ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿಗೆ ಮರದಂಡನೆ ವಿಧಿಸುವಂತೆ ಕೋರಿ ಪಶ್ಚಿಮ ಬಂಗಾಳ ಸರ್ಕಾರ ಮಂಗಳವಾರ (ಜ.21) ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದೆ.
ಸೋಮವಾರ (ಜ.20) ಅಪರಾಧಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ (ಮರಣದವರೆಗೆ) ವಿಧಿಸಿ ಕೋಲ್ಕತ್ತಾದ ಸಿಯಾಲದಹ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ತೀರ್ಪು ಪ್ರಕಟಿಸಿದ್ದರು.
ಸಿಯಾಲದಹ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯದ ಅನುಮತಿ ಕೋರಿ ಅಡ್ವೊಕೇಟ್ ಜನರಲ್ ಕಿಶೋರ್ ದತ್ತ ಅವರು ಮಂಗಳವಾರ (ಜ. 21) ನ್ಯಾಯಮೂರ್ತಿ ದೇಬಾಂಗ್ಸು ಬಸಕ್ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ಶಬ್ಬರ್ ರಶೀದಿ ಅವರ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೆಷನ್ಸ್ ನ್ಯಾಯಾಲಯದ ತೀರ್ಪಿಗೆ ಅತೃಪ್ತಿ ವ್ಯಕ್ತಪಡಿಸಿದ ಬೆನ್ನಲ್ಲೇ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ. “ಜೀವಾವಧಿ ಶಿಕ್ಷೆಯ ಅರ್ಥವೇನು? ಅನೇಕ ಪ್ರಕರಣಗಳಲ್ಲಿ, ಘೋರ ಅಪರಾಧಗಳನ್ನು ಮಾಡಿದ ನಂತರವೂ ಅಪರಾಧಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಆರ್‌ಜಿ ಕರ್ ಪ್ರಕರಣದ ತೀರ್ಪಿನಿಂದ ನಾನು ನಿಜವಾಗಿಯೂ ಆಘಾತಕ್ಕೊಳಗಾಗಿದ್ದೇನೆ” ಎಂದು ಮುಖ್ಯಮಂತ್ರಿ ಮಂಗಳವಾರ (ಜ. 21) ಹೇಳಿದ್ದರು.
“ನಾವೂ ಕಾನೂನು ಅಧ್ಯಯನ ಮಾಡಿದ್ದೇವೆ ಮತ್ತು ಅದನ್ನು ಅರ್ಥಮಾಡಿಕೊಂಡಿದ್ದೇವೆ. ಮರಣದಂಡನೆ ವಿಧಿಸಲು ಇದು ‘ಅಪರೂಪದಲ್ಲಿ ಅಪರೂಪದ ಪ್ರಕರಣವಲ್ಲ’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ನಾವು ನ್ಯಾಯಾಧೀಶರ ಹೇಳಿಕೆಯನ್ನು ವಿರೋಧಿಸುತ್ತಿಲ್ಲ. ಆದರೆ, ಇದು ನಿಜಕ್ಕೂ ಅಪರೂಪದ, ಸೂಕ್ಷ್ಮ ಮತ್ತು ಘೋರ ಅಪರಾಧ ಎಂದು ನಾನು ಭಾವಿಸುತ್ತೇನೆ. ಒಬ್ಬ ಅಪರಾಧಿಯನ್ನು ಬಿಡುಗಡೆ ಮಾಡಿದರೆ ಅಥವಾ ಶಿಕ್ಷೆಗೆ ಒಳಪಡಿಸದಿದ್ದರೆ, ಆತ ಇನ್ನಷ್ಟು ದುಷ್ಕೃತ್ಯ ಎಸಗಬಹುದು” ಎಂದಿದ್ದರು.
ಅಪರಾಧಿಗೆ ಮರಣದಂಡನೆ ವಿಧಿಸಲು ನಿರಾಕರಿಸುವ ವೇಳೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು, “ಜೀವಕ್ಕೆ ಮತ್ತೊಂದು ಜೀವ” ಎಂಬ ಹಳೆಯ ಪದ್ದತಿಯನ್ನು ಮೀರಿ ನಾವು ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದರು.
