ಮಹಾರಾಷ್ಟ್ರದ ಪುಣೆಯ ಕೋಥ್ರುಡ್ ಪೊಲೀಸ್ ಠಾಣೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮೂವರು ಯುವತಿಯರ ಮೇಲೆ ದೌರ್ಜನ್ಯ ನಡೆದಿರುವ ಆರೋಪ ಕೇಳಿಬಂದಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ತಮ್ಮನ್ನು ಪೊಲೀಸ್ ಠಾಣೆಯ ಮೇಲಿನ ಮಹಡಿಯಲ್ಲಿ ಕೂಡಿಹಾಕಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಯುವತಿಯರು ದೂರಿದ್ದಾರೆ. ಈ ಘಟನೆಯ ಕುರಿತು ಯುವತಿಯರು ಪುಣೆ ಪೊಲೀಸರಿಗೆ ದೂರು ನೀಡಿದ್ದು, ಸಬ್-ಇನ್ಸ್‌ಪೆಕ್ಟರ್ (PSI) ಕಾಮಟೆ, ಮಹಿಳಾ ಕಾನ್‌ಸ್ಟೆಬಲ್ ಶಿಂಧೆ, ಸೈಬರ್ ಪೊಲೀಸ್ ಸಾನಪ್ ಮತ್ತು ಇನ್ನೊಬ್ಬ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ ಎಂದು https://marathi.abplive.com/ ವರದಿ ಮಾಡಿದೆ.
ಘಟನೆಯ ಹಿನ್ನೆಲೆ
ಈ ಘಟನೆಗೆ ಸಂಬಂಧಿಸಿದಂತೆ ವರದಿಯಾಗಿರುವಂತೆ, ಆಗಸ್ಟ್ 1ರಂದು ಸಂಭಾಜಿನಗರದ ವಿವಾಹಿತೆಯೊಬ್ಬರು ತಮ್ಮ ಅತ್ತೆಯ ಮನೆಯವರ ಕಿರುಕುಳದಿಂದ ತಪ್ಪಿಸಿಕೊಳ್ಳಲು ಪುಣೆಯಲ್ಲಿದ್ದ ಈ ಮೂವರು ಯುವತಿಯರ ಫ್ಲಾಟ್‌ಗೆ ಬಂದಿದ್ದರು. ಇದರ ಬಗ್ಗೆ ಸಂಭಾಜಿನಗರ ಪೊಲೀಸರಿಗೆ ನಾಪತ್ತೆ ದೂರು ದಾಖಲಾಗಿತ್ತು. ಅದರ ಆಧಾರದ ಮೇಲೆ, ಸಂಭಾಜಿನಗರ ಪೊಲೀಸರು ಪುಣೆಗೆ ಬಂದು ವಿವಾಹಿತೆಯ ಮೊಬೈಲ್ ಲೊಕೇಶನ್ ಅನ್ನು ಕೋಥ್ರುಡ್ ಪ್ರದೇಶದಲ್ಲಿ ಪತ್ತೆಹಚ್ಚಿದರು. ಆದರೆ, ಪೊಲೀಸರು ಸ್ಥಳಕ್ಕೆ ತಲುಪುವ ಮೊದಲು ಆ ವಿವಾಹಿತೆ ಕೆಲಸದ ನಿಮಿತ್ತ ಹೊರಹೋಗಿದ್ದರು.
ಆರೋಪಿಗಳಾದ ಪೊಲೀಸರು, ಯಾವುದೇ ಸರ್ಚ್ ವಾರಂಟ್ ಇಲ್ಲದೆ, ಈ ಮೂವರು ಯುವತಿಯರ ಫ್ಲಾಟ್‌ಗೆ ಬಂದು ಹುಡುಕಾಟ ನಡೆಸಿದರು. ಈ ವೇಳೆ, ಅವರು ಯುವತಿಯರ ಬಟ್ಟೆಗಳನ್ನು ನೋಡಿ ಆಕ್ಷೇಪಾರ್ಹವಾಗಿ ಮಾತನಾಡಿದರು ಮತ್ತು ಅವರ ಜಾತಿ ಬಗ್ಗೆ ಪ್ರಶ್ನಿಸಿದರು ಎಂದು ಯುವತಿಯರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಯುವತಿಯರು ತಮ್ಮ ಗುರುತನ್ನು ಕೇಳಿದಾಗ, ಪೊಲೀಸರು ಅವರನ್ನು ಬೆದರಿಸಿ, ಕೋಥ್ರುಡ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
A Horrific Injustice in Pune, Maharashtra.
A young woman from Sambhajinagar (Aurangabad), abused by her in-laws, sought refuge at a friend’s house. In retaliation, her in-laws including a retired police officer used their influence to send Kothrud Police to raid the friend’s… pic.twitter.com/wjK7CbXzbN
— Shraddha (슈라다) (@HuhVsWorld) August 4, 2025
ಪೊಲೀಸ್ ಠಾಣೆಯಲ್ಲಿ ನಡೆದ ದೌರ್ಜನ್ಯ
ಪೊಲೀಸ್ ಠಾಣೆಯಲ್ಲಿ ಯುವತಿಯರನ್ನು ರಿಮಾಂಡ್ ರೂಮಿನಲ್ಲಿ ಇರಿಸಲಾಗಿತ್ತು. ಇಲ್ಲಿ, ಯುವತಿಯರ ಸ್ನೇಹಿತೆ ಎಲ್ಲಿದ್ದಾಳೆ ಎಂದು ಪ್ರಶ್ನಿಸಿ, ರಾತ್ರಿ 7:30ರವರೆಗೆ ಕೂಡಿಹಾಕಲಾಗಿದೆ. ಯುವತಿಯರು ಮಾಹಿತಿ ನೀಡಲು ನಿರಾಕರಿಸಿದಾಗ, ಪೊಲೀಸರು ಅವರನ್ನು ಥಳಿಸಿದ್ದಾರೆ. ನಂತರ ಸ್ನೇಹಿತೆಯ ವಿಳಾಸವನ್ನು ನೀಡಿದ ನಂತರ, ಪೊಲೀಸರು ತಮ್ಮನ್ನು ಜಾತಿ ನಿಂದನೆ ಮಾಡಿ ಲೈಂಗಿಕವಾಗಿ ನಿಂದಿಸಿದರು ಎಂದು ಯುವತಿಯರು ಹೇಳಿದ್ದಾರೆ.
ಮಾನಸಿಕ ಮತ್ತು ಲೈಂಗಿಕ ಕಿರುಕುಳ
ಸಂತ್ರಸ್ತ ಯುವತಿಯರು ತಮ್ಮ ದೂರಿನಲ್ಲಿ ಮಹಿಳಾ ಕಾನ್‌ಸ್ಟೆಬಲ್ ಶಿಂಧೆ ಮತ್ತು ಇತರ ಪೊಲೀಸರ ವರ್ತನೆಯನ್ನು ವಿವರಿಸಿದ್ದಾರೆ. “ನೀವು ಒಂಟಿಯಾಗಿ ವಾಸಿಸುತ್ತೀರಾ, ಎಷ್ಟು ಹುಡುಗರ ಜೊತೆ ಮಲಗಿದ್ದೀರಾ? ನಿಮ್ಮ ಕೋಣೆಗೆ ಹುಡುಗರು ಬರುತ್ತಾರಾ? ನೀವು ಲೆಸ್ಬಿಯನ್‌ರಂತೆ ಕಾಣುತ್ತೀರಿ, ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಸೇರಿದವರು ಎಂದು ಅನಿಸುತ್ತದೆ,” ಎಂದು ಲೈಂಗಿಕವಾಗಿ ನಿಂದಿಸಿದ್ದಾರೆ.
ಇದಷ್ಟೇ ಅಲ್ಲದೆ, ಪೊಲೀಸರು ಯುವತಿಯರ ವೈಯಕ್ತಿಕ ಜೀವನದ ಬಗ್ಗೆಯೂ ಪ್ರಶ್ನಿಸಿದ್ದಾರೆ. “ನಿಮ್ಮ ತಂದೆ ಇಲ್ಲ, ತಾಯಿ ಮಾತ್ರ ಇದ್ದಾರೆ. ನಿಮ್ಮನ್ನು ಅವರು ಬಿಟ್ಟು ಹೋಗಿದ್ದಾರಾ? ನೀವು ಗಳಿಸಿದ ಹಣವನ್ನು ಮನೆಗೆ ಕೊಡುತ್ತೀರಾ? ಅದಕ್ಕಾಗಿಯೇ ನೀವು ದಾರಿತಪ್ಪಿದ್ದೀರಿ,” ಎಂದು ನಿಂದಿಸಿದ್ದಾರೆ. ಕಾನ್‌ಸ್ಟೆಬಲ್ ಶಿಂಧೆ ಯುವತಿಯೊಬ್ಬಳ ಮೊಬೈಲ್‌ನಲ್ಲಿರುವ ಫೋಟೊಗಳನ್ನು ನೋಡಿ, “ನೀವು ತುಂಬ ಮಜಾ ಮಾಡುತ್ತೀರಿ” ಎಂದು ಹೇಳಿದ್ದಾರೆ. ಪದೇಪದೇ ಯುವತಿಯರ ಜಾತಿಯ ಬಗ್ಗೆ ಕೇಳಿ, ಅವರು ತಮ್ಮ ಜಾತಿ ಹೇಳಿದಾಗ ಪೊಲೀಸರು ನಕ್ಕಿದ್ದಾರೆ. ಯುವತಿಯರ ಖಾಸಗಿ ಚಾಟ್‌ಗಳು ಮತ್ತು ವಾಯ್ಸ್ ನೋಟ್‌ಗಳನ್ನು ಪರಿಶೀಲಿಸಿ, “ಈ ಇಬ್ಬರು ಸ್ನೇಹಿತರಲ್ಲಿ ನಿಮ್ಮ ಬಾಯ್‌ಫ್ರೆಂಡ್ ಯಾರು?” ಎಂದು ಕೇಳಿದ್ದಾರೆ.

