“ರಾಯ್ ಬರೇಲಿಯನ್ನು ನನ್ನ ಹೊಸ ಕರ್ಮಭೂಮಿಯನ್ನಾಗಿ ಸ್ವೀಕರಿಸಿದ್ದೇನೆ. ಏಕೆಂದರೆ, ಅದು ನನ್ನ ಇಬ್ಬರು ತಾಯಂದಿರ ಕೆಲಸದ ಸ್ಥಳವಾಗಿದೆ” ಎಂದು ನಾಮಪತ್ರ ಸಲ್ಲಿಸಿದ ನಂತರ ನಡೆದ ಮೊದಲ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದರು.
ಸೋಮವಾರ ಮಹಾರಾಜಗಂಜ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ನನಗೆ ಇಬ್ಬರು ತಾಯಂದಿರು, ನನ್ನನ್ನು ರಕ್ಷಿಸಿದ ಸೋನಿಯಾ ಗಾಂಧಿ ಮತ್ತು ಇಂದಿರಾ ಗಾಂಧಿ, ರಾಯ್ ಬರೇಲಿ ನನ್ನ ಇಬ್ಬರು ತಾಯಂದಿರ ಕೆಲಸದ ಸ್ಥಳವಾಗಿದೆ. ಅದಕ್ಕಾಗಿಯೇ ನಾನು ಚುನಾವಣೆಗೆ ಸ್ಪರ್ಧಿಸಲು ಇಲ್ಲಿಗೆ ಬಂದಿದ್ದೇನೆ” ಎಂದರು.
“ರಾಯ್‌ಬರೇಲಿಯೊಂದಿಗೆ ನಮ್ಮ ಕುಟುಂಬಕ್ಕೆ 100 ವರ್ಷಗಳಷ್ಟು ಹಳೆಯ ಸಂಬಂಧವಿದೆ, ಈ ಚುನಾವಣೆಯು ಇತಿಹಾಸದಲ್ಲಿ ಸಂವಿಧಾನವನ್ನು ರಕ್ಷಿಸಲು ಹೋರಾಡುತ್ತಿರುವ ಮೊದಲ ಹೋರಾಟವಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನವನ್ನು ಹರಿದು ಹಾಕುತ್ತದೆ, ಬಡವರ ಎಲ್ಲಾ ಮಾರ್ಗಗಳನ್ನು ಮುಚ್ಚುತ್ತದೆ. ಅವರು ಅದಾನಿ ಮತ್ತು ಅಂಬಾನಿಗಾಗಿ ಸರ್ಕಾರ ರಚಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಟ್ಟುಕೊಂಡ ರಾಹುಲ್ ಗಾಂಧಿ, ‘”ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಅವರು 22 ಕೋಟ್ಯಾಧಿಪತಿಗಳಿಗೆ 16 ಲಕ್ಷ ಕೋಟಿ ರೂ.ಗಳನ್ನು ನೀಡಿದ್ದಾರೆ. ಈ ಹಣ 70 ಕೋಟಿ ಜನರ ಆದಾಯಕ್ಕೆ ಸಮಾನವಾಗಿದೆ. ಈ ಹೋರಾಟ ಬಡವರ ರಕ್ಷಣೆಗಾಗಿ ಸರ್ಕಾರ ರಚನೆಯಾದರೆ ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಪ್ರತಿಯೊಬ್ಬ ಮಹಿಳೆಯ ಖಾತೆಗೆ 8500 ರೂಪಾಯಿಗಳನ್ನು ಜಮಾ ಮಾಡಲಾಗುವುದು” ಎಂದರು.
“ಪ್ರಧಾನಿ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ.ಇಂಡಿಯಾ ಅಲಯನ್ಸ್ ಸರ್ಕಾರ ರಚನೆಯಾದರೆ ಪ್ರತಿಯೊಬ್ಬ ಯುವಕನಿಗೆ ಶಿಷ್ಯವೇತನ ಸಿಗುತ್ತದೆ. ಈ ಮೂಲಕ ಮೊದಲ ಉದ್ಯೋಗ ಗ್ಯಾರಂಟಿ’ ಎಂದು ರಾಹುಲ್ ಹೇಳಿದರು.
