ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯದಲ್ಲಿ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.
ಜಾತಿ ಆಧಾರಿತ ತಾರತಮ್ಯದಿಂದಾಗಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಎದುರಿಸಿದ ಅವಮಾನಕರ ಅನುಭವಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, “ಇಂದಿಗೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದಲಿತ, ಆದಿವಾಸಿ ಮತ್ತು ಒಬಿಸಿ ಸಮುದಾಯಗಳ ಲಕ್ಷಾಂತರ ವಿದ್ಯಾರ್ಥಿಗಳು ಇಂತಹ ಕ್ರೂರ ತಾರತಮ್ಯವನ್ನು ಎದುರಿಸಬೇಕಾಗಿರುವುದು ನಾಚಿಕೆಗೇಡಿನ ಸಂಗತಿ” ಎಂದು ಹೇಳಿದ್ದಾರೆ.
ಏಪ್ರಿಲ್ 16ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ರಾಹುಲ್ ಗಾಂಧಿ ರಾಜ್ಯದಲ್ಲಿ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೊಳಿಸುವಂತೆ ಮನವಿ ಮಾಡಿದ್ದರು.
“ರೋಹಿತ್ ವೇಮುಲ, ಪಾಯಲ್ ತದ್ವಿ ಮತ್ತು ದರ್ಶನ್ ಸೋಲಂಕಿಯಂತಹ ಪ್ರತಿಭಾವಂತ ಯುವಜನರ ಹತ್ಯೆ ಒಪ್ಪುವಂತದಲ್ಲ. ಇದಕ್ಕೆ ಅಂತ್ಯ ಹಾಡುವ ಸಮಯ ಇದು. ಡಾ. ಬಿ.ಆರ್ ಅಂಬೇಡ್ಕರ್, ರೋಹಿತ್ ವೇಮುಲ ಮತ್ತು ಲಕ್ಷಾಂತರ ಇತರರು ಅನುಭವಿಸಿರುವುದನ್ನು ಭಾರತದ ಯಾವುದೇ ಮಗು ಎದುರಿಸದಂತೆ ತಡೆಯಲು ‘ರೋಹಿತ್ ವೇಮುಲ ಕಾಯ್ದೆ’ಯನ್ನು ಜಾರಿಗೆ ತರಬೇಕೆಂದು ನಾನು ತೆಲಂಗಾಣ ಸರ್ಕಾರವನ್ನು ಒತ್ತಾಯಿಸುತ್ತೇನೆ” ಎಂದು ರೇವಂತ್ ರೆಡ್ಡಿಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ಜನವರಿ 17, 2016ರಂದು ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದು, ಭಾರತೀಯ ಉನ್ನತ ಶಿಕ್ಷಣದಲ್ಲಿನ ಜಾತಿ ಆಧಾರಿತ ತಾರತಮ್ಯವನ್ನು ಎತ್ತಿ ತೋರಿಸಿತ್ತು.
ಅಂಬೇಡ್ಕರ್ ವಿದ್ಯಾರ್ಥಿ ಸಂಘದ (ಎಎಸ್‌ಎ) ಸದಸ್ಯರಾಗಿದ್ದ ವೇಮುಲ ಅವರನ್ನು ಬಲಪಂಥೀಯ ವಿದ್ಯಾರ್ಥಿ ಗುಂಪಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಜೊತೆಗಿನ ವಿವಾದದ ನಂತರ ಇತರ ನಾಲ್ವರೊಂದಿಗೆ ಅಮಾನತುಗೊಳಿಸಲಾಗಿತ್ತು. ಅಮಾನತು ಮತ್ತು ಫೆಲೋಶಿಪ್ ರದ್ದತಿಯು ಕ್ಯಾಂಪಸ್‌ನಲ್ಲಿ ವೇಮುಲ ಅವರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಪ್ರತ್ಯೇಕತೆಗೆ ತಳ್ಳಿತ್ತು. ವೇಮುಲ ಸಾವನ್ನು “ಸಾಂಸ್ಥಿಕ ಕೊಲೆ” ಎಂದು ಕರೆಯಲಾಗಿದೆ.
ರೋಹಿತ್ ವೇಮುಲ ತಮ್ಮ ಹೃದಯಸ್ಪರ್ಶಿ ಆತ್ಮಹತ್ಯೆ ಪತ್ರದಲ್ಲಿ, “ಹುಟ್ಟು ನನ್ನ ಮಾರಣಾಂತಿಕ ಅಪಘಾತ” ಎಂದು ಬರೆದಿದ್ದರು. ಅವರ ಸಾವು ದೇಶದಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ಜಾತಿ ತಾರತಮ್ಯದ ವಿರುದ್ದ ಪ್ರತಿಭಟನೆಗೆ ಕಿಚ್ಚು ಹಚ್ಚಿತ್ತು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯದ ಬಗ್ಗೆ ತೀವ್ರ ಚರ್ಚೆಗಳನ್ನು ಹುಟ್ಟುಹಾಕಿತ್ತು. ನಂತರ ಸರ್ಕಾರಿ ಸಮಿತಿಯೊಂದು ಅವರ ದಲಿತ ಸ್ಥಾನಮಾನವನ್ನು ಪ್ರಶ್ನಿಸಿದರೂ, ಅನೇಕ ಹೋರಾಟಗಾರರು ಮತ್ತು ವಿದ್ವಾಂಸರು ರೋಹಿತ್ ವೇಮುಲ ಸಾವನ್ನು ವ್ಯವಸ್ಥಿತ ಜಾತಿ ದಬ್ಬಾಳಿಕೆಯ ಸಂಕೇತವೆಂದು ಪರಿಗಣಿಸುತ್ತಿದ್ದಾರೆ.
ರೋಹಿತ್ ವೇಮುಲ ಅವರ ಮರಣದ ನಂತರ, ರಾಹುಲ್ ಗಾಂಧಿ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳು ಎದುರಿಸುತ್ತಿರುವ ಜಾತಿ ಆಧಾರಿತ ತಾರತಮ್ಯದ ವಿರುದ್ಧ ಕಾನೂನು ತರುವುದಾಗಿ ಭರವಸೆ ನೀಡಿದ್ದರು.
2022ರಲ್ಲಿ ಹೈದರಾಬಾದ್‌ನಲ್ಲಿ ನಡೆದ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ’ ಯಾತ್ರೆಯಲ್ಲಿ ರೋಹಿತ್ ಅವರ ತಾಯಿ ರಾಧಿಕಾ ವೇಮುಲ ಕೂಡ ಭಾಗವಹಿಸಿದ್ದರು. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆಂದು ಊಹಿಸಲಾಗಿತ್ತು. ಆದರೆ, ಅವರ ಸೇರ್ಪಡೆಗೆ ಸ್ಥಳೀಯ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು.
ಕಾಯ್ದೆ ಜಾರಿಗೆ ಮುಂದಾದ ಕರ್ನಾಟಕ
ರಾಹುಲ್ ಗಾಂಧಿ ಪತ್ರದ ಬೆನ್ನಲ್ಲೇ ರೋಹಿತ್ ವೇಮುಲ ಕಾಯ್ದೆ ಜಾರಿಗೆ ಕರ್ನಾಟಕ ಸರ್ಕಾರ ಮುಂದಾಗಿದೆ ಎಂದು ಪ್ರಜಾವಾಣಿ ಪತ್ರಿಕೆ ಮಂಗಳವಾರ ವರದಿ ಮಾಡಿದೆ. ‘ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯದಿಂದ ರಕ್ಷಣೆ) (ಶಿಕ್ಷಣ ಹಕ್ಕು ಮತ್ತು ಘನತೆ) ಮಸೂದೆ– 2025’ರ ಕರಡು ಕಾನೂನು ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ವರದಿ ಹೇಳಿದೆ.
ಇಶಾ ಫೌಂಡೇಶನ್ ಶಾಲೆಯ ನಾಲ್ವರು ಸದಸ್ಯರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು


