ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಮತ್ತು ಅಮೇಥಿ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎಂಬುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ಎರಡೂ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ್ದು, ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸ್ಪರ್ಧಿಸಲಿದ್ದು, ಅಮೇಥಿ ಕ್ಷೇತ್ರದಿಂದ ಕಿಶೋರಿ ಲಾಲ್ ಶರ್ಮಾ ಅವರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ.
ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿರುವ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಯಿಂದ ತೆರವಾದ ರಾಯ್ ಬರೇಲಿ ಕ್ಷೇತ್ರದಿಂದ ಕೂಡ ಕಣಕ್ಕಿಳಿಯಲಿದ್ದಾರೆ. ಅಮೇಥಿಯನ್ನು ಮರಳಿ ಗೆಲ್ಲಲು ಸಂಪೂರ್ಣ ಪ್ರಯತ್ನ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದ ರಾಹುಲ್ ಗಾಂಧಿ ಅವರನ್ನು ರಾಯ್ಬರೇಲಿಯಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ರಾಯ್ಬರೇಲಿ ಮತ್ತು ವಯನಾಡ್ ಎರಡೂ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸಿದರೆ ಒಂದು ಸ್ಥಾನವನ್ನು ಮುಂದಕ್ಕೆ ತೆರವು ಮಾಡಬೇಕಾದೀತು. ರಾಯ್ಬರೇಲಿ ದಶಕಗಳ ಹಿಂದಿನ ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದರೆ, ವಯನಾಡ್ ಕಾಂಗ್ರೆಸ್ ಭದ್ರಕೋಟೆಯಾಗಿದೆ. ವಾರಗಳ ಕಾಲ ಅಳೆದು ತೂಗಿ ಶುಕ್ರವಾರ ಕಾಂಗ್ರೆಸ್ ಈ ನಿರ್ಧಾರವನ್ನು ಪ್ರಕಟಿಸಿದೆ.
ಮೇ 20ರಂದು ಐದನೇ ಹಂತದ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಇಬ್ಬರೂ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ 2019ರಲ್ಲಿ ಅಮೇಥಿಯಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಲಾಗಿದೆ. ಅಮೇಥಿ ಅಥವಾ ರಾಯ್ ಬರೇಲಿ ಯಾವುದಾದರು ಒಂಡು ಕ್ಷೇತ್ರದಿಂದ ರಾಬರ್ಟ್ ವಾದ್ರಾ ಅವರು ಕಣಕ್ಕಿಳಿಯಲಿದ್ದಾರೆ ಎಂದು ಈ ಮೊದಲು ಸುದ್ದಿಯಾಗಿತ್ತು. ಇದಲ್ಲದೆ ರಾಯ್ ಬರೇಲಿಯಿಂದ ಪ್ರಿಯಾಂಕ ಗಾಂಧಿ ಸ್ಪರ್ಧೆಯ ಬಗ್ಗೆ ಕೂಡ ಚರ್ಚೆ ನಡೆದಿತ್ತು. ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಮೂರನೇ ಹಂತದ ಮತದಾನ ಮೇ.7ರಂದು ನಡೆಯಲಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಜೂ.4ರಂದು ಪ್ರಕಟವಾಗಲಿದೆ.
ಇದನ್ನು ಓದಿ: ಪಶ್ಚಿಮ ಬಂಗಾಳದ ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ದೂರು ದಾಖಲು


