ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ 26 ಜನರಲ್ಲಿ ಒಬ್ಬರಾದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಮನೆಗೆ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ (ಮೇ.6) ಭೇಟಿ ನೀಡಿದರು.
ಹರಿಯಾಣದ ಕರ್ನಾಲ್‌ನಲ್ಲಿರುವ ವಿನಯ್ ನರ್ವಾಲ್ ಮನೆಗೆ ಮಧ್ಯಾಹ್ನ 12.30ರ ಸುಮಾರಿಗೆ ತೆರಳಿದ ರಾಹುಲ್ ಗಾಂಧಿ ಕುಟುಂಬ ಸದಸ್ಯರನ್ನು ಭೇಟಿಯಾಗಿ ಅಪರಾಹ್ನ 2.15 ಸುಮಾರಿಗೆ ಅಲ್ಲಿಂದ ಹೊರಟರು. ಲೆಫ್ಟಿನೆಂಟ್ ನರ್ವಾಲ್ ಅವರ ಪತ್ನಿ ಹಿಮಾಂಶಿ, ತಂದೆ ರಾಜೇಶ್ ಕುಮಾರ್, ತಾಯಿ ಆಶಾ ದೇವಿ, ಸಹೋದರಿ ಸೃಷ್ಟಿ ಮತ್ತು ಅಜ್ಜ ಹವಾ ಸಿಂಗ್ ಅವರಿಗೆ ರಾಹುಲ್ ಗಾಂಧಿ ಸಾಂತ್ವನ ಹೇಳಿದ್ದಾರೆ.
ರಾಹುಲ್ ಗಾಂಧಿ ಭೇಟಿ ನೀಡಿದ ವೇಳೆ ಲೆಫ್ಟಿನೆಂಟ್ ನರ್ವಾಲ್ ಅವರ ಮನೆಯಲ್ಲಿ ಕಾಂಗ್ರೆಸ್‌ನ ರೋಹ್ತಕ್ ಸಂಸದ ದೀಪೇಂದರ್ ಹೂಡಾ ಮತ್ತು ಹರಿಯಾಣ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಉದಯ್ ಭನ್ ಹಾಜರಿದ್ದರು. ಮನೆಯ ಹೊರಗೆ ಹೆಚ್ಚಿನ ಸಂಖ್ಯೆಯ ಜನರು ಮತ್ತು ವರದಿಗಾರರು ಜಮಾಯಿಸಿದ್ದರು, ಆದರೆ ರಾಹುಲ್ ಗಾಂಧಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.
पहलगाम हमले में शहीद हुए लेफ्टिनेंट विनय नरवाल जी के शोकाकुल परिवार से मिलकर उनका दुख बांटा, उन्हें सांत्वना दी। अपार दुख में भी उनका हौसला और साहस देश के लिए एक संदेश है – हमें एकजुट रहना है।
पूरा देश शहीदों के परिवारों के साथ खड़ा है। सरकार को विपक्ष का पूरा समर्थन है -…
— Rahul Gandhi (@RahulGandhi) May 6, 2025
ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಹೂಡಾ, “ರಾಹುಲ್ ಜಿ ನಮ್ಮ ಪ್ರೀತಿಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು. ದುಃಖಿತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅವರು ಏನು ಹೇಳಿದರು ಎಂಬುದನ್ನು ಮಾಧ್ಯಮಗಳಿಗೆ ಬಹಿರಂಗಪಡಿಸುವುದಿಲ್ಲ. ನಾವು ಒಬ್ಬ ಮಗನನ್ನು, ನಮ್ಮ ರಾಷ್ಟ್ರದ ವೀರ ಸೈನಿಕನನ್ನು ಕಳೆದುಕೊಂಡಿದ್ದೇವೆ. ಸರ್ಕಾರ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಹೇಳಿದ್ದಾರೆ.
ಹರಿಯಾಣದ ಬಿಜೆಪಿ ಸರ್ಕಾರ ಮೃತ ವಿನಯ್ ನರ್ವಾಲ್ ಅವರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಆರ್ಥಿಕ ನೆರವು ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಘೋಷಿಸಿದೆ. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಅವರ ಸಂಪುಟ ಸಹೋದ್ಯೋಗಿಗಳು ಮತ್ತು ಹಲವಾರು ಹಿರಿಯ ಬಿಜೆಪಿ ನಾಯಕರು ನರ್ವಾಲ್ ಅವರ ಹುಟ್ಟೂರು ಕರ್ನಾಲ್‌ನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಕೇವಲ ಏಳು ದಿನಗಳ ಮೊದಲು ಲೆಫ್ಟಿನೆಂಟ್ ನರ್ವಾಲ್ ಮತ್ತು ಹಿಮಾಂಶಿ ಅವರು ಮದುವೆಯಾಗಿದ್ದರು. ಏಪ್ರಿಲ್ 21ರಂದು ಹನಿಮೂನ್‌ಗಾಗಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಏಪ್ರಿಲ್ 22ರಂದು ನಡೆದ ದಾಳಿಯ ನಂತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆದ ಮೊದಲ ಕ್ಲಿಪ್ ಹಿಮಾಂಶಿ ಅವರದ್ದಾಗಿತ್ತು. ಅದರಲ್ಲಿ ಅವರು “ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡು ಹಾರಿಸುವ ಮೊದಲು ಅವರ ಧರ್ಮದ ಬಗ್ಗೆ ಕೇಳಿದ್ದಾರೆ” ಎಂದು ಹೇಳಿದ್ದರು.
ಅವರ ಈ ಹೇಳಿಕೆಯನ್ನು ಮುಂದಿಟ್ಟಕೊಂಡು ಹಲವು ಮಾಧ್ಯಮಗಳು ದೇಶದ ಮುಸ್ಲಿಮರು, ವಿಶೇಷವಾಗಿ ಕಾಶ್ಮೀರಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವ, ಮುಸ್ಲಿಮರನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡಿತು.
ಆದರೆ, ಮೇ 1ರಂದು ಮೃತ ವಿನಯ್ ನರ್ವಾಲ್ ಅವರ 27ನೇ ವರ್ಷದ ಜನ್ಮ ದಿನಾಚರಣೆಯ ಪ್ರಯುಕ್ತ ಹರಿಯಾಣದ ಕರ್ನಾಲ್‌ನಲ್ಲಿ ಅಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ್ದ ಪತ್ನಿ ಹಿಮಾಂಶಿ, “ಜನರು ಮುಸ್ಲಿಮರು ಮತ್ತು ಕಾಶ್ಮೀರದ ಜನತೆಯ ವಿರುದ್ಧ ಇರಬೇಕೆಂದು ನಾವು ಬಯಸುವುದಿಲ್ಲ, ನಮಗೆ ಶಾಂತಿ ಬೇಕು, ನಮಗೆ ನ್ಯಾಯ ಬೇಕು” ಎಂದಿದ್ದರು.
ಹಿಮಾಂಶಿ ಅವರು ದೇಶದ ಸಾಮರಸ್ಯದ ಪರ ನೀಡಿದ ಈ ಹೇಳಿಕೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಹಿಮಾಂಶಿ ಅವರ ವೈಯುಕ್ತ ವಿಚಾರಗಳನ್ನು ಎಳೆದು ತಂದು ಅವರನ್ನು ತೇಜೋವಧೆ ಮಾಡಲಾಗುತ್ತಿದೆ.
ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರು ಸಾವಿಗೂ ಮುನ್ನ ಕೊಚ್ಚಿಯಲ್ಲಿ ನಿಯೋಜನೆಗೊಂಡಿದ್ದರು. ಏಪ್ರಿಲ್ 19ರಂದು ಮಸ್ಸೂರಿಯಲ್ಲಿ ಅವರ ಮದುವೆ ನಡೆದಿತ್ತು ಈ ಹಿನ್ನೆಲೆ ಅವರು ಮಾರ್ಚ್ 28ರಿಂದ ರಜೆಯ ಮೇಲೆ ಮನೆಗೆ ತೆರಳಿದ್ದರು. ಏಪ್ರಿಲ್ 20ರಂದು, ಕರ್ನಾಲ್‌ನಲ್ಲಿ ಮದುವೆಯ ಆರತಕ್ಷತೆ ಬಳಿಕ, ನವ ದಂಪತಿ ಗುರುಗಾಂವ್‌ನ ಹಿಮಾಂಶಿ ಅವರ ಮನೆಗೆ ಹೋಗಿದ್ದರು. ಅಲ್ಲಿಂದ ಏಪ್ರಿಲ್ 21ರಂದು ಶ್ರೀನಗರಕ್ಕೆ ವಿಮಾನ ಹತ್ತಿದ್ದರು.