“ಆಧುನಿಕ ನ್ಯಾಯ ಕ್ಷೇತ್ರದಲ್ಲಿ, ನಾವು ‘ಕಣ್ಣಿಗೆ ಕಣ್ಣು’, ‘ಹಲ್ಲಿಗೆ ಹಲ್ಲು’, ‘ಉಗುರಿಗೆ ಉಗುರು’ ಮತ್ತು ‘ಜೀವಕ್ಕೆ ಜೀವ’ ಎಂಬ ಪ್ರಾಚೀನ ಪ್ರವೃತ್ತಿಯನ್ನು ಮೀರಿ ಮುಂದುವರಿಯಬೇಕು. ಕ್ರೌರ್ಯವನ್ನು ಕ್ರೌರ್ಯದೊಂದಿಗೆ ಹೋಲಿಸುವುದು ನಮ್ಮ ಕರ್ತವ್ಯವಲ್ಲ, ಬದಲಿಗೆ ಬುದ್ಧಿವಂತಿಕೆ, ಕರುಣೆ ಮತ್ತು ನ್ಯಾಯದ ಆಳವಾದ ತಿಳುವಳಿಕೆಯ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿಯುವುದು ನಮ್ಮ ಕೆಲಸ” ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದರು.
“ಈ ಪ್ರಕರಣವು “ಅಪರೂಪದಲ್ಲಿ ಅಪರೂಪ” ಎಂದು ವರ್ಗೀಕರಿಸಲು ಇರುವ ಕಠಿಣ ಮಾನದಂಡಗಳನ್ನು ಪೂರೈಸುವುದಿಲ್ಲ. ಹಾಗಾಗಿ, ಮರಣದಂಡನೆಗಾಗಿ ಪ್ರಾಸಿಕ್ಯೂಷನ್ ಮಾಡಿರುವ ಮನವಿಯನ್ನು ಪರಿಗಣಿಸುವುದು ಸೂಕ್ತವಲ್ಲ” ಎಂದು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಹೇಳಿದ್ದರು.
ಅದಾಗ್ಯೂ, ಮಮತಾ ಬ್ಯಾನರ್ಜಿ ನ್ಯಾಯಾಲಯದ ಆದೇಶಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. “ಯಾರಾದರೊಬ್ಬ ರಾಕ್ಷಸನಾಗಿದ್ದರೆ ನಮ್ಮ ಸಮಾಜ ಮಾನವೀಯತೆ ತೋರಿಸುತ್ತಿತ್ತಾ? ನಮ್ಮ ತಾಯಂದಿರು ಮತ್ತು ಸಹೋದರಿಯರ ಕಡೆಗೆ ಸಮಾಜವನ್ನು ಮಾನವೀಯಗೊಳಿಸಬೇಕು. ಇಂತಹ ಪ್ರಕರಣಗಳಲ್ಲಿ ಮರಣದಂಡನೆ ವಿಧಿಸುವ ‘ಪಶ್ಚಿಮ ಬಂಗಾಳ ಅಪರಾಧ ಕಾನೂನು ತಿದ್ದುಪಡಿ ಮಸೂದೆ-2024 ಅನ್ನು ನಮ್ಮ ಸರ್ಕಾರ ಅಂಗೀಕರಿಸಿದೆ” ಎಂದು ಹೇಳಿದ್ದಾರೆ.
“ಆಸಿಡ್ ದಾಳಿ ಮತ್ತು ಇತರ ಘೋರ ಅಪರಾಧಗಳ ಪ್ರಕರಣಗಳಲ್ಲಿ ಕಠಿಣ ಶಿಕ್ಷೆ ವಿಧಿಸಲು ನಾವು ಮಸೂದೆ ತಂದಿದ್ದೇವೆ. ಆದರೆ, ಕೇಂದ್ರ ಸರ್ಕಾರ ಇದರ ಬಗ್ಗೆ ಗಮನಹರಿಸದ ಕಾರಣ ಮಸೂದೆ ಇನ್ನೂ ಬಾಕಿ ಇದೆ. ಈ ಮಸೂದೆಯು ಮಾದರಿಯಾಗಬೇಕೆಂದು ಮತ್ತು ದೇಶದಾದ್ಯಂತ ಜಾರಿಗೆ ಬರಬೇಕೆಂದು ನಾವು ಬಯಸುತ್ತೇವೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಹೈದರಾಬಾದ್| ಮಕ್ಕಳ ಅಶ್ಲೀಲ ಚಿತ್ರ ಡೌನ್‌ಲೋಡ್ ಮಾಡಿ ಹಂಚಿಕೆ; ಮೂವರ ಬಂಧನ


