“ನರೇಂದ್ರ ಮೋದಿ ಅವರು‘ ಮೇಕ್ ಇನ್ ಇಂಡಿಯಾ ’ಎಂದು ಹೇಳಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ನೀವು ಎಲ್ಲಿ ನೋಡಿದರೂ ಅದು ‘ರೇಪ್ ಇನ್ ಇಂಡಿಯಾ’ ಆಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರೊಬ್ಬರು ಮಹಿಳೆಯ ಮೇಲೆ ಅತ್ಯಾಚಾರವೆಸಗಿದರು, ನಂತರ ಸಂತ್ರಸ್ತೆ ಅಪಘಾತಕ್ಕೀಡಾದರು. ಆದರೆ ನರೇಂದ್ರ ಮೋದಿ ಅವರು ಈ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ” ಎಂದು ಜಾರ್ಖಂಡ್‌ನ ಗೊಡ್ಡಾದಲ್ಲಿ ಗುರುವಾರ ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿ ಹೇಳಿದ್ದರು.
ರಾಹುಲ್ ಗಾಂಧಿಯವರ ‘ರೇಪ್ ಇನ್ ಇಂಡಿಯಾ’ ಎಂಬ ಹೇಳಿಕೆ ನೀಡಿದ್ದಕ್ಕಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ಲೋಕಸಭೆಯಲ್ಲಿ ಭಾರೀ ಗದ್ದಲ ಉಂಟುಮಾಡಿದ್ದರು. “ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ನಾಯಕ ಭಾರತೀಯ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಬೇಕೆಂದು ಸ್ಪಷ್ಟ ಕರೆ ನೀಡುತ್ತಿದ್ದಾನೆ. ಇದು ದೇಶದ ಜನರಿಗೆ ರಾಹುಲ್ ಗಾಂಧಿಯವರ ಸಂದೇಶವೇ? ಅವರಿಗೆ ಶಿಕ್ಷೆಯಾಗಬೇಕು, ಅವರು ಕೂಡಲೆ ಕ್ಷಮೇ ಕೇಳಬೇಕೆಂದು” ಪಟ್ಟು ಹಿಡಿದಿದ್ದರು.
ರಾಜ್ಯಸಭೆಯಲ್ಲಿ ಸದಸ್ಯರು ರಾಹುಲ್ ಗಾಂಧಿಯವರ ಹೇಳಿಕೆಗೆ ವಿರುದ್ಧವಾಗಿ ‘ರಾಹುಲ್ ಗಾಂಧಿ ಮಾಫಿ ಮಾವು’ ಎಂಬ ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಬಹಳ ಕಾಲ ಸದನವನ್ನು ಮುಂದೂಡಬೇಕಾಗಿ ಬಂದಿತ್ತು.
ಇದಕ್ಕೆ ಸರಿಯಾಗಿ ತಿರುಗೇಟು ನೀಡಿದರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ 2013ರ ಚುನಾವಣಾ ಸಂದರ್ಭದಲ್ಲಿ ನರೇಂದ್ರ ಮೋದಿಯವರು “ನೀವು ದಿಲ್ಲಿಯನ್ನು ರೇಪ್ ಕ್ಯಾಪಿಟಲ್ ಮಾಡಿದ್ದೀರಿ, ದೇಶವು ಇಂದು ವಿಶ್ವದ ಎದುರು ತಲೆತಗ್ಗಿಸುವಂತಾಗಿದೆ” ಎಂದು ಹೇಳಿದ್ದರ ವಿಡಿಯೋ ಕ್ಲಿಪ್ ಅನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ಇದಕ್ಕೆ ಮೊದಲು ನರೇಂದ್ರ ಮೋದಿಯವರು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ.
Modi should apologise.
1. For burning the North East.
2. For destroying India’s economy.
3. For this speech, a clip of which I'm attaching. pic.twitter.com/KgPU8dpmrE
— Rahul Gandhi (@RahulGandhi) December 13, 2019
ಮೋದಿ ಕ್ಷಮೆಯಾಚಿಸಬೇಕು.
1. ಈಶಾನ್ಯವನ್ನು ಸುಡುತ್ತಿರುವುದಕ್ಕಾಗಿ,
2. ಭಾರತದ ಆರ್ಥಿಕತೆಯನ್ನು ನಾಶಮಾಡುತ್ತಿರುವುದಕ್ಕಾಗಿ
3. ಈ ಭಾಷಣಕ್ಕಾಗಿ, ನಾನು ಲಗತ್ತಿಸುವ ವಿಡಿಯೋ ನೋಡಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ಇದೊಂದು ಸಾಮಾನ್ಯ ಹೇಳಿಕೆಯಾಗಿದ್ದು ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳುವ ಮೂಲಕ ರಾಹುಲ್ ಗಾಂಧಿ ಬೆನ್ನಿಗೆ ನಿಂತಿದ್ದಾರೆ.
ದೇಶಾದ್ಯಂತ ನಡೆಯುತ್ತಿರುವ ಸಿಎಬಿ ಕಾಯ್ದೆ ವಿರೋಧಿ ಬೃಹತ್ ಹೋರಾಟವನ್ನು ಮರೆಮಾಚಲು ಬಿಜೆಪಿ ಈ ಷಡ್ಯಂತ್ರ ನಡೆಸಿದೆ ಎಂದು ಅವರು ದೂರಿದ್ದಾರೆ.


