವಾಗಿ ಹೇಳುತ್ತಿವೆ, ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ, ಮೀಸಲಾತಿಯ ಬೆಂಬಲವಿದ್ದರೂ ಕೂಡ ಇವತ್ತಿಗೂ ಎಲ್ಲ ಸ್ತರಗಳಲ್ಲಿಯೂ ಪರಿಶಿಷ್ಟ ಜಾತಿಯ ಜನ ಮೇಲ್ಜಾತಿಯವರಿಂತ ಬಹಳ ಹಿಂದುಳಿದಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ನ್ಯಾಯಬದ್ಧವಾಗಿ ದಕ್ಕಬೇಕಾದ್ದು ಇನ್ನೂ ದಕ್ಕಿಯೇ ಇಲ್ಲ. ಇದನ್ನು ನಾವೆಲ್ಲರೂ ಗಂಭೀರವಾಗಿ ಅವಲೋಕಿಸಬೇಕಿದೆ. ನಾವು ಒಂದು ಸ್ವತಂತ್ರ ಮತ್ತು ವೇಗವಾಗಿ ಮುಂದುವರೆಯುತ್ತಿರುವ ದೇಶವಾಗಿ ಜಾತಿಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಸೋತಿದ್ದೇವೆ. ಜಾತಿಗಳ ನಡುವಿನ ಸಾಮಾಜಿಕ ಅಸಮಾನತೆಯಿರಲಿ, ಕನಿಷ್ಟ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸಲು ಕೂಡ ನಮ್ಮ ಕೈಲಾಗಿಲ್ಲ.

ಇದನ್ನೂ ಓದಿ: ಮೀಸಲಾತಿಯ ಮೂಲ, ಋಗ್ವೇದ ಕಾಲ: ವಿಕಾಸ್ ಆರ್. ಮೌರ್ಯ

ಮೇಲ್ಜಾತಿಗೂ ಮತ್ತು ಪರಿಶಿಷ್ಟ ಜಾತಿಗೂ ನಡುವಿನ ಈ ಅಗಾಧ ಅಂತರಕ್ಕೆ ಮೇಲ್ಜಾತಿಯವರು ಅತೀವ ಬುದ್ಧಿವಂತರು ಎಂಬ ಕಾರಣವನ್ನು ಹೇಳುವ ಮೇಲ್ಜಾತಿಯವರೂ ಇದ್ದಾರೆ. ಮಾನವಶಾಸ್ತ್ರ ಸಂಬಂಧಿ ಸಂಶೋಧನೆಗಳು ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿವೆ. ಮೇಲ್ಜಾತಿಯವರ ಈ ಮುಂದುವರಿಕೆಗೆ ಬಹುಮುಖ್ಯ ಕಾರಣ ಅವರಿಗಿರುವ ಸಾಮಾಜಿಕ ಅನುಕೂಲತೆ ಅಷ್ಟು. ಅದು ಮೊದಲೂ ಇತ್ತು , ಈಗಲೂ ಇದೆ.

