ಶಾಸಕರೇ ಮುಂದೆ ನಿಂತು ಕಾನೂನುಬಾಹಿರ ಚಟುವಟಿಕೆ ನಡೆಸಲು ಜನರನ್ನು ಪ್ರೋತ್ಸಾಹಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಬಳಿ ಶನಿವಾರ (ಡಿ.20) ನಡೆದಿದೆ.
ಕೇಪು ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ಶನಿವಾರ ದಾಳಿ ನಡೆಸಿದ್ದರು. ಆದರೆ, ಪುತ್ತೂರು ಶಾಸಕ ಅಶೋಕ್ ರೈ ಖುದ್ದು ಮುಂದೆ ನಿಂತು ಸಂಪ್ರದಾಯದ ಹೆಸರಿನಲ್ಲಿ ಕೋಳಿ ಅಂಕ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕೋಳಿ ಅಂಕಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಮತಿ ನೀಡಿರಲಿಲ್ಲ. ಹಾಗಾಗಿ, ಶನಿವಾರ ಮಧ್ಯಾಹ್ನ ಕೋಳಿ ಅಂಕ ಆರಂಭವಾಗುತ್ತಿದ್ದಂತೆ ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಅಡ್ಡಿಪಡಿಸಿದ ಹಿನ್ನೆಲೆ, ಸ್ಥಳಕ್ಕೆ ತೆರಳಿದ ಶಾಸಕ ಅಶೋಕ್ ಕುಮಾರ್ ರೈ, “ಯಾರೂ ಓಡಬೇಡಿ ಕೋಳಿ ಅಂಕ ಸಂಜೆಯವರೆಗೆ ನಡೆದೇ ನಡೆಯುತ್ತದೆ. ನಾನು ಕೂಡ ನಿಮ್ಮ ಜೊತೆಗೆ ಇರುತ್ತೇನೆ” ಎಂದು ಹೇಳಿ ಸಂಜೆ 5 ಗಂಟೆಯವರೆಗೆ ಸ್ಥಳದಲ್ಲಿ ನಿಂತು ಕೋಳಿ ಅಂಕ ನಡೆಸಿದ್ದಾರೆ.
https://www.facebook.com/share/v/1CLEbhH6oj/
ಮಾಧ್ಯಮಗಳ ಜೊತೆ ಮಾತನಾಡಿರುವ ಅಶೋಕ್ ರೈ,”800 ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಕೋಳಿ ಅಂಕ ನಡೆಯುತ್ತದೆ. ಇದು ಧಾರ್ಮಿಕ ಭಾವನೆ. ಇಲ್ಲಿ ಯಾವುದೇ ಜೂಜು ನಡೆಯುವುದಿಲ್ಲ. ಜನರು ಪ್ರೀತಿಯಿಂದ ಸಾಕಿದ ಕೋಳಿಯನ್ನು ಹರಕೆ ರೂಪದಲ್ಲಿ ತಂದು ಕೋಳಿ ಅಂಕ ನಡೆಸಿ, ಅದನ್ನು ರೈತರು ತೆಗೆದುಕೊಂಡು ಹೋಗುತ್ತಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂಬುವುದ ನಮಗೆ ಗೊತ್ತಿದೆ. ಆದರೆ, ಜನರ ಧಾರ್ಮಿಕ ಭಾವನೆಗಳನ್ನು ಮನಗಂಡು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಪೊಲೀಸರು ಬಂದು ಚದುರಿಸುವಂತ ಪ್ರಯತ್ನ ಮಾಡಿದ್ದಾರೆ. ನಾವು ಕಾನೂನು ಬಾಹಿರ ಕೆಲಸ ಮಾಡಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.
ಅಶೋಕ್ ರೈ ಸೇರಿ 17 ಮಂದಿಯ ವಿರುದ್ದ ಪ್ರಕರಣ
ಯಾವುದೇ ಸೂಕ್ತ ಪರವಾನಿಗೆ ಪಡೆಯದೇ ಕಾನೂನುಬಾಹಿರವಾಗಿ ಕೋಳಿ ಅಂಕ ಆಯೋಜಿಸಿದ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಹಿತ 17 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಡಿ.20ರಂದು ಮಧ್ಯಾಹ್ನ ಕೇಪುವಿನ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಕಾನೂನುಬಾಹಿರವಾಗಿ ಕೋಳಿ ಅಂಕ ಆಡಲು ಮುಂದಾಗುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹಲವು ಮಂದಿ ಕೋಳಿ ಅಂಕಕ್ಕೆ ಸಿದ್ಧರಾಗಿ ಗುಂಪು ಸೇರಿದ್ದರು. ಪೊಲೀಸರು ಅಲ್ಲಿದ್ದವರಿಗೆ ಕಾನೂನುಬಾಹಿರ ಕೋಳಿ ಅಂಕದ ಬಗ್ಗೆ ಕಾನೂನು ತಿಳುವಳಿಕೆ ನೀಡಿದ್ದಾರೆ. ಆದರೆ ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಪುತ್ತೂರು ಶಾಸಕ ಅಶೋಕ್ ರೈ ಸೇರಿದ್ದ ಜನರಿಗೆ ಕಾನೂನುಬಾಹಿರವಾಗಿ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆ ನೀಡಿದ್ದಾರೆ. ಅದರಂತೆ ಸ್ಥಳದಲ್ಲಿ ಸೇರಿದ್ದ ಜನರು ಕೋಳಿ ಅಂಕ ಆರಂಭಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ಪೊಲೀಸರು ಕೋಳಿ ಅಂಕ ಆಟವಾಡುತ್ತಿದ್ದ 16 ಮಂದಿಯನ್ನು ವಶಕ್ಕೆ ಪಡೆದು, 22 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಬಾಳು(ಕತ್ತಿ)ಗಳನ್ನು ವಶಕ್ಕೆ ಪಡೆದಿದ್ದಾರೆ.
ಪರವಾನಿಗೆ ಪಡೆಯದೆ ಕಾನೂನು ಬಾಹಿರವಾಗಿ ಕೋಳಿ ಅಂಕಕ್ಕೆ ಅವಕಾಶ ಮಾಡಿಕೊಟ್ಟ ಜಾಗದ ಮಾಲಕ ಮುರಳೀಧರ ರೈ, ಕಾನೂನುಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ-ದುಷ್ಪ್ರೇರಣೆ ನೀಡಿದ ಆರೋಪದಲ್ಲಿ ಶಾಸಕ ಅಶೋಕ್ ರೈ ವಿರುದ್ಧ ಹಾಗೂ ಕೋಳಿ ಅಂಕದಲ್ಲಿ ತೊಡಗಿದ್ದ 16 ಮಂದಿಯ ವಿರುದ್ಧ ವಿಟ್ಲ ಠಾಣೆಯಲ್ಲಿ ಅ.ಕ್ರ: 190/2025, ಕಲಂ:189(2),49, 221,223,190)BNS-2023, PREVENTION OF CRUELTY TO ANIMALS ACT, 1960 (U/s-3,11) ರಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


