ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಖುಲಾಸೆಗೊಳಿಸಿದೆ.
ಡೇರಾ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಹತ್ಯೆಗೆ ಸಂಚು ರೂಪಿಸಿದ್ದಕ್ಕಾಗಿ ಹರಿಯಾಣದ ಪಂಚಕುಲದ ಸಿಬಿಐ ನ್ಯಾಯಾಲಯವು 2022ರಲ್ಲಿ ಗುರ್ಮೀತ್ ಸಿಂಗ್ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ತನ್ಮ ಮಹಿಳಾ ಅನುಯಾಯಿಗಳ ಮೇಲೆ ಗುರ್ಮೀತ್ ಸಿಂಗ್ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿದ್ದ ಪತ್ರವೊಂದು 2001ರಲ್ಲಿ ಬಯಲಾಗಿತ್ತು. ಇದರ ಹಿಂದೆ ರಂಜಿತ್ ಸಿಂಗ್ ಪಾತ್ರವಿದೆ ಎಂದು ಶಂಕಿಸಿ, ಆತನನ್ನು ಜುಲೈ 10,2002ರಂದು ಗುಂಡಿಕ್ಕಿ ಹತ್ಯೆ ಮಾಡಿದ ಅಪರಾಧವನ್ನು ಗುರ್ಮೀತ್ ವಿರುದ್ದ ಸಿಬಿಐ ತನ್ನ ಚಾರ್ಜ್ ಶೀಟ್‌ನಲ್ಲಿ ದಾಖಲಿಸಿತ್ತು. ಪಂಚಕುಲದ ಸಿಬಿಐ ನ್ಯಾಯಾಲಯ ಕೂಡ ಆತನನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ಪ್ರಕಟಿಸಿತ್ತು.
ಇದರ ವಿರುದ್ದ ಗುರ್ಮೀತ್ ಸಿಂಗ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸುರೇಶ್ ಠಾಕೂರ್ ಮತ್ತು ನ್ಯಾಯಮೂರ್ತಿ ಲಲಿತ್ ಬಾತ್ರಾ ಅವರ ಹೈಕೋರ್ಟ್ ವಿಭಾಗೀಯ ಪೀಠ ಐಪಿಸಿ ಸೆಕ್ಷನ್ 120-ಬಿ, 302, 506 ರ ಅಡಿಯಲ್ಲಿ ಅಂಗೀಕರಿಸಿತ್ತು.
ಗುರ್ಮೀತ್ ಮೇಲಿದೆ ಹಲವು ಪ್ರಕರಣ
ತನ್ನ ಇಬ್ಬರು ಶಿಷ್ಯಂದಿರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಡೇರಾ ಮುಖ್ಯಸ್ಥ ಈಗಾಗಲೇ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಪತ್ರಕರ್ತ ರಾಮ್ ಚಂದರ್ ಛತ್ರಪತಿಯನ್ನು ಹತ್ಯೆ ಮಾಡಿದ ಮತ್ತೊಂದು ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಈ 20 ವರ್ಷಗಳ ಅವಧಿ ಮುಗಿದ ನಂತರ ಜಾರಿಯಾಗಲಿದೆ.
ಇತ್ತೀಚೆಗೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್‌ಗೆ ಶರಣಾಗುವಂತೆ ನಿರ್ದೇಶನ ನೀಡಿತ್ತು. ಹೈಕೋರ್ಟ್‌ನ ಅನುಮತಿಯಿಲ್ಲದೆ ಪೆರೋಲ್ ಮಂಜೂರು ಮಾಡದಂತೆ ಹರಿಯಾಣ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶವನ್ನು ತೆರವು ಮಾಡಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯು ಹೈಕೋರ್ಟ್‌ನಲ್ಲಿ ಪರಿಗಣನೆಗೆ ಬಾಕಿ ಇದೆ.
ಇದನ್ನೂ ಓದಿ : ಪಾಯಲ್ ಕಪಾಡಿಯಾ ಬಗ್ಗೆ ಭಾರತ ಹೆಮ್ಮೆ ಪಡುತ್ತಿದ್ದರೆ ಅವರ ಮೇಲಿನ ಕೇಸ್ ಹಿಂಪಡೆಯಿರಿ: ಶಶಿ ತರೂರ್


