ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಶಾಂತಿ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ನಿನ್ನೆ (ಜು.26) ರಾತ್ರಿ ಬಂಧನಕ್ಕೊಳಗಾದ ರೌಡಿ ಶೀಟರ್ ಪುನೀತ್ ಕೆರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸ್ವಸ್ಥಗೊಂಡಿದ್ದಾನೆ ಎನ್ನಲಾಗಿದ್ದು, ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುರಿ ಮಾಂಸದ ಜೊತೆ ನಾಯಿ ಮಾಂಸವನ್ನು ರಾಜಸ್ಥಾನದಿಂದ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪುನೀತ್ ಕೆರೆಹಳ್ಳಿ ಮತ್ತು ತಂಡ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ಪ್ರತಿಭಟಿಸಿದ್ದರು. ಈ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಬಂಧಿಸಿದ್ದರು. ಆತನ ವಿರುದ್ದ ಬಿಎನ್‌ಎಸ್‌ನ ಸೆಕ್ಷನ್ 132 (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ) ಮತ್ತು ಸೆಕ್ಷನ್ 351 (2) (ಶಾಂತಿಭಂಗ) ಅಡಿ ಪ್ರಕರಣ ದಾಖಲಿಸಲಾಗಿದೆ.
ಕಾಟನ್ಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ರಾತ್ರಿ 12 ಗಂಟೆ ವೇಳೆಗೆ ಬಂಧಿಸಿದ್ದರು. ಠಾಣೆಯಲ್ಲಿ ಮಲಗಿದ್ದ ಪುನೀತ್, ಮುಂಜಾನೆ 4:45ರ ವೇಳೆಗೆ ಅಸ್ವಸ್ಥಗೊಂಡಿದ್ದಾನೆ ಎನ್ನಲಾಗಿದ್ದು, ಆತನನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಊಟ ಮಾಡದ ಕಾರಣ ಆತ ಅಸ್ವಸ್ಥನಾಗಿದ್ದಾನೆ ಎಂದು ವರದಿಗಳು ಹೇಳಿವೆ.
ಅಬ್ದುಲ್ ರಝಾಕ್ ಎಂಬವರು ರಾಜಸ್ಥಾನದಿಂದ ಕುರಿ ಮಾಂಸ ತರಿಸಿ ಬೆಂಗಳೂರಿನ ಹೋಟೆಲ್‌ಗಳಿಗೆ ಸರಬರಾಜು ಮಾಡುತ್ತಿದ್ದರು. ನಿನ್ನೆ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಮಾಂಸ ತಲುಪಿದಾಗ, ಅದರಲ್ಲಿ ನಾಯಿಮಾಂಸ ಬೆರೆಸಲಾಗಿದೆ ಎಂದು ಆರೋಪಿಸಿ ಪುನೀತ್ ಮತ್ತು ಆತನ ತಂಡ ಪ್ರತಿಭಟನೆ ನಡೆಸಿತ್ತು. ಈ ವೇಳೆ ರಝಾಕ್ ಮತ್ತು ಪುನೀತ್ ತಂಡದ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇದೇ ವೇಳೆ ಬಿಬಿಎಂಪಿ ಆಹಾರ ಸುರಕ್ಷತೆಯ ಅಧಿಕಾರಿಗಳು ಮಾಂಸದ ಮಾದರಿ ತೆಗೆದುಕೊಂಡು ಹೋಗಿದ್ದು, ಅದರಲ್ಲಿ ನಾಯಿ ಮಾಂಸ ಇದೆಯಾ? ಎಂದು ಪರಿಶೀಲಿಸಿ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬಿಜೆಪಿ-ಜೆಡಿಎಸ್‌ನಿಂದ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನ: ಸಿಎಂ ಸಿದ್ದರಾಮಯ್ಯ


