ಲೂದಿಯಾನ ಸಿಟಿ ಸೆಂಟರ್ ಹೆಸರಿನ ಬಹುಕೋಟಿ ಹಗರಣದಲ್ಲಿ ಭಾಗಿಯಾಗಿದ್ದರನ್ನಲಾದ ಅಮರಿಂದರ್ ಸಿಂಗ್, ಮಗ ರಣಿಂದರ್ ಸಿಂಗ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಇಲ್ಲಿನ ನ್ಯಾಯಾಲಯ ಆರೋಪಮುಕ್ತಗೊಳಿಸಿ ತೀರ್ಪು ನೀಡಿದೆ.
ಸೆಷನ್ ನ್ಯಾಯಾಧೀಶ್ ಗುರ್ ಬೀರ್ ಸಿಂಗ್, ಆರೋಪಿಗಳು ಯಾವುದೇ ಕ್ರಿಮಿನಲ್ ಅಪರಾದ ಮಾಡಿರುವ ಕುರಿತು ಯಾವುದೇ ಸಾಕ್ಷ್ಯಗಳು ಮತ್ತು ದಾಖಲೆಗಳು ಇಲ್ಲದ ಕಾರಣ ಪ್ರಕರಣವನ್ನು ಖುಲಾಸೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ವಿಚಕ್ಷಣಾ ದಳ ನ್ಯಾಯಾಲಯಕ್ಕೆ ಸಲ್ಲಿಸಿದ ಮುಕ್ತಾಯದ ವರದಿಯನ್ನು ಒಪ್ಪಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ 31 ಆರೋಪಿಗಳನ್ನು ಆರೋಪಮುಕ್ತಗೊಳಿಸಿದ್ದೇನೆ ಎಂದು ತಿಳಿಸಿದರು.
ಆರೋಪಿಗಳು ವಂಚನೆ, ಫೋರ್ಜರಿ ಮಾಡಿರುವ ಬಗ್ಗೆ ದಾಖಲೆಗಳು ಇಲ್ಲ. ಸಾಕ್ಷಗಳು ಕೂಡ ಇಲ್ಲ. ಹಾಗಾಗಿ ಮುಕ್ತಾಯ ವರದಿಯನ್ನು ಒಪ್ಪಿಕೊಂಡಿದ್ದು ಎಲ್ಲರನ್ನು ಆರೋಪದಿಂದ ಖುಲಾಸೆಗೊಳಿಸಿದ್ದೇನೆ ಎಂದು ಹೇಳಿದರು.
2005-6ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ದ ಲೂದಿಯಾನ ಸಿಟಿ ಸೆಂಟರ್ ಹಗರಣದಲ್ಲಿ ಸಿಲುಕಿದ್ದಾರೆ ಎಂದು ಆರೋಪಿಸಲಾಗಿತ್ತು. ಲೂದಿಯಾನದ ಪಕೋವಾರ್ ರಸ್ತೆಯಲ್ಲಿರುವ 25 ಎಕರೆ ಪ್ರದೇಶದಲ್ಲಿ ಶಾಪಿಂಗ್ ಮಾಲ್, ವಸತಿ ಟವರ್ ಗಳು, ಹೆಲಿಪ್ಯಾಡ್ ಮತ್ತು ಮಲ್ಟಿಪ್ಲೆಕ್ಸ್ ನಿರ್ಮಾಣದಲ್ಲಿ 1140 ಕೋಟಿ ಹಗರಣ ನಡೆದು ಸಾಕಷ್ಟು ವಿವಾದ ಸೃಷ್ಟಿಗೆ ಕಾರಣವಾಗಿತ್ತು.
ಇದೀಗ ಸೆಷನ್ ನ್ಯಾಯಾಲಯ ಈ ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಗಳು ಮತ್ತು ಪುರಾವೆಗಳು ಇಲ್ಲವೆಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೇರಿದಂತೆ ಎಲ್ಲಾ 31 ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದೆ.
ನ್ಯಾಯಾಲಯದ ತೀರ್ಪು ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ಪ್ರಕರಣದಲ್ಲಿ ಸತ್ಯಕ್ಕೆ ಜಯ ದೊರಕಿದೆ. ನ್ಯಾಯಾಲಯದ ತೀರ್ಪನ್ನು ಸ್ವಾಗುತಿಸುತ್ತೇನೆ. ರಾಜಕೀಯ ಆರೋಪಗಳು ಸುಳ್ಳೆಂದು ಸಾಬೀತಾಗಿದೆ ಎಂದು ಹೇಳಿದರು.
ರಾಜಕೀಯ ವಿರೋಧಕ್ಕಾಗಿ ನನ್ನ ಮತ್ತು ನಮ್ಮ ಕುಟುಂಬದ ಮೇಲೆ ಹಗರಣದ ಆರೋಪ ಹೊರಿಸಲಾಯಿತು. ಈಗ ನಮಗೆ ಖುಷಿಯಾಗಿದೆ. ನಾವು ಆರೋಪ ಮುಕ್ತವಾಗಿದ್ದೇವೆ. ಸುಳ್ಳು ಆರೋಪಗಳು ನಿಲ್ಲುವುದಿಲ್ಲ ಎಂಬುದು ತೀರ್ಪಿನಿಂದ ಗೊತ್ತಾಗಿದೆ ಎಂದು ತಿಳಿಸಿದರು.