ದೈಹಿಕ ಹಿಂಸೆ ಮತ್ತು ದೂರು ದಾಖಲಿಸಲು ನಿರಾಕರಣೆ
ಯುವತಿಯರು ದೈಹಿಕ ಹಿಂಸೆಯ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ಪೊಲೀಸ್ ಠಾಣೆಯಲ್ಲಿದ್ದ ಪುರುಷ ಪೊಲೀಸರು ನಮ್ಮ ದೇಹವನ್ನು ಸ್ಕ್ಯಾನ್ ಮಾಡುವಂತೆ ನೋಡುತ್ತಿದ್ದರು. ಮಹಿಳಾ ಕಾನ್‌ಸ್ಟೆಬಲ್‌ಗಳು ನಮ್ಮನ್ನು ಗಮನಿಸುತ್ತಲೇ ಇದ್ದರು. ಪ್ರಶ್ನೆ ಕೇಳುವಾಗ, ಪಿಎಸ್‌ಐ ಕಾಮಟೆ ನನ್ನ ಹತ್ತಿರ ಬಂದು ನನ್ನ ದೇಹವನ್ನು ಕೆಟ್ಟದಾಗಿ ಮತ್ತು ವಿಕೃತವಾಗಿ ಸ್ಪರ್ಶಿಸಿದರು. ಕಾನ್‌ಸ್ಟೆಬಲ್ ಶಿಂಧೆ ನನ್ನ ಕೆನ್ನೆ, ಬೆನ್ನಿಗೆ ಗುದ್ದಿ ಹೊಡೆದರು. ನನ್ನ ಸೊಂಟ ಮತ್ತು ಕಾಲಿಗೆ ಬಲವಾಗಿ ಒದ್ದರು,” ಎಂದು ಯುವತಿಯರು ವಿವರಿಸಿದ್ದಾರೆ.
ಘಟನೆಯ ನಂತರ, ಯುವತಿಯರು ಅಟ್ರಾಸಿಟಿ (ಪ.ಜಾತಿ, ಪ.ಪಂ. ಮೇಲಿನ ದೌರ್ಜನ್ಯ ತಡೆ) ಕಾಯಿದೆಯಡಿಯಲ್ಲಿ ದೂರು ದಾಖಲಿಸಲು ಮುಂದಾದಾಗ, ಪೊಲೀಸರು ಅದನ್ನು ನಿರಾಕರಿಸಿದ್ದಾರೆ. ರಾಜಕೀಯ ನಾಯಕರಾದ ರೋಹಿತ್ ಪವಾರ್ ಮತ್ತು ಸುಜಾತ್ ಅಂಬೇಡ್ಕರ್ ಅವರು ರಾತ್ರಿ 3:30ರವರೆಗೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಉಳಿದು, ದೂರು ದಾಖಲಿಸುವಂತೆ ಒತ್ತಾಯಿಸಿದ ನಂತರವಷ್ಟೇ ಪ್ರಕರಣ ದಾಖಲಾಗಿದೆ. ಆದರೆ, ಪೊಲೀಸರು ಘಟನೆ ನಡೆದಿದ್ದು ಕೋಣೆಯೊಳಗಿರುವ ಕಾರಣಕ್ಕೆ ಸಾಕ್ಷ್ಯಾಧಾರಗಳ ಕೊರತೆಯಿಂದ ಎಫ್‌ಐಆರ್ ದಾಖಲಿಸಲಾಗದು ಎಂದು ನಾಲ್ಕು ಪುಟಗಳ ದಾಖಲೆಯನ್ನು ನೀಡಿ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ.
