Homeಚಳವಳಿಸಂವಿಧಾನದ ಚೈತನ್ಯವನ್ನು ಉಳಿಸೋಣ.. ಇದು ಹೊಸ ದಶಕಕ್ಕೆ ನಮ್ಮ ಸಂಕಲ್ಪ: ರಘುರಾಮ್ ರಾಜನ್

ಸಂವಿಧಾನದ ಚೈತನ್ಯವನ್ನು ಉಳಿಸೋಣ.. ಇದು ಹೊಸ ದಶಕಕ್ಕೆ ನಮ್ಮ ಸಂಕಲ್ಪ: ರಘುರಾಮ್ ರಾಜನ್

ಸತ್ಯ, ಸ್ವಾತಂತ್ರ‍್ಯ ಮತ್ತು ನ್ಯಾಯಗಳು ಕೇವಲ ಉನ್ನತ ಶಬ್ದಗಳು ಮಾತ್ರವಲ್ಲ; ತ್ಯಾಗಕ್ಕೂ ಅರ್ಹವಾದ ಮೌಲ್ಯಗಳು, ಆದರ್ಶಗಳು ಎಂದು ತಾವು ನಂಬಿರುವುದಾಗಿ ಈ ಜನರು ತಮ್ಮ ಕೃತ್ಯಗಳಿಂದ ನಮಗೆ ತೋರಿಸಿಕೊಡುತ್ತಿದ್ದಾರೆ.

- Advertisement -
- Advertisement -

ರಘುರಾಮ್ ರಾಜನ್, ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್

ಅನುವಾದ: ನಿಖಿಲ್ ಕೋಲ್ಪೆ

“ಇತ್ತೀಚಿನ ದಿನಗಳಲ್ಲಿ ಭಾರತದಿಂದ ಹೊರಬೀಳುತ್ತಿರುವ ಸುದ್ದಿಗಳು ಚಿಂತೆಗೀಡುಮಾಡುವಂತವುಗಳು. ಮುಸುಕುಧಾರಿಗಳ ಗುಂಪೊಂದು ದೇಶದ ಮುಂಚೂಣಿಯಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ನುಗ್ಗಿತು. ಗುಂಪಿನವರು ಪೊಲೀಸರ ಯಾವುದೇ ಮಧ್ಯಪ್ರವೇಶವೂ ಇಲ್ಲದೇ, ಗಂಟೆಗಳ ಕಾಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸುತ್ತಾ ದಾಂಧಲೆ ಎಬ್ಬಿಸಿದರು. ದಾಳಿಗೆ ಒಳಗಾದವರು ವಿದ್ಯಾರ್ಥಿ ಕಾರ್ಯಕರ್ತರು ಎಂಬುದು ಸ್ಪಷ್ಟವಾದರೂ, ಸರಕಾರದಿಂದ ನೇಮಕವಾದ ಆಡಳಿತವಾಗಲೀ, ಪೊಲೀಸರಾಗಲೀ, ಅವರಿಗೆ ರಕ್ಷಣೆ ನೀಡಲು ಏನನ್ನೂ ಮಾಡಲಿಲ್ಲ. ಇದು ನಡೆದದ್ದು ಸಾಮಾನ್ಯವಾಗಿ ಎಲ್ಲರೂ, ಯಾವಾಗಲೂ ಕಟ್ಟೆಚ್ಚರದಲ್ಲಿರುವ ದೇಶದ ರಾಜಧಾನಿಯಲ್ಲಿ. ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಕೂಡಾ ವಸ್ತುಶಃ ರಣಾಂಗಣಗಳಾಗಿರುವುದು- ಯೋಜಿತವಾಗಿ ಅಲ್ಲದಿದ್ದರೂ, ನಿರ್ಲಕ್ಷದಿಂದಲಾದರೂ ಸರಕಾರವು ಭಿನ್ನಮತವನ್ನು ದಮನಿಸುತ್ತಿದೆ ಎಂಬ ಆರೋಪಕ್ಕೆ ಸಾಕಷ್ಟು ಪುಷ್ಟಿ ನೀಡುತ್ತದೆ.

