ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ 25 ಲಕ್ಷ ಅಥವಾ ರಾಜ್ಯದ ಒಟ್ಟು ಮತದಾರರಲ್ಲಿ ಶೇಕಡ 12ರಷ್ಟು ‘ನಕಲಿ ಮತಗಳು’ ಚಲಾವಣೆಯಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಬುಧವಾರ (ನ.5) ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ ಅವರು, ಕಾಂಗ್ರೆಸ್ ಗೆಲುವನ್ನು ಸೋಲಾಗಿ ಪರಿವರ್ತಿಸಲು ‘ವ್ಯವಸ್ಥಿತ ಷಡ್ಯಂತ್ರ’ ನಡೆದಿದೆ ಎಂದು ಹೇಳಿದ್ದಾರೆ.
“ಹರಿಯಾಣದಲ್ಲಿ 2 ಕೋಟಿ ಮತದಾರರಿದ್ದಾರೆ, ಅವರಲ್ಲಿ 25 ಲಕ್ಷ ನಕಲಿ ಮತದಾರರು. ನಮ್ಮ ತಂಡ 5.21 ಲಕ್ಷ ನಕಲಿ ಮತದಾರರ ಮಾಹಿತಿಯನ್ನು ಪತ್ತೆಹಚ್ಚಿದೆ. ಹರಿಯಾಣದ ಪ್ರತಿ ಎಂಟು ಮತದಾರರಲ್ಲಿ ಒಬ್ಬರು ನಕಲಿ” ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಮತದಾರರ ಪಟ್ಟಿಯಲ್ಲಿನ ಆಪಾದಿತ ವ್ಯತ್ಯಾಸಗಳನ್ನು ರಾಹುಲ್ ಗಾಂಧಿ ಸ್ಕ್ರೀನ್ ಮೂಲಕ ವಿವರಿಸಿದ್ದಾರೆ. ಅದರಲ್ಲಿ ಅವರು ತೋರಿಸಿದ ಮಹಿಳೆಯೊಬ್ಬರ ಫೋಟೋ ಗಮನಾರ್ಹವಾಗಿತ್ತು.
“ತಾನು ತೋರಿಸಿರುವುದು ಬ್ರೆಝಿಲ್‌ನ ಮಾಡೆಲ್ ಒಬ್ಬರ ಫೋಟೋ. ಸೀಮಾ, ಸ್ವೀಟಿ, ಸರಸ್ವತಿ, ರಶ್ಮಿ, ವಿಮಲಾ ಮುಂತಾದ ವಿಭಿನ್ನ ಹೆಸರುಗಳಲ್ಲಿ ಈ ಮಹಿಳೆಯ ಫೋಟೋ ಹರಿಯಾಣದ ಮತದಾರರ ಪಟ್ಟಿಯಲ್ಲಿ ಹಲವು ಬಾರಿ ಕಾಣಿಸಿಕೊಂಡಿದೆ. ಇವರು ಹರಿಯಾಣದ 10 ವಿಭಿನ್ನ ಬೂತ್‌ಗಳಲ್ಲಿ 22 ಬಾರಿ ಮತ ಚಲಾಯಿಸಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
𝐖𝐡𝐚𝐭 𝐢𝐬 𝐚 𝐁𝐫𝐚𝐳𝐢𝐥𝐢𝐚𝐧 𝐰𝐨𝐦𝐚𝐧 𝐝𝐨𝐢𝐧𝐠 𝐨𝐧 𝐇𝐚𝐫𝐲𝐚𝐧𝐚'𝐬 𝐞𝐥𝐞𝐜𝐭𝐨𝐫𝐚𝐥 𝐥𝐢𝐬𝐭?
❓ Who is this lady?
❓ How old is she?
