Homeಕರ್ನಾಟಕಪಕ್ಷಾಂತರದಿಂದ ಆರ್‌ಆರ್ ನಗರ ಉಪಚುನಾವಣೆ: ರಾಜಕೀಯ ದಿಕ್ಕು ಬದಲಿಸುತ್ತಾ?

ಪಕ್ಷಾಂತರದಿಂದ ಆರ್‌ಆರ್ ನಗರ ಉಪಚುನಾವಣೆ: ರಾಜಕೀಯ ದಿಕ್ಕು ಬದಲಿಸುತ್ತಾ?

2008ರಲ್ಲಿ ಜೆಡಿಎಸ್‍ನಿಂದ ಸ್ಪರ್ಧೆ ಮಾಡಿದ್ದ ಹನುಮಂತರಾಯಪ್ಪ ಅವರ ಮಗಳು ಕುಸುಮಾ ಕಾಂಗ್ರೆಸ್ ಅಭ್ಯರ್ಥಿ! ಇದು ಕಾಂಗ್ರೆಸ್‍ಗೆ ತನ್ನ ಓಟಿನ ಬೇಟೆಯನ್ನು ಮತ್ತಷ್ಟು ಹೆಚ್ಚಿಸಲು ಉಪಯೋಗ ಆಗಬಹುದು ಎಂಬ ಲೆಕ್ಕಾಚಾರ ಕೂಡಾ ಇದೆ.

- Advertisement -
- Advertisement -

ರಾಜ್ಯದ ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಗೆ ಬರುವ ರಾಜರಾಜೇಶ್ವರಿ ನಗರದಲ್ಲಿ (ಆರ್‌ಆರ್ ನಗರ) ಉಪ ಚುನಾವಣೆ ಘೋಷಣೆಯಾಗಿದೆ. ಮುಂದಿನ ತಿಂಗಳು ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು ನವೆಂಬರ್ 10ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ – ರಾಜ್ಯದ ಮೂರೂ ಪ್ರಮುಖ ಪಕ್ಷಗಳಿಗೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ.

ರಾಜ್ಯದಲ್ಲಿ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿರುವುದಕ್ಕೆ ಕಾರಣ ಬೇರೆಬೇರೆ. ಶಿರಾ ಕ್ಷೇತ್ರದ ಶಾಸಕರಾಗಿದ್ದ ಸತ್ಯನಾರಾಯಣ ಅವರ ಸಾವಿನಿಂದಾಗಿ ಉಪಚುನಾವಣೆ ನಡೆಯುತ್ತಿದ್ದರೆ, ಆರ್‌ಆರ್ ನಗರ ಕ್ಷೇತ್ರದ ಚುನಾವಣೆ ಆಪರೇಷನ್ ಕಮಲದ ಕೃಪೆಯಿಂದ ನಡೆಯುತ್ತಿದೆ. ಹಾಗಾಗಿಯೇ ಆರ್‌ಆರ್ ನಗರ ಕ್ಷೇತ್ರದ ಉಪಚುನಾವಣೆ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ.

ಭೌಗೋಳಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ 2018ರ ಮಾಹಿತಿಯಂತೆ 4,71,459 ಮತದಾರರಿದ್ದಾರೆ. ಕ್ಷೇತ್ರದೊಳಗೆ ಬಿಬಿಎಂಪಿಯ ಒಟ್ಟು ಒಂಬತ್ತು ವಾರ್ಡ್‍ಗಳಿವೆ; ಅದರಲ್ಲಿ ಐದು ವಾರ್ಡ್‍ಗಳನ್ನು ಕಾಂಗ್ರೆಸ್ ಗೆದ್ದಿತ್ತು, ಬಿಜೆಪಿ ಮೂರು ಹಾಗೂ ಜೆಡಿಎಸ್ ಒಂದನ್ನು ಕೊನೆಯ ಬಾರಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದುಕೊಂಡಿದ್ದವು. (ಈಗ ಬಿಬಿಎಂಪಿ ಅವಧಿ ಪೂರ್ಣಗೊಂಡಿದ್ದು ಹೊಸದಾಗಿ ಚುನಾವಣೆ ನಡೆಯಬೇಕಿದೆ)

2008ರಲ್ಲಿ ಬಿಜೆಪಿಯ ಎಂ ಶ್ರೀನಿವಾಸ್ ಇಲ್ಲಿ ಗೆದ್ದಿದ್ದರಾದರೂ ನಂತರ ನಡೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ವಿಜಯ ಪತಾಕೆಯನ್ನು ಹಾರಿಸುತ್ತಲೇ ಬಂದಿದೆ. ಕಾಂಗ್ರೆಸ್‍ನಿಂದ ವಿಜಯಿಯಾಗಿದ್ದು ಸಿನಿಮೋದ್ಯಮಿ ಮುನಿರತ್ನ ನಾಯ್ಡು ಅವರೇ ಆರ್‌ಆರ್ ನಗರ ಕ್ಷೇತ್ರದ ಈ ಬಾರಿಯ ಉಪಚುನಾವಣೆಗೆ ನೇರ ಕಾರಣಕರ್ತರು ಎನ್ನಬಹುದು.

