ಬಿಹಾರದಲ್ಲಿ ಮೊದಲ ಹಂತದ ಮತದಾನದ ಮುನ್ನಾ ದಿನವಾದ ಇಂದು (ನವೆಂಬರ್ 5, 2025) ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದ ‘ಮತಗಳ್ಳತನ’ ನಡೆದಿದೆ ಎಂಬ ‘ಹೈಡ್ರೋಜನ್ ಬಾಂಬ್’ ಸಿಡಿಸಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಇದೇ ರೀತಿಯ ಎರಡು ಸುದ್ದಿಗೋಷ್ಠಿಗಳನ್ನು ನಡೆಸಿದ್ದ ರಾಹುಲ್ ಗಾಂಧಿ, ಬೆಂಗಳೂರಿನ ಮಹದೇವಪುರ ಮತ್ತು ಕಲಬುರಗಿಯ ಆಳಂದ ಕ್ಷೇತ್ರಗಳ ಮತಗಳ್ಳತನದ ದಾಖಲೆಗಳನ್ನು ಬಿಡುಗಡೆಗೊಳಿಸಿದ್ದರು.
ಕೆಲ ತಿಂಗಳ ಹಿಂದೆ ಮತಗಳ್ಳತನದ ವಿರುದ್ದ ಬಿಹಾರದಲ್ಲಿ ‘ವೋಟರ್ ಅಧಿಕಾರ್ ಯಾತ್ರೆ’ ನಡೆಸಿದ್ದ ರಾಹುಲ್ ಗಾಂಧಿ, ಮತಗಳ್ಳತನ ಕುರಿತ ಹೈಡ್ರೋಜನ್ ಬಾಂಬ್ ಶೀಘ್ರದಲ್ಲೇ ಬರಲಿದೆ ಎಂದು ಹೇಳಿದ್ದರು. ಅದರಂತೆ ಇಂದು ‘ಹೆಚ್ ಫೈಲ್ಸ್’ (ಹರಿಯಾಣ ಫೈಲ್ಸ್ ಅಥವಾ ಹೈಡ್ರೋಜನ್ ಫೈಲ್ಸ್) ಎಂಬ ಶೀರ್ಷಿಕೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಬಿಜೆಪಿ ಚುನಾವಣಾ ಆಯೋಗದ ಜೊತೆಗೂಡಿ ಮತಗಳ್ಳತನ ನಡೆಸುತ್ತಿದೆ ಎಂಬ ತಮ್ಮ ಆರೋಪವನ್ನು ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ನಾನು ಹೇಳುತ್ತಿರುವುದು 100ರಷ್ಟು ಸತ್ಯ. ವಿರೋಧ ಪಕ್ಷ ನಾಯಕ ಎಂಬುವುದನ್ನು ತಲೆಯಲ್ಲಿ ಇಟ್ಟುಕೊಂಡು ಬಹಳ ಜವಾಬ್ದಾರಿಯಿಂದ ಈ ಆರೋಪಗಳನ್ನು ಮಾಡುತ್ತಿದ್ದೇನೆ ಎಂದಿದ್ದಾರೆ.
“ನಾನು ಚುನಾವಣಾ ಆಯೋಗವನ್ನು ಪ್ರಶ್ನಿಸುತ್ತಿದ್ದೇನೆ, ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರಶ್ನಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
ಹರಿಯಾಣ ಚುನಾವಣೆಯಲ್ಲಿ ಇತರ ಮತಗಳಿಗಿಂತ ಅಂಚೆ ಮತಗಳ ಫಲಿತಾಂಶಗಳು ‘ಇತಿಹಾಸದಲ್ಲಿ ಮೊದಲ ಬಾರಿಗೆ’ ವ್ಯತಿರಿಕ್ತವಾಗಿ ಬಂದಿವೆ ಎಂದು ರಾಹುಲ್ ತಿಳಿಸಿದ್ದಾರೆ.
ಮತದಾನದ ಕೆಲವು ದಿನಗಳ ನಂತರ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ನಡೆಸಿದ ಪತ್ರಿಕಾಗೋಷ್ಠಿಯ ಕ್ಲಿಪ್ ಅನ್ನು ತೋರಿಸಿ ರಾಹುಲ್ ಗಾಂಧಿ, ಹಲವಾರು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಧಿಸುವ ಮುನ್ಸೂಚನೆ ನೀಡಿದ್ದರೂ, ಸೈನಿ ಅವರು ಇಷ್ಟೊಂದು ಆತ್ಮವಿಶ್ವಾಸದಿಂದ ಮತ್ತು ನಗುತ್ತಾ ಇದ್ದಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಎಸ್‌ಐಆರ್‌ಗೆ ತೀವ್ರ ವಿರೋಧ : ಕೋಲ್ಕತ್ತಾದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ ಮಮತಾ ಬ್ಯಾನರ್ಜಿ