❓ Where is she from?She voted 22 times in Haryana, across 10 different booths in the state, using multiple names: Seema,… pic.twitter.com/3VHdBDLc14
— Congress (@INCIndia) November 5, 2025
ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬುಡಮೇಲು ಮಾಡಲು ಬಿಜೆಪಿ ‘ಯೋಜಿತ ಕಾರ್ಯಾಚರಣೆ’ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“ಎಲ್ಲಾ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿದ್ದರೂ, ನಮ್ಮ ಪಕ್ಷಕ್ಕೆ ಸೋಲಾಯಿತು. ಹರಿಯಾಣದ ಇತಿಹಾಸದಲ್ಲಿ ಮೊದಲ ಬಾರಿಗೆ ಅಂಚೆ ಮತಪತ್ರಗಳು ಚಲಾವಣೆಯಾದ ಮತಗಳಿಗೆ ಹೊಂದಾಣಿಕೆಯಾಗಿಲ್ಲ. ಕಾಂಗ್ರೆಸ್‌ನ ಅಭೂತಪೂರ್ವ ಗೆಲುವನ್ನು ಸೋಲಾಗಿ ಪರಿವರ್ತಿಸಲು ದೊಡ್ಡ ಷಡ್ಯಂತ್ರ ನಡೆಸಲಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಚುನಾವಣೆಯ ನಂತರ ಹರಿಯಾಣದ ಹಾಲಿ ಸಿಎಂ ನಯಾಬ್ ಸಿಂಗ್ ಸೈನಿ ಅವರು ನಗು ನಗುತ್ತಾ ಸುದ್ದಿಗೋಷ್ಠಿ ನಡೆಸಿದ ವಿಡಿಯೋ ತೋರಿಸಿದ ರಾಹುಲ್ ಗಾಂಧಿ, “ಕಾಂಗ್ರೆಸ್ ಫುಲ್ ಸ್ವೀಪ್ ಗಳಿಸುತ್ತದೆ ಎಂದು ವರದಿಗಳು ಬಂದರೂ, ಸೈನಿ ಅವರ ಮುಖದಲ್ಲಿ ನಗು ಮತ್ತು ಅವರು ಮಾತನಾಡಿ ರೀತಿ ಗಮನಿಸಿ. ಇದು ಚುನಾವಣೆಯ ಎರಡು ದಿನಗಳ ನಂತರದ ವಿಡಿಯೋ” ಎಂದಿದ್ದಾರೆ.
ಉತ್ತರ ಪ್ರದೇಶ ಮತ್ತು ಹರಿಯಾಣ ಎರಡರಲ್ಲೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮನೆ ಸಂಖ್ಯೆ 150ರಲ್ಲಿ ವಾಸಿಸುವ ಪಲ್ವಾಲ್ ಜಿಲ್ಲಾ ಪರಿಷತ್ತಿನ ಉಪಾಧ್ಯಕ್ಷ ಹಾಗೂ ಬಿಜೆಪಿ ನಾಯಕನ ವಿಳಾಸದಲ್ಲಿ 66 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯ ಮನೆಯಲ್ಲಿ 500 ಮತದಾರರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ದಾಲ್ಚಂದ್ ಅವರು ಯುಪಿ ಮತ್ತು ಹರಿಯಾಣ ಎರಡರಲ್ಲೂ ಮತ ಚಲಾಯಿಸುತ್ತಿದ್ದಾರೆ. ಮಥುರಾದ ಬಿಜೆಪಿ ಸರಪಂಚ್ ಪ್ರಹ್ಲಾದ್ ಕೂಡ ಅದನ್ನೇ ಮಾಡುತ್ತಿದ್ದಾರೆ. ಈ ರೀತಿಯ ಸಂಖ್ಯೆ ಸಾವಿರಾರು ಇದೆ ಎಂದಿದ್ದಾರೆ.
‘ಮನೆ ಸಂಖ್ಯೆ. ಶೂನ್ಯ’ ಎಂದು ಪಟ್ಟಿ ಮಾಡಲಾದ ವಿಳಾಸಗಳಲ್ಲಿನ ಅಕ್ರಮಗಳ ಬಗ್ಗೆಯೂ ರಾಹುಲ್ ಗಾಂಧಿ ಗಮನಸೆಳೆದಿದ್ದಾರೆ. ಮನೆ ಸಂಖ್ಯೆ ಶೂನ್ಯ ಎನ್ನುವುದು ವಸತಿ ರಹಿತರಿಗೆ ಮೀಸಲಾದ ಪದನಾಮವಾಗಿದೆ.
ಹರಿಯಾಣ ಚುನಾವಣೆಯಲ್ಲಿ ದೊಡ್ಡ ಮಟ್ಟದ ‘ಮತಗಳ್ಳತನ’ : ದಾಖಲೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ


