ಹೊಸದಿಲ್ಲಿ: ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಅವರು ಹೊಸ ವರ್ಷದ ದಿನದಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಕ್ಕಾಗಿ ಪ್ರತಿಭಟನಾನಿರತ ರೈತ ಮುಖಂಡರಿಂದ ತೀವ್ರ ಟೀಕೆ ವ್ಯಕ್ತವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ಹಿಂದೆ ರೈತರ ಆಂದೋಲನಕ್ಕೆ ಬೆಂಬಲ ನೀಡಿದ ದಿಲ್ಜಿತ್ ದೋಸಾಂಜ್ ಅವರ ಈ ಭೇಟಿಯ ಕುರಿತು ನಿರಾಶೆಯನ್ನು ವ್ಯಕ್ತಪಡಿಸಿದ ರೈತರು, ಈ ಕಾರಣಕ್ಕಾಗಿ ರೈತ ಹೋರಾಟದ ಕುರಿತು ಗಾಯಕನ ಬದ್ಧತೆಯನ್ನು ಪ್ರಶ್ನಿಸಿದ್ದಾರೆ. ದಿಲ್ಜಿತ್ ದೋಸಾಂಜ್ ಅವರು ಮೋದಿಯೊಂದಿಗಿನ ತನ್ನ ಭೇಟಿಯನ್ನು ಹೊಸ ವರ್ಷಕ್ಕೆ “ಅದ್ಭುತ ಆರಂಭ” ಎಂದು ಬಣ್ಣಿಸಿದ್ದಾರೆ. ಅಂತರಾಷ್ಟ್ರೀಯ ತಾರಾಪಟ್ಟಿಗೆ ವಿನಮ್ರ ಆರಂಭ ಎಂದು ಪ್ರಧಾನಿಯು ಗಾಯಕನ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ.
“ದಿಲ್ಜಿತ್ ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ, ಅವರು ಸಂಭು ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಿರತ ದಲ್ಲೆವಾಲ್ ಜಿ ಅವರೊಂದಿಗೆ ಜೊತೆಗೂಡಿ ನಮ್ಮೊಂದಿಗೆ ಸೇರುತ್ತಿದ್ದರು. ನಮ್ಮ ಸಮಸ್ಯೆಗಳನ್ನು ಆಲಿಸುತ್ತಿದ್ದರು ಮತ್ತು ತಮ್ಮ ಹಿಂದಿನ ರೈತಪರ ಹೇಳಿಕೆಗಳಿಗೆ ಬದ್ಧರಾಗಿರುತ್ತಿದ್ದರು. ಬದಲಾಗಿ, ಪ್ರಧಾನಿ ಮೋದಿಯವರನ್ನು ಭೇಟಿಯಾಗಿರುವುದು ಅವರ ಮುಂದಿನ ಉದ್ದೇಶಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಗಡಿಯಲ್ಲಿನ ರೈತ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.
2020ರಲ್ಲಿ ದಿಲ್ಜಿತ್ ದೋಸಾಂಜ್ ರೈತರ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು. ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದರು.
ಅಂದು ದಿಲ್ಜಿತ್ ದೋಸಾಂಜ್ ಅವರು ರೈತರಿಗೆ ಬೆಂಬಲವಾಗಿ Instagram ನಲ್ಲಿ ಪೋಸ್ಟ್ ಮಾಡಿದ್ದು, ನಾವೆಲ್ಲರೂ ರೈತ ಸಮುದಾಯದೊಂದಿಗೆ ನಿಲ್ಲುತ್ತೇವೆ. ಪಂಜಾಬ್‌ನ ಎಲ್ಲಾ ವಯೋಮಾನದ ಪ್ರತಿಯೊಬ್ಬ ವ್ಯಕ್ತಿಯೂ ರೈತರೊಂದಿಗೆ ನಿಂತಿದ್ದಾರೆ. ರೈತ ವಿರೋಧಿ ಮಸೂದೆಗಳನ್ನು ಸಮರ್ಥಿಸುವ ಪ್ರತಿಯೊಬ್ಬರೂ ಕನಿಷ್ಠ ರೈತರೊಂದಿಗೆ ಮಾತನಾಡಲು ಪ್ರಯತ್ನಿಸಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರಿ ಭಾಷೆಗಳಿಂದ ಪಂಜಾಬಿ ಭಾಷೆಯನ್ನು ನಿರ್ಮೂಲನೆ ಮಾಡಲಾಗಿದೆ. ಏನಾಗುತ್ತಿದೆ? ಎಂದಿದ್ದರು.
ಇಷ್ಟರ ಮಧ್ಯೆ ಈಗ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಸಂಚಾಲಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಖಾನೂರಿ ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ರೈತರು ತಾವು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ಹಲವು ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಿದ್ದಾರೆ.
