ತಮ್ಮ ರೇಖಾ ಚಿತ್ರಗಳ ಮೂಲಕ ಪರಿಚಿತರಾಗಿರುವ ಪುಂಡಲೀಕ ಕಲ್ಲಿಗನೂರು ಅವರು ಕರ್ನಾಟಕ ಶಿಲ್ಪಕಲಾ ವೈಭವವನ್ನು ವಿಶಿಷ್ಟವಾಗಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಬೇಲೂರು- ಹಳೇಬೀಡು, ಗದಗ ಜಿಲ್ಲೆಯ ದೇಗುಲಗಳ ಶಿಲ್ಪಕಲೆಯನ್ನು ಟೇಬಲ್ ಟಾಪ್ ಪುಸ್ತಕಗಳ ರೂಪದಲ್ಲಿ ಹೊರ ತಂದಿರುವ ಅವರು ಈಗ ಬಾದಾಮಿ ಚಾಲುಕ್ಯರ ಶಿಲ್ಪಕಲಾ ಶ್ರೀಮಂತಿಕೆಯನ್ನು ಕುರಿತು ‘ಚಾಲುಕ್ಯರ ಶಿಲ್ಪಕಲೆ’ ಎಂಬ ನೂತನ ಪುಸ್ತಕ ಬರೆದಿದ್ದಾರೆ. ಡಿಸೆಂಬರ್ 11 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಈ ಪುಸ್ತಕ ಬಿಡುಗಡೆಯಾಗಲಿದೆ.
ಕರ್ನಾಟಕದ ಪ್ರಮುಖ ರಾಜವಂಶಗಳಲ್ಲಿ ಒಂದಾದ ಚಾಲುಕ್ಯ, ಬಾದಾಮಿ, ಐಹೊಳೆ, ಪಟ್ಟದ ಕಲ್ಲು ಹಾಗೂ ಮಹಾಕೂಟವನ್ನು ಆಳಿತ್ತು. ಈ ಅವಧಿಯಲ್ಲಿ ನಿರ್ಮಾಣವಾದ ದೇಗುಲಗಳು ಇಂದಿಗೂ ಸೃಷ್ಟಿ ವಿಸ್ಮಯದ ಸಂಕೇತಗಳು. ಪ್ರಪಂಚದ ಪಾರಂಪರಿಕ ತಾಣಗಳೆಂದು ಗುರುತಿಸಿಕೊಂಡಿರುವ ಈ ಚಾಲುಕ್ಯು ಶಿಲೆಯ ವೈಭವವನ್ನು ಚಿತ್ರ ಹಾಗೂ ಪಠ್ಯಗಳ ಮೂಲಕ ವಿಶಿಷ್ಟವಾಗಿ ಕಟ್ಟಿಕೊಡುವ ಪ್ರಯತ್ನವನ್ನು ‘ ಚಾಲುಕ್ಯರ ಶಿಲ್ಪಕಲೆ’ ಕೃತಿಯಲ್ಲಿ ಮಾಡಲಾಗಿದೆ.
ಸುಮಾರು 500 ಪುಟಗಳ ಬೃಹತ್ ಗಾತ್ರದ, ಬಹುವರ್ಣದ ಈ ಕೃತಿಯಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಚಿತ್ರಗಳಿವೆ. ಈ ಚಿತ್ರಗಳು ಚಾಲುಕ್ಯರ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುತ್ತವೆ. ಪುಸ್ತಕದ ಕಲಾತ್ಮಕ ಪುಟ ವಿನ್ಯಾಸ ಓದುಗರನ್ನು ಸೆಳೆಯುತ್ತವೆ.
ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷರಾದ ದೇವರ ಕೊಂಡಾರೆಡ್ಡಿಯವರು ಈ ಕೃತಿಗೆ ಮುನ್ನಡಿ ಬರೆಯುತ್ತಾ, ” ಬಾದಾಮಿ ಚಾಲುಕ್ಯರ ಶಿಲ್ಪಗಳು ಮಂಗಳೇಶನಿಂದ ಹಿಡಿದು ಇಮ್ಮಡಿ ಕೀರ್ತಿವರ್ಮನವರೆಗೆ ರಚಿತವಾಗಿವೆ. ಪುಂಡಲೀಕ ಕಲ್ಲಿಗರನೂರು ಅವರೂ ಸಹ ಶಿಲ್ಪಗಳ ವಿಮರ್ಶೆಗಿಂತ ಅವುಗಳ ಅಂದ, ಕಥಾಶಿಲ್ಪ, ಸಂಯೋಜನೆ ಇಂತಹ ವಿವರಗಳ ಕಡೆಗೆ ಗಮನ ಹರಿಸಿದ್ದಾರೆ. ಹೀಗಾಗಿ ಇವರ ಚಾಲುಕ್ಯ ಶಿಲ್ಪಕಲಾ ನೋಟ ಮಾಟ ಸಂಪುಟವು ಚಾಲುಕ್ಯು ಶಿಲ್ಪಕಲೆಯ ಸೌಂದರ್ಯ ಹಾಗೂ ಗಾಂಭೀರ್ಯಗಳನ್ನು ಪರಿಚಯಿಸುತ್ತದೆ” ಎಂದಿದ್ದಾರೆ.