ರಾಜಕೀಯ ನಾಯಕರ ಪ್ರತಿಕ್ರಿಯೆ
ಈ ಘಟನೆ ಪುಣೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶಾಸಕ ರೋಹಿತ್ ಪವಾರ್ ಮಾಧ್ಯಮಗಳೊಂದಿಗೆ ಮಾತನಾಡಿ, “ಯಾವುದೇ ಅಪರಾಧ ಅಥವಾ ಕಾರಣವಿಲ್ಲದೆ ದಲಿತ ಯುವತಿಯರೊಂದಿಗೆ ಹೀಗೆ ಅನುಚಿತವಾಗಿ ಮಾತನಾಡುವುದು ಸರಿಯಲ್ಲ. ವಾರಂಟ್ ಇಲ್ಲದೆ ಹುಡುಕಾಟ ನಡೆಸುವುದು ತಪ್ಪು. ಯುವತಿಯರ ಬಟ್ಟೆಗಳನ್ನು ಮುಟ್ಟುವುದು, ಅವರ ವರ್ತನೆಯ ಬಗ್ಗೆ ಪ್ರತಿಕ್ರಿಯಿಸುವುದು ಮತ್ತು ಅವರ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸುವುದು ಸರಿಯಲ್ಲ. ಇದು ಸಂವಿಧಾನದ ಉಲ್ಲಂಘನೆ. ಪುಣೆ ಪೊಲೀಸರು ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಸಂಸದೆ ಸುಪ್ರಿಯಾ ಸುಳೆ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ, “ಒಂದು ವೇಳೆ ಇದು ನಿಜವಾಗಿದ್ದರೆ, ಘಟನೆ ತುಂಬಾ ಗಂಭೀರವಾಗಿದೆ. ಗೃಹ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಿವರವಾದ ತನಿಖೆಯ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ವಂಚಿತ್ ಬಹುಜನ ಅಘಾಡಿಯ ರಾಷ್ಟ್ರೀಯ ಅಧ್ಯಕ್ಷ, ವಕೀಲ ಪ್ರಕಾಶ್ ಅಂಬೇಡ್ಕರ್ ಮಾತನಾಡಿ, “ಗಂಭೀರವಾದ ಅಪರಾಧದಲ್ಲಿ ಎಫ್‌ಐಆರ್ ದಾಖಲಿಸುವಲ್ಲಿ ಪುಣೆ ಪೊಲೀಸರು ವಿಳಂಬ ಮಾಡಿದ್ದಾರೆ. ಕಾನೂನು ಕಾನೂನೇ, ಸುಪ್ರೀಂ ಕೋರ್ಟ್ ಹೇಳಿರುವಂತೆ ಒಂದು ವೇಳೆ ಅಪರಾಧವು ಗಂಭೀರವಾಗಿದ್ದರೆ ಪೊಲೀಸರು ಎಫ್‌ಐಆರ್ ದಾಖಲಿಸಲೇಬೇಕು ಎಂದು ನಾನು ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ. ಎಫ್‌ಐಆರ್ ಅನ್ನು ಕೂಡಲೇ ದಾಖಲಿಸದಿದ್ದರೆ, ನಾವು ದೊಡ್ಡ ಸಂಖ್ಯೆಯಲ್ಲಿ ಸೇರಿ ಕಮಿಷನರೇಟ್ ಮುಂದೆ ಬಲವಾದ ಪ್ರತಿಭಟನೆಯನ್ನು ಪ್ರಾರಂಭಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯ ಕುರಿತು ಶ್ವೇತಾ ಎಸ್. ಎಂಬುವವರು ಫೇಸ್‌ಬುಕ್‌ನಲ್ಲಿ ವೀಡಿಯೊ ಪೋಸ್ಟ್ ಮಾಡಿ, ಪೊಲೀಸರ ದೌರ್ಜನ್ಯವನ್ನು ವಿವರಿಸಿದ್ದಾರೆ.
ಈ ಎಲ್ಲ ಆರೋಪಗಳ ಹಿನ್ನೆಲೆಯಲ್ಲಿ, ಘಟನೆಯ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕ ಒತ್ತಡ ಹೆಚ್ಚಿದೆ.
ಹರಿಯಾಣ: ದಲಿತ ವಕೀಲನ ಒಂದೇ ದಿನ ಎರಡು ಬಾರಿ ಬಂಧಿಸಿ, ತೀವ್ರ ಚಿತ್ರಹಿಂಸೆ ಖಂಡಿಸಿ ನಾಗರಿಕ ಸಂಘಟನೆಗಳಿಂದ ಪ್ರತಿಭಟನೆ


