ಚಂಡೀಗಢ: ಪಂಜಾಬ್‌ನ ತರ್ನ್ ತರಣ್ ಜಿಲ್ಲೆಯಲ್ಲಿ ಕಾನೂನು ವಿದ್ಯಾರ್ಥಿಯೊಬ್ಬ ಶಾಲಾ ಕೋಣೆಯೊಳಗೆ ವಿದ್ಯಾರ್ಥಿನಿಯ ತಲೆಗೆ ಗುಂಡು ಹಾರಿಸಿ ಕೊಂದ ಘಟನೆ ಸೋಮವಾರ ನಡೆದಿದೆ. ಸಹಪಾಠಿಗಳು ಭಯಭೀತರಾಗಿ ನೋಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ವಿದ್ಯಾರ್ಥಿನಿಯನ್ನು ಕೊಂದ ನಂತರ ಅವನು ತನ್ನ ಮೇಲೆ ಬಂದೂಕನ್ನು ತಿರುಗಿಸಿಕೊಂಡು ಟ್ರಿಗರ್ ಅನ್ನು ಎಳೆದಿದ್ದಾನೆ. ಪ್ರಿನ್ಸ್ ರಾಜ್ ಎಂದು ಗುರುತಿಸಲಾದ ಯುವಕ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರು ದಾರಿ ಮಧ್ಯೆಯೆ ಆತ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ವಿದ್ಯಾರ್ಥಿನಿ ಸಂದೀಪ್ ಕೌರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಿನ್ಸ್ ಮತ್ತು ಸಂದೀಪ್ ಇಬ್ಬರೂ ಮೊದಲ ವರ್ಷದ ಕಾನೂನು ವಿದ್ಯಾರ್ಥಿಗಳು ಮತ್ತು ಸಹಪಾಠಿಗಳಾಗಿದ್ದರು. ಅವರು ಸುಮಾರು 19-20 ವರ್ಷ ವಯಸ್ಸಿನವರಾಗಿದ್ದರು.
ಪ್ರಿನ್ಸ್ ತರಗತಿಯೊಳಗೆ ಸಂದೀಪ್ ಕೌರ್ ಮೇಲೆ ಗುಂಡು ಹಾರಿಸಿ ಆಕೆಯ ಸಾವಿಗೆ ಕಾರಣನಾದ, ನಂತರ ತಾನು ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಗ್ಬೀರ್ ಸಿಂಗ್ ತಿಳಿಸಿದ್ದಾರೆ.
ಉಸ್ಮಾ ಗ್ರಾಮದಲ್ಲಿರುವ ಕಾಲೇಜಿನಲ್ಲಿ ನಡೆದ ಕೊಲೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದಾಗ ತರಗತಿ ಇನ್ನೂ ಪ್ರಾರಂಭವಾಗಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸಂದೀಪ್ ಕೌರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ರಾಜ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದರು. ಆದರೆ ದಾರಿಯ ಮಧ್ಯೆದಲ್ಲೇ ಆತ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಕಾಲೇಜು ಆವರಣದಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಯಲ್ಲಿ ಪ್ರಿನ್ಸ್, ಸಂದೀಪ್ ಕೌರ್ ಮತ್ತು ಮತ್ತೊಬ್ಬ ವಿದ್ಯಾರ್ಥಿನಿ ತರಗತಿಯಲ್ಲಿ ಒಟ್ಟಿಗೆ ಇರುವುದನ್ನು ತೋರಿಸಲಾಗಿದೆ.
ತರಗತಿಯಲ್ಲಿ ಇತರ ಕೆಲವು ವಿದ್ಯಾರ್ಥಿಗಳು ಸಹ ಇರುವುದನ್ನು ಕಾಣಬಹುದಾಗಿದ್ದು, ಇದ್ದಕ್ಕಿದ್ದಂತೆ, ಪ್ರಿನ್ಸ್ ತನ್ನ ಮೇಜಿನಿಂದ ಎದ್ದು ಸಂದೀಪ್ ಕೌರ್ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಅವನು ತಲೆಗೆ ಗುಂಡು ಹಾರಿಸಿಕೊಂಡು ನೆಲದ ಮೇಲೆ ಬಿದ್ದಿದ್ದಾನೆ.
ಸಂದೀಪ್ ಜೊತೆ ಕುಳಿತಿದ್ದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ಎದ್ದು ನಿಂತು ಕೌರ್ ಳನ್ನು ಪರೀಕ್ಷಿಸಿದಳು, ಆಗ ಅವಳು ಚಲನರಹಿತಳಾಗಿದ್ದಳು.
ಗುಂಡು ಹಾರಿದ ಶಬ್ದ ಕೇಳಿ ಕೆಲವು ವಿದ್ಯಾರ್ಥಿಗಳು ತರಗತಿಯೊಳಗೆ ಪ್ರವೇಶಿಸುತ್ತಿರುವುದು ಕಂಡುಬಂದಿತು, ಆದರೆ ಸಂದೀಪ್ ನನ್ನು ನೋಡಿದ ನಂತರ ಅವರು ಓಡಿಹೋದರು.
ಸಂದೀಪ್ ಅವರ ತಾಯಿ ಹರ್ಜಿಂದರ್ ಕೌರ್ ಅವರು ಶಾಲಾ ಅಧಿಕಾರಿಗಳಿಂದ ಕರೆ ಬಂದು, ತಕ್ಷಣ ಕಾಲೇಜಿಗೆ ತಲುಪುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿದರು.
“ಅವಳ (ಸಂದೀಪ್) ಮೇಲೆ ಗುಂಡು ಹಾರಿಸಲಾಗಿದೆ ಎಂದು ನನಗೆ ತಿಳಿಸಲಾಗಿಲ್ಲ” ಎಂದು ಹರ್ಜಿಂದರ್ ಸುದ್ದಿಗಾರರಿಗೆ ತಿಳಿಸಿದರು, ಕಾಲೇಜಿಗೆ ತಲುಪಿದಾಗ, ತನ್ನ ಮಗಳು ಚಲನರಹಿತವಾಗಿ ಬಿದ್ದಿರುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.
ಒಬ್ಬ ವಿದ್ಯಾರ್ಥಿ ಆಯುಧದೊಂದಿಗೆ ಕಾಲೇಜಿಗೆ ಹೇಗೆ ಪ್ರವೇಶಿಸಲು ಸಾಧ್ಯ ಎಂದು ಸಂದೀಪ್ ಕೌರ್ ತಾಯಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ ಮಲಿಯನ್ ಗ್ರಾಮದವರಾಗಿದ್ದರೆ, ಸಂದೀಪ್ ಕೌರ್ ನೌಶೆಹ್ರಾ ಪನ್ನುವಾನ್ ಗ್ರಾಮದ ನಿವಾಸಿಯಾಗಿದ್ದರು.