ರಘುರಾಂ ರಾಜನ್

ಇದಕ್ಕಾಗಿ ನಾಯಕತ್ವವನ್ನು ದೂರುವುದು ಸುಲಭ. ಆದರೆ, ನಮ್ಮಂತಹ ಹೆಮ್ಮೆಯ ಮತ್ತು ಬಹುಹಂತದ ಪ್ರಜಾಪ್ರಭುತ್ವದಲ್ಲಿ ನಾವು, ಸಾರ್ವಜನಿಕರು ಕೂಡಾ ಜವಾಬ್ದಾರಿ ಹೊರಬೇಕಾಗುತ್ತದೆ. ಕೊನೆಗೂ, ಅವರ ವಿಭಜನಕಾರಿ ಪ್ರಣಾಳಿಕೆಯನ್ನು ಸಮ್ಮತಿಸಿ, ಈ ನಾಯಕರನ್ನು ಅಧಿಕಾರಕ್ಕೇರಿಸಿದವರು ಇದೇ ಸಾರ್ವಜನಿಕರಾಗಿದ್ದು, ಅದನ್ನೇ ಈ ನಾಯಕರುಗಳು ಮುನ್ನುಗ್ಗಲು ಆದೇಶ ಎಂದು ಭಾವಿಸಿದ್ದಾರೆ. ಅವರು ಆರ್ಥಿಕ ಕಾರ್ಯಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುತ್ತಾರೆ ಎಂದು ನಮಲ್ಲಿ ಕೆಲವರು ಆಶಿಸಿದ್ದರು. ನಮ್ಮದೇ ಪೂರ್ವಗ್ರಹವನ್ನು ಕೆರೆದು ಉದ್ರೇಕಿಸುವ ಅವರ ಭಾಷಣಗಳನ್ನು ನಮ್ಮಲ್ಲಿ ಕೆಲವರು ಒಪ್ಪಿಕೊಂಡೆವು. ನಮ್ಮಲ್ಲಿ ಕೆಲವರು ರಾಜಕೀಯವು ಬೇರಾರದ್ದೋ ಸಮಸ್ಯೆ ಎಂದು ಭಾವಿಸಿ ನಿರ್ಲಿಪ್ತವಾಗಿದ್ದೆವು. ಕೆಲವರನ್ನು ನಿರ್ದಯವಾಗಿ ದಂಡಿಸಿ, ಉದಾಹರಣೆಗಳನ್ನಾಗಿ ಮಾಡಲಾಗಿರುವುದರಿಂದ ಟೀಕಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ನಮಲ್ಲಿ ಕೆಲವರು ಭಯಪಟ್ಟೆವು. ಕೊನೆಗೂ, ಪ್ರಜಾಪ್ರಭುತ್ವವು ಕೇವಲ ಒಂದು ಹಕ್ಕು ಮಾತ್ರವಲ್ಲ; ಅದೊಂದು ಜವಾಬ್ದಾರಿ ಕೂಡಾ ಹೌದು- ಚುನಾವಣೆಯ ದಿನ ಮಾತ್ರವಲ್ಲ, ಪ್ರತಿದಿನವೂ ನಮ್ಮ ಗಣರಾಜ್ಯದ ಪಾಲಕರಾಗಿರಬೇಕಾದ ಹೊರೆ.

ಅದೃಷ್ಟವಶಾತ್, ಭಾರತದಿಂದ ಹೊರಹೊಮ್ಮುತ್ತಿರುವ ಸುದ್ದಿಗಳು ಆಶಾದಾಯಕವೂ ಆಗಿವೆ. ವೈವಿಧ್ಯಮಯ ನಂಬಿಕೆಗಳ ಯುವಜನರು, ಹಿಂದೂಗಳು ಮತ್ತು ಮುಸ್ಲಿಮರು ರಾಷ್ಟ್ರಧ್ವಜದ ಹಿಂದೆ ಕೈಯಲ್ಲಿ ಕೈಹಾಕಿ ಸಾಗುತ್ತಾ, ರಾಜಕೀಯ ನಾಯಕರು ತಮ್ಮ ಸ್ವಂತ ಲಾಭಕ್ಕಾಗಿ ಪ್ರಚೋದಿಸುತ್ತಿರುವ ಕೃತಕ ವಿಭಜನೆಗಳನ್ನು ತಿರಸ್ಕರಿಸುತ್ತಿರುವಾಗ- ಅದು ನಮ್ಮ ಸಂವಿಧಾನದ ಬೆಳಕು ಇನ್ನೂ ಕೂಡಾ ಉಜ್ವಲವಾಗಿ ಬೆಳಗುತ್ತಿದೆ ಎಂಬುದನ್ನು ತೋರಿಸುತ್ತದೆ.

ಸರಕಾರಿ ಸೇವೆಯಲ್ಲಿದ್ದ ಅಧಿಕಾರಿಗಳು, ತಾವು ವಿಶ್ವಸನೀಯವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿಂದ ತಮ್ಮ ಕನಸಿನ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ- ನಮಗೆ ಸ್ವಾತಂತ್ರ‍್ಯ ದೊರಕಿಸಿಕೊಡಲು ಕೆಲವು ತಲೆಮಾರುಗಳು ಮಾಡಿರುವ ತ್ಯಾಗಗಳು ಇನ್ನೂ ಕೂಡಾ ನಮ್ಮನ್ನು ಪ್ರೇರೇಪಿಸಬಲ್ಲವು ಎಂಬುದಕ್ಕೆ ಜೀವಂತ ಸಾಕ್ಷ್ಯವಾಗಿದೆ.