ದೃಶ್ಯ ಕಲಾ ಇತಿಹಾಸಕಾರ, ಕೆ ವಿ ಸುಬ್ರಮಣ್ಯ ಅವರು ತಮ್ಮ ಮುನ್ನುಡಿಯಲ್ಲಿ, ” ಈ ಅಪೂರ್ವ ದೇವಾಲಯ ವಾಸ್ತುಶಿಲ್ಪ ನೆಲೆಗಳಲ್ಲಿ ನಡೆದಾಡಿ, ದೇವಾಲಯ ದೃಶ್ಯಕಲಾ ಇತಿಹಾಸದ ಅಧ್ಯಯನ ಮಾಡಿರುವ ಪುಂಡಲೀಕ ಕಲ್ಲಿಗನೂರ ಅವರ ಸಾಹಸಮಯ ಪ್ರಯತ್ನಗಳು ಹಲವು. ಈ ಹಿನ್ನೆಲೆಯಲ್ಲಿ ನೋಡುಗ/ಓದುಗರು ಇನ್ನೂ ಹಲವು ರೀತಿಗಳಲ್ಲಿ ಚಾಲುಕ್ಯರ ಶಿಲ್ಪಕಲೆಯನ್ನು ನೋಡಬಹುದಾದ ದಾರಿಗಳನ್ನು ಅನ್ವೇಷಿಸಿಕೊಳ್ಳಬಹುದೆನಿಸುತ್ತದೆ. ಪುಂಡಲೀಕರ ವಿಶಿಷ್ಟ ಕ್ಯಾಮರಾ ಕಣ್ಣಿನ, ಸುಂದರ ದೃಶ್ಯ ಮತ್ತು ಅಕ್ಷರ ಮೂಲದ ಈ ಪುಸ್ತಕದಲ್ಲಿ , ಚಾಲುಕ್ಯರ ನವರಸ ಭಾವಗಳ ದೇವಾಲಯವಾಸ್ತು ಮತ್ತು ಶಿಲ್ಪಗ ನೂರಾರು ಚಿತ್ರಗಳು, 125ಕ್ಕೂ ಹೆಚ್ಚಿನ ಶೀರ್ಷಿಕೆಗಳ ಅವಕಾಶದ ಅಡಿ ಅನಾವರಣಗೊಂಡಿದೆ” ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಅಪರ ಅಬಕಾರಿ ಆಯುಕ್ತರಾದ ಡಾ ವೈ ಮಂಜುನಾಥ್, ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ ಮಲ್ಲೇಪುರಂ ಜಿ ವೆಂಕಟೇಶ, ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷರಾದ ದೇವರ ಕೊಂಡಾರೆಡ್ಡಿ, ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕರ್ನಾಟಕ ಚಿತ್ರಕಾವ್ಯ ಅಭಿಯಾನದ ನಿರ್ದೇಶಕ ಚಂದ್ರೇಗೌಡ ಕುಲಕರ್ಣಿ, ಕಲಾ ವಿಮರ್ಶಕರಾದ ಎಚ್ ಎ ಅನಿಲಕುಮಾರ್, ಪತ್ರಕರ್ತ ಗೌರೀಶ್ ಅಕ್ಕಿ, ಲೇಖಕಿ ನಳಿನಿ ಡಿ, ನಟ, ಕೆ ಎಸ್ ಪರಮೇಶ್ವರ, ಹಿರಿಯ ಕಲಾವಿದರ ಪ ಸ ಕುಮಾರ್ ಉಪಸ್ಥಿತರಿರುವರು.
ಇದನ್ನೂ ಓದಿ: ಕುಟುಂಬದೊಳಗಿನ ರಚನೆಗೂ, ಸಮಾಜದ ಒಡಕುಗಳಿಗೂ ಇರುವ ನಿಕಟ ಸಂಬಂಧ ಶೋಧಿಸುವ ಮೂನಿಯಾ ಅಕ್ಲ್‌ಳ ’ಕಾಸ್ಟ ಬ್ರಾವ, ಲೆಬನಾನ್


