ಇಂದಿನಿಂದ ಪಂಜಾಬ್‌ನಲ್ಲಿ ಪ್ರತಿ ಯೂನಿಟ್ ವಿದ್ಯುತ್ ಮೇಲೆ 3 ರೂ ಬೆಲೆ ಕಡಿತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಘೋಷಿಸಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಆಪ್ ಅನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರುವ ಸಿಎಂ, ಪಂಜಾಬ್ ಜನರು ವಿದ್ಯುತ್ ದರದಲ್ಲಿ ಕಡಿತ ಬಯಸುತ್ತಿದ್ದಾರೆಯೇ ಹೊರತು ಉಚಿತ ವಿದ್ಯುತ್ ಅಲ್ಲ ಎಂದು ಸಮೀಕ್ಷೆಗಳು ಹೇಳುತ್ತಿವೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರ್ಕಾರದ ವಿದ್ಯುತ್ ದರ ಕಡಿತವು ರಾಜ್ಯದ ಶೇ.95 ರಷ್ಟು ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಅಲ್ಲದೆ ರಾಜ್ಯದ ಸರ್ಕಾರಿ ನೌಕರರಿಗೆ 11% ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಇದಕ್ಕಾಗಿ 440 ಕೋಟಿ ರೂ ಮೀಸಲಿಡಲಾಗಿದೆ ಎಂದು ವಿವರಿಸಿದ್ದಾರೆ. 2022ರ ಆರಂಭದಲ್ಲಿಯೇ ಪಂಜಾಬ್ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರದ ಘೋಷಣೆಗಳು ಬಂದಿವೆ ಎನ್ನಲಾಗಿದೆ.
[Live] Announcing a Historic Decision for the Welfare, Progress and Prosperity for the People of Punjab, during a Press Conference at Punjab Civil Secretariat, Chandigarh. https://t.co/vBmNaN5P6I
— Charanjit S Channi (@CHARANJITCHANNI) November 1, 2021
ಅತಿಯಾದ ವಿದ್ಯುತ್ ಬಿಲ್ ಪಂಜಾಬಿಗಳಿಗೆ ಪ್ರಮುಖ ಸಮಸ್ಯೆಯಾಗಿದೆ, ಇದು ಸಂಪೂರ್ಣ ಅವ್ಯವಸ್ಥೆ ಮತ್ತು ಬಡತನಕ್ಕೆ ಕಾರಣವಾಗಿ ಆತ್ಮಹತ್ಯೆಗೂ ದಾರಿ ಮಾಡಿಕೊಡುತ್ತದೆ. ಇದಕ್ಕೆ ಪರಿಹಾರವಾಗಿ ಇಂದಿನ ಕ್ಯಾಬಿನೆಟ್‌ನಲ್ಲಿ ದರ ಇಳಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಿಎಂ ಹೇಳಿದ್ದಾರೆ.
ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಯಾವುದೇ ವ್ಯತ್ಯಯ ಇಲ್ಲದೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಭರವಸೆ ನೀಡಿದ ಮುಖ್ಯಮಂತ್ರಿಗಳು ರಾಜ್ಯ ಸರ್ಕಾರವು ಜಿವಿಕೆ ಗೋಯಿಂಡ್ವಾಲ್ ಸಾಹಿಬ್ ಜೊತೆಗಿನ ವಿದ್ಯುತ್ ಖರೀದಿ ಒಪ್ಪಂದವನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ.
ಇದುವರೆಗೂ ಪಂಜಾಬ್‌ನಲ್ಲಿ 100 ಯೂನಿಟ್‌ವರೆಗೆ ಒಂದು ಯೂನಿಟ್‌ಗೆ 4.19 ರೂ ವಿದ್ಯುತ್ ದರ ಇತ್ತು. ಇಂದಿನ ಘೋಷಣೆಯಿಂದ ಅದು ಪ್ರತಿ ಯೂನಿಟ್‌ಗೆ ಕೇವಲ 1.19 ರೂ ಆಗಲಿದೆ. 100 ರಿಂದ 300 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ 7 ರೂ ಇತ್ತು. ಅದೇ ರೀತಿ 300 ಯೂನಿಟ್‌ನಿಂದ ಮೇಲ್ಪಟ್ಟು 8.76 ರೂ ಇತ್ತು. ಇವೆರಡರಲ್ಲಿಯೂ ಪ್ರತಿ ಯೂನಿಟ್ ಮೇಲೆ 3 ರೂ ಕಡಿತ ಘೋಷಿಸಿದ್ದಾರೆ.
ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹ: ರಾಜ್ಯಗಳ ಪಾಲೆಷ್ಟು?