ಚುನಾವಣಾಧಿಕಾರಿಯೊಬ್ಬರು, ತನ್ನ ಕುಟುಂಬಕ್ಕೆ ಇರುವ ಕಿರುಕುಳದ ಭಯದ ಹೊರತಾಗಿಯೂ ನಿಷ್ಪಕ್ಷಪಾತಿಯಾಗಿ ಕೆಲಸಮಾಡಿದಾಗ, ಪ್ರಾಮಾಣಿಕತೆ ಮತ್ತು ದೃಢತೆಗಳು ಇನ್ನೂ ಸಂಪೂರ್ಣವಾಗಿ ಬೆದರಿಲ್ಲ ಎಂಬುದನ್ನು ಸಿದ್ಧಪಡಿಸುತ್ತದೆ. ತಮ್ಮ ಬಹಳಷ್ಟು ಸಹೋದ್ಯೋಗಿಗಳು ಸರಕಾರ ಒತ್ತಡಕ್ಕೆ ಶರಣಾಗಿರುವ ಹೊತ್ತಿನಲ್ಲಿ, ಮಾಧ್ಯಮದ ಕೆಲವು ಜನರು ಸತ್ಯವನ್ನು ಹೊರತರಲು ದಣಿವರಿಯದೇ ದುಡಿಯುತ್ತಿರುವಾಗ- ನಮ್ಮ ಗಣರಾಜ್ಯದ ಕರ್ತವ್ಯಶೀಲ ಪ್ರಜೆಯಾಗಿ ಹೇಗಿರಬೇಕು ಎಂಬುದನ್ನು ಅವರು ತೋರಿಸಿಕೊಡುತ್ತಿದ್ದಾರೆ.

ಚುನಾವಣಾಧಿಕಾರಿ ಅಶೋಕ್‌ ಲಾವಾಸ

ಬಾಲಿವುಡ್ ನಟಿಯೊಬ್ಬರು ತನ್ನ ಇತ್ತೀಚಿನ ಚಲನಚಿತ್ರದ ಯಶಸ್ಸನ್ನು ಅಪಾಯಕ್ಕೆ ತಳ್ಳಿಯೂ, ಜೆಎನ್‌ಯು ದಾಳಿಯಲ್ಲಿ ಹಲ್ಲೆಗೀಡಾದವರನ್ನು ಭೇಟಿಯಾಗುವುದರ ಮೂಲಕ ಮೌನ ಪ್ರತಿಭಟನೆ ದಾಖಲಿಸುತ್ತಾರೆ ಎಂದಾದರೆ- ಅವರು, ದೇಶದಲ್ಲಿ ಯಾವುದೆಲ್ಲಾ ನಿಜವಾಗಿಯೂ ಅಪಾಯದಲ್ಲಿದೆ ಎಂಬುದನ್ನು ಯೋಚಿಸಿ ಲೆಕ್ಕಹಾಕುವಂತೆ ನಮ್ಮನ್ನು ಪ್ರೇರೇಪಿಸುತ್ತಾರೆ.

ಇವುಗಳಿಂದ ನಾವು ಪ್ರೇರಿತರಾಗದಿದ್ದರೆ, ಖಂಡಿತವಾಗಿಯೂ ನಾವು ಸಿನಿಕರಾಗಿರಲೇಬೇಕು. ಸತ್ಯ, ಸ್ವಾತಂತ್ರ‍್ಯ ಮತ್ತು ನ್ಯಾಯಗಳು ಕೇವಲ ಉನ್ನತ ಶಬ್ದಗಳು ಮಾತ್ರವಲ್ಲ; ತ್ಯಾಗಕ್ಕೂ ಅರ್ಹವಾದ ಮೌಲ್ಯಗಳು, ಆದರ್ಶಗಳು ಎಂದು ತಾವು ನಂಬಿರುವುದಾಗಿ ಈ ಜನರು ತಮ್ಮ ಕೃತ್ಯಗಳಿಂದ ನಮಗೆ ತೋರಿಸಿಕೊಡುತ್ತಿದ್ದಾರೆ. ಮಹಾತ್ಮಾ ಗಾಂಧಿಯವರು ಜೀವಕೊಟ್ಟ ಭಾರತಕ್ಕಾಗಿ ಇಂದು ಹೋರಾಡುತ್ತಿರುವವರು ಅವರೇ. ಅವರು ಸ್ವಾತಂತ್ರ‍್ಯ ಗಳಿಸಲು ಹೋರಾಡುತ್ತಿಲ್ಲ; ಬದಲಾಗಿ, ಆ ಸ್ವಾತಂತ್ರ‍್ಯವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. “ಸ್ವಾತಂತ್ರ‍್ಯದ ಸ್ವರ್ಗದಲ್ಲಿ, ಓ ನನ್ನ ದೇವರೇ, ನನ್ನ ದೇಶವು ಎದ್ದೇಳಲಿ” ಎಂಬ ಕವಿ ರವೀಂದ್ರನಾಥ ಠಾಗೋರರ ಕನಸು ಇನ್ನು ಮುಂದೆಯೂ ನನಸಾಗಿ ಉಳಿಯಲಿದೆ ಎಂಬ ಆಶಾವಾದವನ್ನು ಅವರು ನಮಗೆ ನೀಡುತ್ತಿದ್ದಾರೆ.