ಅದೇ ಒಬ್ಬ ಪರಿಶಿಷ್ಟ ಜಾತಿಯ ಮನುಷ್ಯನಿಗೆ ತನಗಿರುವ ಸಾಮಥ್ರ್ಯ ಬಳಸಿಕೊಳ್ಳಲು ಆಗದಂಥ ಸಾಮಾಜಿಕ ಅನಾನುಕೂಲತೆ ಇದೆ. ಇದಕ್ಕೆ ಒಂದು ಅತೀ ಸರಳ ಉದಾಹರಣೆಯಾಗಿ ಒಬ್ಬ ಮೇಲ್ಜಾತಿಯವ ಒಂದು ಹೋಟೆಲು ನಡೆಸಿದರೆ ಆಗುವ ಬುಸಿನೆಸ್ಸಿಗೂ ಅದೇ ಒಬ್ಬ ಪರಿಶಿಷ್ಟ ಜಾತಿಯವನ ಹೋಟೆಲಿಗೆ ಆಗುವ ಬುಸಿನೆಸ್ಸಿಗೂ ಹೋಲಿಸಿ ನೋಡಿ. ಈತ ಪರಿಶಿಷ್ಟ ಜಾತಿಯವ ಎಂಬ ಒಂದೇ ಕಾರಣಕ್ಕೆ ಮೇಲ್ಜಾತಿ ಮತ್ತು ಮಧ್ಯಮ ಜಾತಿಯ ಬಹುತೇಕರು ಆ ಹೋಟೆಲಿಗೇ ಹೋಗದ ವಿಷಯ ನಮಗೆಲ್ಲಾ ತಿಳಿದಿದೆ.
ಇದೇ ಸಾಮಾಜಿಕ ಅನಾನುಕೂಲತೆಯ ಕಾರಣಕ್ಕೆ ವಿವಿಧ ವಲಯಗಳಲ್ಲಿ ಮೇಲ್ಜಾತಿಯವರಿಗೆ ಸಿಕ್ಕಷ್ಟು ಸುಲಭವಾಗಿ ಉದ್ಯೋಗಗಳೂ ಕೂಡ ಪರಿಶಿಷ್ಟ ಜಾತಿಯವರಿಗೆ ಇಂದಿಗೂ ಸಿಗುತ್ತಿಲ್ಲ.

ಕಡೆಗೆ, ಇಷ್ಟೊಂದು ಜಾತಿಯಾಧಾರಿತ ಅಸಮಾನತೆ ಇರುವ ಯಾವುದೇ ದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದಲು ಕೂಡ ಸಾಧ್ಯವಿಲ್ಲ.

ಹಾಗಾದರೆ, ಈ ಅಸಮಾನತೆಯ ನಿವಾರಣೆಗೆ ದಾರಿಗಳೇನು?

ಮೊದಲನೆಯದಾಗಿ, ಹಿಂದುಳಿದವರ ಮತ್ತು ಪರಿಶಿಷ್ಟ ಜಾತಿಯ ಆರ್ಥಿಕ ಅಭಿವೃದ್ಧಿಗೆ ನಿಜಕ್ಕೂ ಸಹಾಯ ಮಾಡುವಂಥ ಮೀಸಲಾತಿಯನ್ನು ಖಾಸಗಿಯೂ ಸೇರಿ ಎಲ್ಲ ಉದ್ಯೋಗಗಳಿಗೂ ಜಾರಿಮಾಡುವುದು.

ಪರಿಶಿಷ್ಟ ಜಾತಿಯ ಜನರು ಸಾಮಾಜಿಕ ಅಸಮಾನತೆಯನ್ನು ಮೀರಿ ಉದ್ಯಮದಲ್ಲಿ ಮುಂದೆ ಬರಲು ಅನುಕೂಲವಾಗುವಂಥ ಪ್ರೋತ್ಸಾಹಕರ ಯೋಜನೆಗಳನ್ನು ಸರ್ಕಾರ ರೂಪಿಸುವುಂತೆ ಮಾಡುವುದು ಮತ್ತು ಈಗಾಗಲೇ ಇರುವ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುವುದು.

ಹಾಗೂ, ಅಂಬೇಡ್ಕರ್ ಕನಸಿನಂತೆ ಈ ಸಮಾಜದ ಕಟ್ಟಕಡೆಯವರಿಗೆ ಹೆಚ್ಚು ಹೆಚ್ಚು ರಾಜಕೀಯ ಅಧಿಕಾರ ಸಿಗುವ ಹೊಸಾ ದಾರಿಗಳನ್ನು ಹುಡುಕುವುದು. (ಅಂಬೇಡ್ಕರರ ಕ್ರಾಂತಿಕಾರಿ ಕನಸಾದ ಭೂಮಿಯ ರಾಷ್ಟ್ರೀಕರಣ ಮತ್ತು ಮರುಹಂಚಿಕೆ ಈ ಅಸಮಾನತೆಯನ್ನು ನಿಜಕ್ಕೂ ದೊಡ್ಡಮಟ್ಟಿಗೆ ಹೋಗಲಾಡಿಸಬಲ್ಲುದು, ಆದರೆ ಅದು ಸಾಧ್ಯವೆ?)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...