ದಲ್ಲೇವಾಲ್ ಅವರನ್ನು ಬೆಂಬಲಿಸಲು ಸಾವಿರಾರು ರೈತರು, ಅನೇಕ ಟ್ರ್ಯಾಕ್ಟರ್-ಟ್ರಾಲಿಗಳೊಂದಿಗೆ ಖಾನೌರಿ ಸ್ಥಳದಲ್ಲಿ ಜಮಾಯಿಸಿದ್ದಾರೆ. ಪಂಜಾಬ್ ಸರ್ಕಾರವು ವೈದ್ಯಕೀಯ ಸಹಾಯವನ್ನು ನೀಡಲು ದಲ್ಲೆವಾಲ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರೂ, ಅವರು ನಿರಾಕರಿಸಿದ್ದಾರೆ.
ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ದಲ್ಲೆವಾಲ್ ಅವರ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಆಸ್ಪತ್ರೆಗೆ ಸಂಬಂಧಿಸಿದ ಆದೇಶಗಳನ್ನು ಅನುಸರಿಸಲು ಪಂಜಾಬ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಬುಧವಾರ ನಡೆದ ಹೊಸ ವರ್ಷದ ಸಭೆಯಲ್ಲಿ ದಿಲ್ಜಿತ್ ಅವರ ಸಾಧನೆಗಳಿಗಾಗಿ ಪ್ರಧಾನಿ ಮೋದಿಯವರು ಶ್ಲಾಘಿಸಿದರು. “ಹಿಂದೂಸ್ತಾನದ ಒಂದು ಸಣ್ಣ ಹಳ್ಳಿಯ ಹುಡುಗ ಜಾಗತಿಕ ವೇದಿಕೆಯಲ್ಲಿ ಮಿಂಚುತ್ತಿರುವುದು ಅದ್ಭುತವಾಗಿದೆ. ನಿಮ್ಮ ಕುಟುಂಬವು ನಿಮಗೆ ದಿಲ್ಜಿತ್ ಎಂದು ಹೆಸರಿಸಿದೆ ಮತ್ತು ನಿಮ್ಮ ಹೆಸರೇ ಸೂಚಿಸುವಂತೆ ಜನರ ಹೃದಯವನ್ನು ಗೆಲ್ಲುವುದಕ್ಕೆ ಮುಂದುವರಿಯಿರಿ” ಎಂದು ಪ್ರಧಾನಿ ಹೇಳಿದ್ದರು.
“ನಾವು ‘ಮೇರಾ ಭಾರತ್ ಮಹಾನ್’ ಎಂದು ಶಾಲೆಗಳಲ್ಲಿ ಓದುತ್ತಿದ್ದೆವು. ಆದರೆ ನಾನು ಭಾರತದಾದ್ಯಂತ ಪ್ರಯಾಣಿಸಿದಾಗ, ಜನರು ಏಕೆ ಹೀಗೆ ಹೇಳುತ್ತಾರೆಂದು ನನಗೆ ಅರಿವಾಯಿತು” ಎಂದು ಈ ಭೇಟಿಯ ಸಮಯದಲ್ಲಿ ದಿಲ್ಜಿತ್ ಉತ್ತರಿಸಿದ್ದರು.
ಪ್ರಧಾನಿ ಮೋದಿಯವರ ವೈಯಕ್ತಿಕ ಪ್ರಯಾಣವನ್ನು ಮೆಚ್ಚಿದ ಗಾಯಕ, “ನಿಮ್ಮ ಸಂದರ್ಶನವನ್ನು ನಾನು ನೋಡಿದ್ದೇನೆ, ಪ್ರಧಾನಿ ಸ್ಥಾನ ಅದ್ಭುತವಾಗಿದೆ. ಈ ಸ್ಥಾನದ ಹಿಂದೆ ತಾಯಿ, ಮಗ ಮತ್ತು ಮನುಷ್ಯ ಇದ್ದಾರೆ. ಅನೇಕ ಬಾರಿ, ನೀವು ತಾಯಿ ಮತ್ತು ಪವಿತ್ರ ಗಂಗೆಯನ್ನು ನಿಮ್ಮೊಂದಿಗೆ ಹೊತ್ತುಕೊಂಡಾಗ ಈ ಅರ್ಧ ಸತ್ಯವು ತುಂಬಾ ವಿಶಾಲವಾಗಿದೆ. ಅದು ಹೃದಯ ಸ್ಪರ್ಶಿಯಾಗಿದೆ” ಎಂದು ಹೇಳಿದ್ದರು.
ಹಿಂಪಡೆದ ರೈತ ವಿರೋಧಿ ಕೃಷಿ ಕಾನೂನನ್ನು ‘ನೀತಿಗಳು’ ಎಂಬ ಹೆಸರಿನಲ್ಲಿ ಮತ್ತೆ ತರಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರ!