ಜನವರಿ 26ರಂದು ಭಾರತವು ಬಹಳಷ್ಟು ಆದರ್ಶಗಳು ಮತ್ತು ಉದಾರವಾದವನ್ನು ತುಂಬಿಕೊಂಡಂತಹ ಸಂವಿಧಾನವನ್ನು ಪಡೆದುಕೊಂಡುದರ 70ನೇ ವರ್ಷಾಚರಣೆಯಾಗಿದೆ. ನಮ್ಮ ಸಂವಿಧಾನವು ಪರಿಪೂರ್ಣವಾಗಿರಲಿಲ್ಲ. ಆದರೆ, ವಿಚ್ಛಿದ್ರಕಾರಿ ವಿಭಜನೆಯ ಭಯಾನಕತೆಯಿಂದ ಹೊರಬಂದು, ಭಾರತವು ಹೆಚ್ಚು ಏಕೀಕೃತವಾದ ಭವಿಷ್ಯವನ್ನು ಹೊಂದಿರಬೇಕು ಎಂದು ಬಯಸಿದ್ದಂತಹ ಸುಶಿಕ್ಷಿತರಾದ ಪುರುಷರು ಮತ್ತು ಮಹಿಳೆಯರು ಅದನ್ನು ರೂಪಿಸಿದರು. ಭಾರತವು ಬಹಳಷ್ಟು ಒಳ್ಳೆಯದನ್ನು ಮಾಡಲು ಸಮರ್ಥವಾಗಿದೆ; ಆದರೆ, ಅದು ಭಯಾನಕವಾದ ಸ್ವಯಂವಿನಾಶಕಾರಿ ಶಕ್ತಿಗಳನ್ನೂ ಹುಟ್ಟುಹಾಕಬಹುದು ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದರು. ಇದನ್ನು ನಮ್ಮ ಕೆಲವು ಈಗಿನ ನಾಯಕರು ಅರ್ಥಮಾಡಿಕೊಂಡರೆ ಒಳ್ಳೆಯದು. ಆದುದರಿಂದಲೇ ಅವರು ಸಮಾನ ಉದ್ದೇಶ ಹಾಗೂ ಆತ್ಮಗೌರವಗಳ ಚೈತನ್ಯದ ಮೂಲಕ ನಮ್ಮೊಳಗಿನ ಅತ್ಯುತ್ತಮವಾದುದನ್ನು ಹೊರಹೊಮ್ಮಿಸಬಲ್ಲ ದಾಖಲೆಯಾಗಿರುವ ಸಂವಿಧಾನವನ್ನು ರೂಪಿಸಲೆತ್ನಿಸಿದರು. ನಮ್ಮೊಳಗಿನ ಪ್ರತಿಯೊಬ್ಬರಲ್ಲೂ ಈ ಚೈತನ್ಯವು ಉರಿಯುತ್ತಿರಲಿ ಎಂಬ ಮರುಸಂಕಲ್ಪವನ್ನು ಮಾಡುವುದಕ್ಕಿಂತ ಹೆಚ್ಚಿನ ನಿರ್ಧಾರ ಈ ಹೊಸ ದಶಕದಲ್ಲಿ ಬೇರೇನಿದೆ? ಈ ಸಂಕಷ್ಟದ ಕಾಲದಲ್ಲಿ ನಮ್ಮ ದೇಶದ ನಿರ್ಮಾತೃಗಳು ಸಂಕಲ್ಪಿಸಿದ್ದಂತೆ ಭಾರತವನ್ನು ಸಹಿಷ್ಣುತೆ ಮತ್ತು ಗೌರವದ ಉಜ್ವಲ ಉದಾಹರಣೆಯನ್ನಾಗಿ ರೂಪಿಸಲು ಜೊತೆಯಾಗಿ ಕೆಲಸ ಮಾಡೋಣ. ಅಸಹನೆಯ ಪ್ರಪಂಚದಲ್ಲಿ ದಾರಿದೀಪವಾಗೋಣ. ಹೊಸ ದಶಕದಲ್ಲಿ ಇದುವೇ ನಮ್ಮ ಕಾರ್ಯವಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...