ಹೊಸ ಸರ್ಕಾರ ಗುತ್ತಿಗೆದಾರ ವ್ಯವಸ್ಥೆಯನ್ನು ಕೊನೆಗೊಳಿಸಲಿದೆ ಎಂದು ಅವರು ಘೋಷಿಸಿದರು. ಸಾರ್ವಜನಿಕ ವಲಯವೇ ಆಗಿರಲಿ ಅಥವಾ ಸರ್ಕಾರಿ ಇಲಾಖೆಗಳೇ ಆಗಿರಲಿ, ಸರ್ಕಾರ ರಚನೆಯಾದ ಕೂಡಲೇ ಗುತ್ತಿಗೆದಾರರ ವ್ಯವಸ್ಥೆ ಕೊನೆಗೊಳ್ಳಲಿದೆ ಎಂದರು.
ಈ ವೇಳೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸಾರ್ವಜನಿಕ ಸಭೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಬ್ಬರೂ ಒಟ್ಟಿಗೆ ವೇದಿಕೆಯಲ್ಲಿದ್ದದ್ದು ನೆರೆದಿದ್ದವರ ಉತ್ಸಾಹವನ್ನು ಹೆಚ್ಚಿಸಿತು.
ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಿದ್ದಂತೆ ಮತ್ತೊಂದು ರ್ಯಾಲಿಯಲ್ಲಿ, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವೇದಿಕೆಯ ಮುಂಭಾಗದಲ್ಲಿ ತಮ್ಮೊಂದಿಗೆ ಸೇರಲು ಆಹ್ವಾನಿಸಿದರು. ಆಕೆಯ ಭುಜದ ಮೇಲೆ ಕೈಯಿಟ್ಟು ಪ್ರೀತಿಯಿಂದ ಆಕೆಯ ಮುಖವನ್ನು ಮುಟ್ಟಿ, ರಾಯ್ ಬರೇಲಿ ಪ್ರಚಾರಕ್ಕಾಗಿ ಆಕೆಯ ಸಮರ್ಪಣೆಗಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.
“ನಾನು ಚುನಾವಣೆಗಾಗಿ ದೇಶಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಮತ್ತು ನನ್ನ ಸಹೋದರಿ ಇಲ್ಲಿ ತನ್ನ ಸಮಯವನ್ನು ವಿನಿಯೋಗಿಸುತ್ತಿದ್ದಾಳೆ. ಇದಕ್ಕಾಗಿ ಆಕೆಗೆ ದೊಡ್ಡ ಧನ್ಯವಾದಗಳು” ಎಂದು ಅವರು ಹೇಳಿದರು.
ಯಾವಾಗ ಮದುವೆಯಾಗುತ್ತೀರಿ ಎಂದು ಗುಂಪಿನಲ್ಲಿದ್ದವರು ಕೇಳಿದ ಪ್ರಶ್ನೆಯತ್ತ ಗಮನ ಹರಿಸಿದ ರಾಹುಲ್, ಸ್ವಲ್ಪ ಸಮಯದ ನಂತರ, “ಶೀಘ್ರದಲ್ಲೇ ಅದನ್ನು ಪರಿಹರಿಸಲಾಗುವುದು” ಎಂದು ಸಭಿಕರಿಗೆ ಭರವಸೆ ನೀಡಿದರು. “ಅಬ್ ಜಲ್ದಿ ಕರ್ನಿ ಪಡೆಗಿ” ಎಂದು ಹಿಂದಿಯಲ್ಲಿ ಹೇಳಿದರು.
ಇದನ್ನೂ ಓದಿ; ಅದಾನಿ-ಅಂಬಾನಿ ಟೆಂಪೋದಲ್ಲಿ ಹಣ ಕಳುಹಿಸಿದ್ದರೆ ತನಿಖೆಗೆ ಆದೇಶಿಸಿ: ಪ್ರಧಾನಿಗೆ ಖರ್ಗೆ ಸವಾಲು


