ದೇಶಾದ್ಯಂತ ಲಾಕ್‌ಡೌನ್ ಘೋಷಿಸಿ ಹತ್ತಿರ ಹತ್ತಿರ ಒಂದು ತಿಂಗಳಾಗುತ್ತಿದೆ. ಮನೆಯಲ್ಲಿರಲಾರದೇ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ರಾಜ್ಯದಲ್ಲಿ 71,000 ಪ್ರಕರಣಗಳು ದಾಖಲಾಗಿವೆ ಎಂಬ ವರದಿಗಳು ಬರುತ್ತಿವೆ. ಇಂತಹ ಸಮಯದಲ್ಲಿ ಶಾಲೆಯೊಂದರಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದ ಹತ್ತಾರು ವಲಸೆ ಕಾರ್ಮಿಕರು ಸೇರಿ ಆ ಶಾಲೆಗೆ ಸುಣ್ಣ ಬಣ್ಣ ಬಳಿದು ಮಿಂಚುವಂತೆ ಮಾಡಿದ್ದಾರೆ. ಆ ಮೂಲಕ ಅವರು ದೇಶದ ಗಮನಸೆಳೆದಿದ್ದಾರೆ.
ರಾಜಸ್ಥಾನದ ಸಿಕಾರ್ ಎಂಬ ಗ್ರಾಮದಲ್ಲಿ ಹತ್ತಾರು ವಲಸೆ ಕಾರ್ಮಿಕರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆ ಕಾರ್ಮಿಕರನ್ನು ಆ ಊರಿನ ಜನ ಉತ್ತಮ ಊಟ ಬಟ್ಟೆ ನೀಡಿ ಪ್ರೀತಿಯಿಂದ ನೋಡಿಕೊಂಡಿದ್ದರು. ಪ್ರತಿದಿನವೂ ಕೆಲಸ ಮಾಡುತ್ತಾ ಕ್ರಿಯಾಶೀಲರಾಗಿದ್ದ ಅಲ್ಲಿನ ಕಾರ್ಮಿಕರಿಗೆ ಸುಮ್ಮನೆ ಕೂರುವುದಕ್ಕಿಂತ ಇದ್ದಲ್ಲೇ ಏನಾದರೂ ಮಾಡುವ ಆಸೆಯಾಯಿತು. ಶಾಲೆಗೆ ಬಣ್ಣ ಬಳಿದು ಬಹಳ ದಿನಗಳಾಗಿದ್ದನ್ನು ಗಮನಿಸಿದ ಅವರು ಗ್ರಾಮದ ಸರಪಂಚರಲ್ಲಿ ನೀವು ಬಣ್ಣ ಕೊಡಿಸುವುದಾದರೆ ಶಾಲೆಗೆ ಬಣ್ಣ ಬಳಿಯುತ್ತೇವೆ ಎಂದು ಮನವಿ ಮಾಡಿದ್ದರು.
ಇದಕ್ಕೆ ಸರಪಂಚರು ಒಪ್ಪಿ ಬಣ್ಣ ಕೊಡಿಸಿದ್ದೆ ತಡ ಎಲ್ಲಾ ಕಾರ್ಮಿಕರು ಸೇರಿ ಶಾಲೆಗೆ ಬಣ್ಣ ಹೊಡೆದು ನಳನಳಿಸುವಂತೆ ಮಾಡಿದ್ದಾರೆ. ಆ ಮೂಲಕ ಊರಿನವರು ತಮ್ಮನ್ನು ನೋಡಿಕೊಂಡ ಋಣ ತೀರಿಸಿದ ಭಾವನೆ ಅವರಲ್ಲಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ದೇಶದ ಇತರ ಸ್ಥಳಗಳಿಂದ ವಲಸೆ ಬಂದ ಕಾರ್ಮಿಕರು ಆ ಶಾಲೆಯಲ್ಲಿ ಉಳಿದುಕೊಂಡಿದ್ದರು. ಗ್ರಾಮಸ್ಥರು ನೀಡಿದ ಸೇವೆಯಿಂದ ತುಂಬಾ ಸಂತೋಷಗೊಂಡಿದ್ದ ಅವರು ಶಾಲೆಯನ್ನು ಚೆನ್ನಾಗಿ ಮಾಡುವು ಮೂಲಕ ಮಾದರಿಯಾಗಿದ್ದಾರೆ.
ಶಾಲೆಯ ಹೊರಾಂಗಣವನ್ನು ಎಲ್ಲರೂ ಸೇರಿ ಸ್ವಚ್ಛಗೊಳಿಸಿದ್ದಲ್ಲದೇ ಶಾಲೆಯ ಗೋಡೆಗಳ ಮೇಲೆ ಚಿತ್ರಬಿಡಿಸಲು ಸಹ ಮುಂದಾಗಿದ್ದಾರೆ ಎಂದು ಹಲವು ಹಿಂದಿ ಪತ್ರಿಕೆಗಳು ವರದಿ ಮಾಡಿವೆ.
ಕಳೆದ ಒಂಬತ್ತು ವರ್ಷಗಳಿಂದ ಶಾಲೆಗೆ ಬಣ್ಣ ಬಳಿದಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರ್ಮಿಕರ ಕೆಲಸಕ್ಕೆ ಸರಪಂಚರು ವೇತನ ನೀಡಲು ಮುಂದಾದಾದ ಆ ವಲಸೆ ಕಾರ್ಮಿಕರು ಯಾವುದೇ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಕ್ವಾರಂಟೈನ್ ಸಮಯದಲ್ಲಿ ಗ್ರಾಮಸ್ಥರು ತಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರಿಂದ ಇದು ನಮ್ಮ ಪ್ರತಿ ಕೊಡುಗೆಯಾಗಿದ್ದು ನಮಗೆ ಯಾವುದೇ ಹಣ ಬೇಡ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಮಾದರಿ ನಡೆಯಿಂದಾಗಿ ಆ ವಲಸೆ ಕಾರ್ಮಿಕರು ಮತ್ತು ಸಿಕಾರ್ ಗ್ರಾಮಸ್ಥರು ಭಾರೀ ಪ್ರಶಂಸೆಗೆ ಒಳಗಾಗಿದ್ದಾರೆ. ಊರಿನ ಶಾಲೆಯನ್ನು ಎಲ್ಲರೂ ಸೇರಿ ಉತ್ತಮ ಪಡಿಸಿದ ಸಾರ್ಥಕ ಮನೋಭಾವ ಅವರದಾಗಿದೆ. ಇತ್ತ ವಲಸೆ ಕಾರ್ಮಿಕರ ಕ್ವಾರಂಟೈನ್ ಅವಧಿ ಸಹ ಮುಗಿದಿದ್ದು ಅವರು ಒಳ್ಳೆಯ ಕೆಲಸ ಮಾಡಿದ ಭಾವದಲ್ಲಿದ್ದಾರೆ. ಆ ಮೂಲಕ ಇದೊಂದು ಸಣ್ಣ ಕೆಲಸವಾದರೂ ಸಹ ಈ ಊರು ದೇಶಕ್ಕೆ ಒಂದು ಸೌಹಾರ್ದಯುತ ಉದಾಹರಣೆಯಾಗಿದೆ.
ಇದನ್ನೂ ಓದಿ: ಮೂರು ಆಸ್ಪತ್ರೆ ಅಲೆದರು. ಕೊನೆಗೆ ಬೆಡ್ ಸಿಕ್ಕಿತ್ತು. ಆದರೆ ತುಂಬಾ ತಡವಾಗಿತ್ತು: ನ್ಯೂಯಾರ್ಕ್‌ನ ಮನಮಿಡಿಯುವ ಘಟನೆ