ಮೇ 12, 2018ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜಾಲಹಳ್ಳಿಯ ಅಪಾರ್ಟ್‍ಮೆಂಟ್ ಒಂದರಲ್ಲಿ 10 ಸಾವಿರ ಮತದಾರರ ಗುರುತಿನ ಚೀಟಿ ಸಿಕ್ಕಿ, ಚುನಾವಣಾ ಆಯೋಗ ಆರ್‌ಆರ್ ನಗರ ಕ್ಷೇತ್ರದ ಚುನಾವಣೆಯನ್ನು ಮುಂದೂಡಿತ್ತು. ಇದಾದ ಕೆಲವೇ ದಿನಗಳ ನಂತರ ಚುನಾವಣೆ ನಡೆದು (ಮೇ 28) ಕಾಂಗ್ರೆಸ್‍ನಿಂದ ಮುನಿರತ್ನ ಗೆದ್ದಿದ್ದರೂ, ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಲು ನಡೆದ ರಾಜಕೀಯ ಆಟದಲ್ಲಿ ಮುನಿರತ್ನ ಬಿಜೆಪಿಗೆ ಗುಳೆ ಹೋಗಿದ್ದರು. ಆಗ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ ಶಾಸಕರಲ್ಲಿ ಮುನಿರತ್ನ ಕೂಡಾ ಒಬ್ಬರು. ಇದರಿಂದಾಗಿ ಇಲ್ಲಿ ಮತ್ತೆ ಚುನಾವಣೆ ನಡೆಯುತ್ತಿದೆ.

88% ಸಾಕ್ಷರತೆಯಿರುವ ಇಲ್ಲಿ ಸಾಮಾನ್ಯವಾಗಿ ಮಧ್ಯಮವರ್ಗದ ಮತ್ತು ಬಡಜನ ಹೆಚ್ಚಿದ್ದಾರೆ ಹಾಗು ಸ್ಲಂಗಳೇ ಅತ್ಯಧಿಕವಾಗಿರುವ ಕ್ಷೇತ್ರ ಇದಾಗಿದೆ. ಸಾಮಾನ್ಯವಾಗಿ ಪ್ರತಿ ಚುನಾವಣೆಯಲ್ಲಿ 50% ಆಸುಪಾಸಿನಲ್ಲೇ ಮತದಾನ ಆಗಿರುವ ಈ ಕ್ಷೇತ್ರದಲ್ಲಿ ಈ ಬಾರಿ ಕೊರೊನಾ ಭಯದಿಂದ 30% ರಿಂದ 35% ದಷ್ಟು ಆಸುಪಾಸು ಮತ ಚಲಾವಣೆಯಾಗಬಹುದು ಎನ್ನುತ್ತಾರೆ ರಾಜಕೀಯ ಪರಿಣಿತರು. ಮೊದಲು ಉತ್ತರಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿಕೊಂಡಿತ್ತಾದರೂ ಕ್ಷೇತ್ರ ವಿಭಜನೆಯ ನಂತರ ಆರ್‌ಆರ್ ನಗರ ಸ್ವತಂತ್ರ ವಿಧಾನಸಭಾ ಕ್ಷೇತ್ರವಾಗಿದೆ.

ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಕುಸುಮಾ ಹನುಮಂತರಾಯಪ್ಪ ಅವರನ್ನು ಆಯ್ಕೆಮಾಡಿಕೊಂಡು ಪ್ರಚಾರದಲ್ಲಿ ತೊಡಗಿಕೊಂಡಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಯಾರೆಂಬ ಗೊಂದಲಗಳು ಮುಗಿದು ಮುನಿರತ್ನ ಅವರಿಗೆ ಕೊನೆಗೂ ಟಿಕೆಟ್ ನೀಡಿದೆ. ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬಣ ಮತ್ತು ಆರೆಸ್ಸೆಸ್ ನಿಯಂತ್ರಿತ ಬಿಎಲ್ ಸಂತೋಷ್ ಬಣಗಳ ನಡುವೆ ಮುನಿರತ್ನ ಅವರಿಗೆ ಟಿಕೆಟ್ ಕೊಡುವುದೆ ಬೇಡವೆ ಎನ್ನುವ ಬಗ್ಗೆ ಮಂಗಳವಾರ ಸಂಜೆಯವರೆಗೂ ಕುತೂಹಲವಿತ್ತು. ಯಡಿಯೂರಪ್ಪನವರು ತಮ್ಮ ಅಭ್ಯರ್ಥಿಯಾಗಿ ಮುನಿರತ್ನರನ್ನು ಶಿಫಾರಸ್ಸು ಮಾಡಿದ್ದರೆ, ಬಿಎಲ್ ಸಂತೋಷ್ ಬಣ ಮುನಿರಾಜು ಗೌಡರನ್ನು ಶಿಫಾರಸ್ಸು ಮಾಡಿದ್ದವು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಬಿಜೆಪಿಯ ಇಬ್ಬರೂ ಟಿಕೆಟ್ ಆಕಾಂಕ್ಷಿಗಳನ್ನು ಕರೆಸಿ, ಯಾರಿಗೆ ನಾಮಪತ್ರ ಒಲಿದರೂ ಪಕ್ಷಕ್ಕಾಗಿ ದುಡಿಯಬೇಕು ಎಂಬ ಕಿವಿಮಾತು ಹೇಳಿ ರಾಜಿಗೆ ಪ್ರಯತ್ನಪಟ್ಟಿರುವ ಸುದ್ದಿಯೂ ಹೊರಹೊಮ್ಮಿತ್ತು.

ಮುನಿರತ್ನ ಕಾಂಗ್ರೆಸ್‌ನಲ್ಲಿ ಶಾಸಕನಾಗಿದ್ದಾಗ ಬಿಬಿಎಂಪಿಯ ಬಿಜೆಪಿ ಕಾರ್ಪೋರೇಟರ್‌ಗಳಿಗೆ ಇನ್ನಿಲ್ಲದಂತೆ ಕಾಡಿದ್ದರು ಎನ್ನುವ ಆರೋಪ ಕೂಡಾ ಇದ್ದವು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮುನಿರಾಜು ಗೌಡ ಪಿ.ಎಂ 82,572 ಮತಗಳನನ್ನು ಗಳಿಸಿದ್ದರು. ಆಗ ಮುನಿರತ್ನ 1,08,064 ಮತಗಳನ್ನೂ, ಜೆಡಿಎಸ್ ಅಭ್ಯರ್ಥಿ ಜಿ ಎಚ್ ರಾಮಚಂದ್ರ 60,360 ಮತಗಳನ್ನು ಗಳಿಸಿದ್ದರು. ಬಿಜೆಪಿಯಿಂದ ಮುನಿರತ್ನ ಅವರಿಗೆ ಕೊಟ್ಟರೆ ಬಿಜೆಪಿ ಕಾರ್ಪೋರೇಟರ್‌ಗಳ ಕೆಂಗಣ್ಣಿಗೆ ಗುರಿಯಾಗುವ ಭಯ ಬಿಜೆಪಿ ಹೈಕಮಾಂಡ್ ಗಿತ್ತಾದರೂ ಕೊನೆಗೂ ಯಡಿಯೂರಪ್ಪರ ಕೈಮೇಲಾಗಿದೆ. ಅಷ್ಟೇ ಅಲ್ಲದೆ ಬಿಜೆಪಿಯು ಅತೃಪ್ತರಿಗೆ ಜೆಡಿಎಸ್ ಟಿಕಟ್ ನೀಡುತ್ತದೆ ಎನ್ನುವ ವದಂತಿಗೂ ತೆರೆಬಿದ್ದಿದೆ.

ಜೆಡಿಎಸ್ ಬಿಜೆಪಿಯ ಅಭ್ಯರ್ಥಿಯ ಆಧಾರದಲ್ಲಿ ತನ್ನ ಅಭ್ಯರ್ಥಿ ಆಯ್ಕೆ ಮಾಡುತ್ತದೆ ಎಂಬ ವದಂತಿ ಹರಡಿತ್ತು. ಒಂದು ವೇಳೆ ಬಿಜೆಪಿ ಮುನಿರಾಜು ಅವರಿಗೆ ಟಿಕೆಟ್ ನೀಡಿದರೆ ಜೆಡಿಎಸ್‍ನಿಂದ ಮುನಿರತ್ನ ಅವರಿಗೆ ಟಿಕೆಟ್ ನೀಡಲು ತುದಿಗಾಲಲ್ಲಿ ನಿಂತಿದೆ, ಅದಕ್ಕಾಗಿಯೇ ಜೆಡಿಎಸ್ ತನ್ನ ಅಭ್ಯರ್ಥಿಯ ಹೆಸರು ಘೋಷಿಸಿರಲಿಲ್ಲ ಎನ್ನಲಾಗಿತ್ತು. ಇದೀಗ ಅದಕ್ಕೆ ತೆರೆಬಿದ್ದಿದ್ದು ವಿ. ಕೃಷ್ಣಮೂರ್ತಿ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ “ನನ್ನ ಹಾಗೂ ಮುನಿರತ್ನ ಮಧ್ಯೆ ಸ್ನೇಹ ಇದೆ. ಆದರೆ ಸ್ನೇಹವೇ ಬೇರೆ, ಚುನಾವಣೆ ಬೇರೆ. ನಾನು ಮತ್ತು ಮುನಿರತ್ನ ಸಿನಿಮಾ ಕ್ಷೇತ್ರದವರು. ಹೀಗಾಗಿ ನಮ್ಮ ನಡುವಿನ ಸ್ನೇಹ ಚುನಾವಣೆ ಸಂದರ್ಭದಲಿ ಅನ್ವಯಿಸಲ್ಲ” ಎಂದು ಹೇಳಿದ್ದಾರೆ.

ಈ ಬಾರಿಯ ವಿಶೇಷವೇನೆಂದರೆ 2008ರಲ್ಲಿ ಜೆಡಿಎಸ್‍ನಿಂದ ಸ್ಪರ್ಧೆ ಮಾಡಿದ್ದ ಹನುಮಂತರಾಯಪ್ಪ ಅವರ ಮಗಳು ಕುಸುಮಾ ಕಾಂಗ್ರೆಸ್ ಅಭ್ಯರ್ಥಿ! ಇದು ಕಾಂಗ್ರೆಸ್‍ಗೆ ತನ್ನ ಓಟಿನ ಬೇಟೆಯನ್ನು ಮತ್ತಷ್ಟು ಹೆಚ್ಚಿಸಲು ಉಪಯೋಗ ಆಗಬಹುದು ಎಂಬ ಲೆಕ್ಕಾಚಾರ ಕೂಡಾ ಇದೆ. ಅಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ನಿರ್ಣಾಯಕವಾಗಿದ್ದು, ಕುಸುಮಾ ಅವರು ತಮ್ಮ ಇತ್ತೀಚೆಗಿನ ಸಂದರ್ಶನದಲ್ಲಿ ‘ಒಕ್ಕಲಿಗ ಹೆಣ್ಣು ಮಗಳಾಗಿರುವುದರ ಬಗ್ಗೆ ಹೆಮ್ಮಯಿದೆ’ ಎಂದು ಕೂಡ ಹೇಳಿದ್ದರು.

ಅಲ್ಲದೆ ಕುಸುಮ ಅವರು ದಿವಂಗತ ಜಿಲ್ಲಾಧಿಕಾರಿ ಡಿಕೆ ರವಿಯವರ ಪತ್ನಿಯಾಗಿದ್ದು, ರವಿ ಅವರ ಹೆಸರಿನಲ್ಲಿ ಈ ಹಿಂದೆ ಬಿಜೆಪಿ ರಾಜಕೀಯ ಮಾಡಿತ್ತು. ಅಷ್ಟೇ ಅಲ್ಲದೆ ಸಂಸದೆ ಶೋಭ ಕರಂದ್ಲಾಜೆ, ಕುಸುಮಾ ತಮ್ಮ ಪತಿಯ ಹೆಸರನ್ನು ಬಳಸಬಾರದು ಎಂದು ಡಿಕೆ ರವಿಯ ಬಗೆಗಿನ ಚರ್ಚೆಯನ್ನು ಈಗಾಗಲೇ ಮತ್ತೆ ಮುನ್ನಲೆಗೆ ತಂದಿದ್ದಾರೆ. ಅಕ್ಟೋಬರ್ 16 ರೊಳಗೆ ನಾಮಪತ್ರ ಸಲ್ಲಿಸಬೇಕಾಗಿದ್ದು, ಅ.19 ನಾಮಪತ್ರ ವಾಪಾಸು ಪಡೆಯಲು ಕೊನೆಯ ದಿನಾಂಕವಾಗಿದೆ. ಒಟ್ಟಿನಲ್ಲಿ ಪಕ್ಷಾಂತರದಿಂದ ಸೃಷ್ಟಿಯಾಗಿರುವ ಈ ಉಪಚುನಾವಣೆ ಪ್ರತಿಷ್ಟೆಯ ಕಣವಾಗಿದ್ದು ಇಡೀ ರಾಜ್ಯದ ಗಮನ ಸೆಳೆದಿರುವುದು ನಿಜ.


ಇದನ್ನೂ ಓದಿ: ಉಪಚುನಾವಣೆ: ಆರ್‌.ಆರ್‌ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ರವಿ ಪತ್ನಿ ಕುಸುಮಾ-ಸಿದ್ದರಾಮಯ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....